Advertisement

ಸಮಸ್ಯೆ ಪರಿಹರಿಸುವ ಏಕೈಕ ತಾಣ ದೇಗುಲ: ಅದಮಾರು ಶ್ರೀ

01:00 AM Mar 22, 2019 | Harsha Rao |

ಉಡುಪಿ: ಒಂದೆಡೆ ದೇಗುಲಗಳು ಜೀರ್ಣೋದ್ಧಾರಗೊಳ್ಳುತ್ತಿದ್ದರೆ, ಇನ್ನೊಂದೆಡೆ ಕೆಲವರು ದೇವರು, ದೇಗುಲ ಮೂಢನಂಬಿಕೆ ಎಂದು ಬೊಬ್ಬಿಡುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಮಸ್ಯೆ ಎದುರಾದಾಗ ಪರಿಹಾರ
ದೊರಕುವ ಏಕೈಕ ತಾಣವೇ ದೇಗುಲ.

Advertisement

ದೇವರು, ದೇಗುಲಗಳು ಗಾಢ ನಂಬಿಕೆಯೇ ಹೊರತು ಮೂಢ ನಂಬಿಕೆಯಲ್ಲ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.

ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ, ವಿಜ್ಞಾಪನ ಪತ್ರ ಬಿಡುಗಡೆ, ದಾರು ಮುಹೂರ್ತ ಮತ್ತು ಶಿಲಾ ಮುಹೂರ್ತ ಕಾರ್ಯಕ್ರಮ ದಲ್ಲಿ ಶ್ರೀಪಾದರು ಕಾಮಗಾರಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಕೊಡುವ ಕೈಗಳಾಗಲಿ
ಬೆಂಗಳೂರು ಬ್ರಹ್ಮರ್ಷಿ ಆನಂದ ಸಿದ್ಧಪೀಠದ ಡಾ| ಮಹರ್ಷಿ ಆನಂದ ಗುರೂಜಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ, ಇನ್ನೊಬ್ಬರಿಗೆ ಕೊಡುವ ಕೈಗಳು ನಮ್ಮದಾಗಬೇಕು. ಬೇಡುವ ಕೈಗಳು ನಮ್ಮದಾಗ ಬಾರದು. ದೇಗುಲ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದಾಗ ದೇವರು ಕಷ್ಟ ನೀಗಿಸುತ್ತಾನೆ ಎಂದರು.

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಟಿ. ಸುಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಡಾ| ಆನಂದ ಗುರೂಜಿ ದಾನಿಗಳಿಗೆ ವಿಜ್ಞಾಪನ ಪತ್ರ ವಿತರಿಸಿದರು.

Advertisement

ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್‌ ಗುಂಡಿಬೈಲು, ದತ್ತಿ ಇಲಾಖೆಯ ಪ್ರಭಾರ ಸಹಾಯಕ ಆಯುಕ್ತ ಪ್ರವೀಣ್‌ ಬಿ. ನಾಯ್ಕ, ಅರ್ಚಕರಾದ ಹರಿದಾಸ ಭಟ್‌, ಶ್ರೀನಿವಾಸ ಭಟ್‌, ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇಗುಲದ ಪ್ರಭಾಶಂಕರ ಪದ್ಮಶಾಲಿ, ಪುತ್ತೂರು ಶ್ರೀ ಭಗವತಿ ದುರ್ಗಾಪರಮೇಶ್ವರೀ ದೇಗುಲದ ರಾಮ ಭಟ್‌, ಬೈಲೂರು ಶ್ರೀ ಮಹಿಷ ಮರ್ದಿನೀ ದೇಗುಲದ ರಮೇಶ ಶೆಟ್ಟಿ, ಉದ್ಯಾವರ ಶಂಭುಕಲ್ಲು ದೇಗುಲದ ರಾಘವೇಂದ್ರ ಮಯ್ಯ, ಬನ್ನಂಜೆ ಮಹಾಲಿಂಗೇಶ್ವರ ದೇಗುಲದ ಮಾಧವ ಪೂಜಾರಿ, ಕೊಡವೂರು ಶಂಕರ ನಾರಾಯಣ ದೇಗುಲದ ಪ್ರಕಾಶ ಜಿ. 
ಕೊಡವೂರು, ನಿಟ್ಟೂರು ಸೋಮನಾಥೇಶ್ವರ ದೇಗುಲದ ಕರಂಬಳ್ಳಿ ಶಿವರಾಮ ಶೆಟ್ಟಿ, ಕನ್ನರ್ಪಾಡಿ ಬ್ರಾಹ್ಮಣ ಸಭಾ ಅಧ್ಯಕ್ಷ ಸತೀಶ್‌ ರಾವ್‌, ವ್ಯವಸ್ಥಾಪನ ಸಮಿತಿಯ ನಿರುಪಮಾ ಪಿ. ಶೆಟ್ಟಿ, ಕೃಷ್ಣ ಶೆಟ್ಟಿ, ಆನಂದ ಗುರೂಜಿ ಅವರ ಪತ್ನಿ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ಕೆ. ಕೃಷ್ಣಮೂರ್ತಿ ಆಚಾರ್ಯ ಪ್ರಸ್ತಾವನೆಗೈದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್‌. ಮುರಳೀಧರ ಬಲ್ಲಾಳ್‌ ಸ್ವಾಗತಿಸಿ ಪ್ರ.ಕಾರ್ಯದರ್ಶಿ ಸಂಜೀವ ಎ. ವಂದಿಸಿದರು. ಮುರಳೀಧರ ರಾವ್‌ ವೈ., ಭಾಸ್ಕರ ಸುವರ್ಣ ನಿರೂಪಿಸಿದರು.

ಆಸ್ಪತ್ರೆ-ದೇಗುಲ, ವೈದ್ಯ-ದೇವರು
ಪರಿಹರಿಸಲಾಗದ ಸಮಸ್ಯೆಗಳಿಗೆ ಪರಿಹಾರ ದೊರಕುವುದು ದೇಗುಲವೆಂಬ ಆಸ್ಪತ್ರೆಯಲ್ಲಿ ಮಾತ್ರ. ದೇಹಕ್ಕೆ ಔಷಧವನ್ನು ವೈದ್ಯರು ಕೊಟ್ಟರೆ ಮನೋ ರೋಗಕ್ಕೆ (ಮನಃಶಾಂತಿ) ಔಷಧ ಕೊಡುವವನು ದೇವರು ಮಾತ್ರ. ಆದ್ದರಿಂದಲೇ “ವೈದ್ಯೋ ನಾರಾಯಣೋ ಹರಿಃ’ ಎನ್ನಲಾಗಿದೆ. ಆಸ್ಪತ್ರೆ ದೇಗುಲವಾದರೆ, ಅಲ್ಲಿರುವ ವೈದ್ಯ ದೇವರು, ಭಕ್ತನೆಂಬ ರೋಗಿಗೆ ಔಷಧವನ್ನು ದೇವರು ಕರುಣಿಸುತ್ತಿದ್ದಾನೆ. ದೇವರಿಗೆ ನಮ್ಮೆರಡು ಕೈಗಳಿಂದ ಕೊಟ್ಟರೆ ದೇವರು ನಮಗೆ ಸಾವಿರದ (ಸಾವು+ಇರದ) ಕೈಗಳಿಂದ ಕೊಡುತ್ತಾನೆ. ನಾವು ಕೊಟ್ಟಿದ್ದಕ್ಕಿಂತ ನಮಗೆ ದೇವರು ಸಾವಿರ ಪಟ್ಟು ಹೆಚ್ಚು ಕೊಡುತ್ತಾನೆ ಎಂದು ಅದಮಾರು ಶ್ರೀಗಳು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next