Advertisement

ಅವಳಿ ವಾರ್ಡ್‌ಗಳಲ್ಲಿ ಚರಂಡಿ ಹೂಳೆತ್ತದಿರುವುದೇ ಸಮಸ್ಯೆ!

10:52 PM Jun 08, 2020 | Sriram |

ಉಡುಪಿ: ಮಳೆ ಇನ್ನೇನು ತನ್ನ ಪ್ರತಾಪ ತೋರಿಸಲಷ್ಟೇ ಬಾಕಿ ಇದೆ. ಇಷ್ಟರೊಳಗೆ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮಳೆಗಾಲದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ಆದರೆ ಬಹುತೇಕ ವಾರ್ಡ್‌ಗಳಲ್ಲಿ ಈ ಸಿದ್ಧತೆ ಆಗದಿರುವುದು ವಾರ್ಡ್‌ ನಿವಾಸಿಗಳಲ್ಲಿ ಚಿಂತೆ ಮೂಡಿದೆ.

Advertisement

ಎಲ್ಲ ಕಡೆ ಸಮಸ್ಯೆ
ಪರ್ಕಳ ಮತ್ತು ಇಂದ್ರಾಳಿ ಈ ಎರಡು ವಾರ್ಡ್‌ ಗಳಲ್ಲಿ ಪ್ರಸ್ತುತ ಚರಂಡಿ ಹೂಳು ತೆಗೆಯದಿರುವುದು, ರಸ್ತೆ ದುರಸ್ತಿಪಡಿಸದಿರುವುದು, ಬೀದಿದೀಪ ವ್ಯವಸ್ಥೆ ಗೊಳಿಸದಿರುವುದು ಕಂಡುಬಂದಿದೆ. ಹಿಂದಿನ ವರ್ಷ ದಂತೆ ಈ ವರ್ಷ ಕೂಡ ಈ ಎಲ್ಲ ವ್ಯವಸ್ಥೆಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡು, ಈ ಮಳೆಗಾಲದಲ್ಲೂ ಎರಡು ವಾರ್ಡ್‌ಗಳ ನಿವಾಸಿಗಳು ಮಳೆಗಾಲದ ಅವಧಿಯನ್ನು ಸಂಕಷ್ಟದಲ್ಲಿ ಕಳೆಯಬೇಕಿದೆ.

ಹೆದ್ದಾರಿ ದುರಸ್ತಿ ಅಪೂರ್ಣ
ಇಂದ್ರಾಳಿ ಮತ್ತು ಪರ್ಕಳ ವಾರ್ಡ್‌ಗಳಲ್ಲಿ ಹಾದು ಹೋಗಿರುವ ಎಲ್ಲ ಒಳ ರಸ್ತೆಗಳ ಎರಡು ಬದಿಗಳ ಚರಂಡಿಗಳ ಹೂಳು ತೆಗೆದಿಲ್ಲ. ಚರಂಡಿಗಳಲ್ಲಿ ಹೂಳಿನ ಜತೆ ಗಿಡಗಂಟಿಗಳು ಬೆಳೆದು ನಿಂತಿವೆ. ಕೆಲವು ಕಡೆಗಳಲ್ಲಿ ಚರಂಡಿ ಕಾಣಿಸುತ್ತಿಲ್ಲ. ಪರ್ಕಳ ಪೇಟೆಯಲ್ಲಿ ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿಯುತ್ತದೆ. ಹೆದ್ದಾರಿ ದುರಸ್ತಿ ಅಪೂರ್ಣವಾಗಿದೆ. ಪರ್ಕಳ ಗಾಂಧಿ ಮೈದಾನದಿಂದ ಕೆಳಗೆ ಚರಂಡಿಯೇ ಇಲ್ಲ. ಪರ್ಕಳ ಪೇಟೆಯಲ್ಲಿರುವ ಕಿರುಚರಂಡಿಯಲ್ಲಿ ಹೂಳು, ಕಲ್ಲುಗಳು ತುಂಬಿ ಹೋಗಿದ್ದು, ನೀರು ಹರಿಯಲು ತಡೆ ಉಂಟಾಗಿದೆ. ಮಳೆಗಾಲದಲ್ಲಿ ಇಲ್ಲಿ ನೀರು ರಸ್ತೆ ಮೇಲೆ ಹರಿಯಬಹುದು.

ಹೂಳು ತೆಗೆಯಲು ಟೆಂಡರ್‌ ಆಗಿದ್ದರೂ ಕೆಲಸವಾಗಿಲ್ಲ
ಇಂದ್ರಾಳಿ ಮತ್ತು ವಿ.ಪಿ. ನಗರ ಸಂಪರ್ಕ ರಸ್ತೆಯ ಹೂಳು ತೆಗೆಯಲು ಟೆಂಡರ ಆಗಿದ್ದರೂ, ಇನ್ನೂ ಹೂಳು ತೆಗೆಯುವ ಕೆಲಸ ನಡೆದಿಲ್ಲ. ಇನ್ನುಳಿದಂತೆ ಈ ವಾರ್ಡ್‌ ವ್ಯಾಪ್ತಿಯಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟು, ಸಂಚಾರಕ್ಕೆ ಅಸಾಧ್ಯವಾಗಿದೆ. ಒಳ ರಸ್ತೆಗಳಲ್ಲಿ ವಾಹನಗಳು ಬಿಡಿ ಕಾಲ್ನಡಿಗೆಯಲ್ಲಿ ಕೂಡ ನಡೆದು ಹೋಗುವುದಕ್ಕೆ ಸಾಧ್ಯವಿಲ್ಲ. ಮಳೆಗೆ ಚರಂಡಿ ನೀರು ರಸ್ತೆಗೆ ಹರಿದು ಬಂದು ರಸ್ತೆಯ ಹೊಂಡಗಳಲ್ಲಿ ಸಂಗ್ರಹವಾಗುತ್ತದೆ. ನೀರು ನಿಂತ ಹೊಂಡಗಳಲ್ಲಿ ವಾಹನಗಳು ಬಿದ್ದು ಅವಘಡಗಳಿಗೆ ಕಾರಣವಾಗುತ್ತಿದೆ. ಕಾಲ್ನಡಿಗೆಯಲ್ಲಿ ತೆರಳುವವರು ಕೂಡ ನಾನಾ ಸಮಸ್ಯೆ ಅನುಭವಿಸುತ್ತಾರೆ. ಮಂಜುಶ್ರೀ ನಗರ, ವಿ.ಪಿ. ನಗರ ಕಾಲನಿ-ರೈಲ್ವೆ ಸ್ಟೇಶನ್‌, ಮಂಚಿಕುಮೇರಿ ಮುಂತಾದ ಕಡೆಗಳಲ್ಲಿ ತೆರಳುವ ರಸ್ತೆ ಬದಿಗಳಲ್ಲಿ ಅತಿ ಹೆಚ್ಚು ಸಮಸ್ಯೆಗಳಿವೆ,

ಕತ್ತಲ ಬೆಳಕಿನ ದಾರಿ
ರಸ್ತೆಯಲ್ಲಿ ವಿದ್ಯುತ್‌ ದೀಪಗಳಿದ್ದರೂ, ಅದು ಮಳೆಗಾಲದಲ್ಲಿ ಉರಿಯುವುದಿಲ್ಲ. ಮಳೆ-ಗಾಳಿಗೆ ವಿದ್ಯುತ್‌ ಕೈಕೊಡುವುದರಿಂದ ಬೀದಿ ದೀಪಗಳು ಇದ್ದರೂ ಪ್ರಯೋಜನವಿಲ್ಲ. ಸಣ್ಣ ಗಾಳಿ ಮಳೆ ಬಂದರೂ ಇವುಗಳು ಕೆಟ್ಟು ಹೋಗುತ್ತವೆ. ಇದರಿಂದ ಇಲ್ಲಿಯವರು ಕತ್ತಲ ದಾರಿಯಲ್ಲಿ ತೆರಳಬೇಕಾಗುತ್ತದೆ. ರಸ್ತೆ ಬದಿಯ ವಿದ್ಯುತ್‌ ತಂತಿಗಳು ಹಾದುಹೋದ ಮಾರ್ಗಗಳ ಮರದ ಕೊಂಬೆಗಳನ್ನು ಕತ್ತರಿಸದೆ ಇರುವುದರಿಂದ ತಂತಿಗಳ ಮೇಲೆ ಮರದಗೆಲ್ಲುಗಳುಬೀಳುತ್ತಿರುತ್ತವೆ.

Advertisement

18 ವರ್ಷಗಳಿಂದ ರಸ್ತೆ ಚಿತ್ರಣ ಬದಲಾಗಿಲ್ಲ
ಇಂದ್ರಾಳಿ ವಾರ್ಡ್‌ನ ವಿ.ಪಿ. ನಗರದಲ್ಲಿ ಹಾದು ಹೋಗಿರುವ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, 3ನೇ ಅಡ್ಡ ರಸ್ತೆಯನ್ನು ಸಾರ್ವಜನಿಕರು ಅತಿ ಹೆಚ್ಚು ಬಳಸುತ್ತಿದ್ದು, ಈ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. 18 ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಯಾಗದೆ ಹಾಗೆಯೇ ಉಳಿದಿದೆ. ಡಾಮರು ಎದ್ದು ಹೋಗಿ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ಈ ರಸ್ತೆಯನ್ನು ಪ್ಯಾಚ್‌ವರ್ಕ್‌ ಕೂಡ ಮಾಡುವ ಗೋಜಿಗೆ ಯಾರೂ ಹೋಗಿಲ್ಲ .

ಟೆಂಡರ್‌ ಪ್ರಕ್ರಿಯೆ ನಡೆದಿದೆ
ವಾರ್ಡ್‌ ವ್ಯಾಪ್ತಿಯಲ್ಲಿನ ರಸ್ತೆಗಳು ತೀವ್ರ ಹದಗೆಟ್ಟಿವೆ. ಸುದೀರ್ಘ‌ ಅವಧಿಯಿಂದ ಈ ಸಮಸ್ಯೆ ಇದೆ. ಉಳಿದಂತೆ ಚರಂಡಿ ಹೂಳೆತ್ತಲು ಟೆಂಡರ್‌ ಪ್ರಕ್ರಿಯೆ ನಡೆದಿದೆ.
-ಅಶೋಕ ನಾಯ್ಕ ಮಂಚಿಕುಮೇರಿ,
ಇಂದ್ರಾಳಿ ವಾರ್ಡ್‌ ಸದಸ್ಯ

ಒಳಚರಂಡಿ ಹೂಳೆತ್ತಿಲ್ಲ
ಒಳಚರಂಡಿ ಹೂಳೆತ್ತದೆ ಇರುವುದೇ ದೊಡ್ಡ ಸಮಸ್ಯೆ. ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು ಸಮಸ್ಯೆಯಾಗಬಹುದು. ಚರಂಡಿ ಹೂಳೆತ್ತುವ ಬಗ್ಗೆ ನಗರಸಭೆ ಗಮನಕ್ಕೆ ತಂದಿದ್ದೇವೆ.
– ಸುಮಿತ್ರಾ ಆರ್‌. ನಾಯಕ್‌,
ಪರ್ಕಳ ವಾರ್ಡ್‌ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next