ಬೆಂಗಳೂರು: “ಮಲ್ಲೇಶ್ವರದ ಮಂತ್ರಿಮಾಲ್‌ನ ಇಡೀ ಕಟ್ಟಡದ ದೃಢತೆಯನ್ನೇ ಪರಿಶೀಲನೆ ನಡೆಸುವ ಅಗತ್ಯವಿದೆ,” ಎಂದು ತಜ್ಞರ ಸಮಿತಿ ವರದಿ ನೀಡಿದೆ. ಹೀಗಾಗಿ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮಾಲ್ ಪುನಾರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಮಂತ್ರಿಮಾಲ್ ಕಟ್ಟಡದ ಗೋಡೆ ಕುಸಿತ ಪ್ರಕರಣ ಪರಿಶೀಲನೆಗೆ ಬಿಬಿಎಂಪಿ ರಚಿಸಿದ್ದ ತಜ್ಞರ ಸಮಿತಿ ಗುರುವಾರ ಆಯುಕ್ತರಿಗೆ ತಾಂತ್ರಿಕ ವರದಿ ಸಲ್ಲಿಕೆ ಮಾಡಿತು. ವರದಿ ಸ್ವೀಕರಿಸಿ ಮಾತನಾಡಿದ ಅವರು, “ಕಟ್ಟಡದ ಪೂರ್ಣ ಪರಿಶೀಲನೆ ನಡೆಸಿ ಸದೃಢತೆ ದಾಖಲೆಗಳನ್ನು ಸಲ್ಲಿಸುವವರೆಗೆ ಮಾಲ್ ಪುನರಾರಂಭಕ್ಕೆ ಅವಕಾಶ ನೀಡಲಾಗದು. ಮಂತ್ರಿಮಾಲ್ ಗೋಡೆ ಕುಸಿತ ಸ್ಥಳಕ್ಕೆ ನಾಲ್ಕು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿರುವ ತಜ್ಞರ ಸಮಿತಿ, 47 ಪುಟಗಳ ವರದಿ ನೀಡಿದೆ.
ಕುಸಿದ ಕಟ್ಟಡಕ್ಕೆ ಬಳಸಿದ ಸಮಾಗ್ರಿಗಳನ್ನು ತಜ್ಞರ ತಂಡ ಪ್ರಯೋಗಾಲಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿದೆ. ಆ ಪ್ರಕಾರ “ಮೂರನೇ ಮಹಡಿಯ ತುರ್ತು ನಿರ್ಗಮನ ಪಾಸೇಜ್ ಭಾಗದಲ್ಲಿ ಹವಾನಿಯಂತ್ರಣ ಯಂತ್ರದಿಂದ ಮತ್ತು ಕೊಳವೆಯಿಂದ ನೀರು ಸೋರಿಕೆಯಾಗಿ ಕ್ಯಾಂಟಿ ಲಿವರ್‌ಬೀಮ್‌ನ ಸರಳು ತುಕ್ಕು ಹಿಡಿದು, ಕಟ್ಟಡ ದುರ್ಬಲಗೊಂಡಿದೆ. ಇದೇ ಗೋಡೆ ಕುಸಿತಕ್ಕೆ ಕಾರಣ ಎಂದು ವರದಿ ಹೇಳುತ್ತಿದೆ,” ಎಂದು ತಿಳಿಸಿದರು.
“ಲಿವರ್‌ಬೀಮ್ ನಿರ್ಮಾಣದ ವೇಳೆ ಕಬ್ಬಿಣದ ಸರಳನ್ನು ತಪ್ಪಾಗಿ ಜೋಡಣೆ ಮಾಡಿರುವುದೂ ತುಕ್ಕು ಹಿಡಿಯಲು ಕಾರಣ. ಮಾಲ್‌ಗೆ ನಿತ್ಯ ಸಾವಿರಾರು ಜನರು ಭೇಟಿ ನೀಡುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ದೃಷ್ಟಿಯಿಂದ ಇಡೀ ಕಟ್ಟಡದ ಸದೃಢತೆಯ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗಾಗಿ ವರದಿಯನ್ನು ಮಾಲ್‌ನ ಮಾಲೀಕರಿಗೆ ಕಳುಹಿಸಿ ಇಡೀ ಕಟ್ಟಡದ ಸದೃಢತೆಯ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗುವುದು,” ಎಂದು ತಿಳಿಸಿದರು.
ಏನಾಗಿತ್ತು?
ಜ.16ರಂದು ಮಂತ್ರಿಮಾಲ್‌ನ 3ನೇ ಮಹಡಿಯ ಪ್ಯಾಸೇಟ್ ಗೋಡೆ ಕುಸಿದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ಬಳಿಕ ಮಾಲ್‌ಗೆ ನೀಡಿದ್ದ ಸ್ವಾದೀನಾನುಭವ ಪತ್ರವನ್ನು ವಾಪಸ್ ಪಡೆದಿದ್ದ ಪಾಲಿಕೆ ವಾಣಿಜ್ಯ ವಹಿವಾಟು ನಡೆಸದಂತೆ ಆದೇಶ ಹೊರಡಿಸಿತ್ತು. ಜತೆಗೆ ಘಟನೆಗೆ ಕಾರಣ ತಿಳಿಸಲು ಪಾಲಿಕೆ ನಗರ ಯೋಜನೆ ಅಪರ ಆಯುಕ್ತ ತಿಪ್ಪಣ್ಣರ ನೇತೃತ್ವದಲ್ಲಿ ನಾಲ್ವರು ಖಾಸಗಿ ಪರಿಣಿತರನ್ನೊಳಗೊಂಡ ತಜ್ಞರ ಸಮಿತಿ ರಚಿಸಿ 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು.