ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರತಿಯೊಂದು ಸೇವೆ ಹಾಗೂ ಸೌಲಭ್ಯಕ್ಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿವೆ. ಆದರೆ, ಸಾರ್ವಜನಿಕರಿಗೆ ಸುಲಭವಾಗಿ ಕಾರ್ಡ್ ಪಡೆಯವ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಮಹಾನಗರ ಪಾಲಿಕೆಯ ಹುಬ್ಬಳ್ಳಿ-ಧಾರವಾಡ ಒನ್ 11 ಕೇಂದ್ರಗಳಿದ್ದು, ಅದರಲ್ಲಿ ಕೇವಲ ಎರಡು ಕೇಂದ್ರಗಳು ಮಾತ್ರ ಕಾರ್ಡ್ ನೀಡಿಕೆ ಕಾರ್ಯ ಮಾಡುತ್ತಿದ್ದು, ಜನ ಸರದಿಯಲ್ಲಿ ಗಂಟೆಗಟ್ಟಲೆ ನಿಲ್ಲುವಂತಾಗಿದೆ.
ಪ್ರಸ್ತುತ ಹುಬ್ಬಳ್ಳಿಯ ವಿಜಯನಗರ ಹಾಗೂ ಧಾರವಾಡದ ಕಲಾಭವನದ ಹು-ಧಾ ಒನ್ ಕೇಂದ್ರಗಳಲ್ಲಿ ಮಾತ್ರ ಆಧಾರ ಕಾರ್ಡ್ ನೀಡಲಾಗುತ್ತದೆ. ಇನ್ನುಳಿದ ಶಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಆಧಾರ ಕಾರ್ಡ್ ಪ್ರಕ್ರಿಯೆ ಕೈಗೊಳ್ಳುತ್ತಿಲ್ಲ ಎನ್ನಲಾಗಿದೆ. ಅವಳಿನಗರ ಹಾಗೂ ಸುತ್ತಲಿನ ಗ್ರಾಮೀಣ ಭಾಗದ ಜನರು ಸಹ ಆಧಾರ್ ಕಾರ್ಡ್‌ಗಳನ್ನು ಪಡೆಯಲು ಇದೇ ಎರಡು ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ.
ಪ್ರತಿ ಕೇಂದ್ರದಲ್ಲಿ ನಿತ್ಯ 40 ಆಧಾರ್ ಕಾರ್ಡ್ ನೀಡಿಕೆ ಹಾಗೂ ತಿದ್ದುಪಡಿ ಮಾತ್ರ ಮಾಡಲಾಗುತ್ತದೆ. ಇದರ ನಂತರ ಮತ್ತೆ ಯಾರಾದರೂ ಬಂದರೆ ಅವರು ನಂತರದ ದಿನದಲ್ಲಿ ಮುಂಚಿತವಾಗಿ ಬಂದು ಆಧಾರ್‌ಕಾರ್ಡ್ ಅರ್ಜಿ ಪಡೆದು ಸರದಿಯಲ್ಲಿ ನಿಂತು ಆಧಾರ್ ನೋಂದಣಿ ಮಾಡಿಸಬೇಕಾದ ಪರಿಸ್ಥಿತಿ ಇದೆ.
ಸಮಸ್ಯೆ ಎಲ್ಲಿ-ಏತಕ್ಕೆ: ಇದು ಕೇವಲ ಹುಬ್ಬಳ್ಳಿ-ಧಾರವಾಡದ ಸಮಸ್ಯೆಯಲ್ಲ. ಇಡೀ ದೇಶದಲ್ಲಿಯೇ ಈ ಸಮಸ್ಯೆ ಇದೆ. ಅವಳಿನಗರದಲ್ಲಿರುವ ಎಲ್ಲ ಹು-ಧಾ ಒನ್ ಕೇಂದ್ರದಲ್ಲಿ ಆಧಾರ್ ಕಾರ್ಡ್ ಕೌಂಟರ್ ಆರಂಭಕ್ಕೆ ತಜ್ಞ ಸಿಬ್ಬಂದಿ ಅವಶ್ಯ. ಅದಕ್ಕಾಗಿ ಯುಐಡಿಯಿಂದ ನಡೆಯುವ ತರಬೇತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಿಬ್ಬಂದಿ ಬೇಕು.
ಅವಳಿನಗರದಿಂದ ಸುಮಾರು 44 ಅಭ್ಯರ್ಥಿಗಳು ಈಗಾಗಲೇ ಪರೀಕ್ಷೆ ಎದುರಿಸಿದ್ದು, ಸಿಬ್ಬಂದಿ ನೇಮಕ ಯಾವಾಗ ಎಂಬ ಪ್ರಶ್ನೆಗೆ ಉತ್ತರ ದೊರೆತಿಲ್ಲ. ಸಂಬಂಧಿಸಿದ ಇಲಾಖೆ ಕೂಡಲೇ ನೇಮಕಾತಿ ನಡೆಸಿ ಅವಳಿನಗರದಲ್ಲಿ ಆಧಾರ ಕಾರ್ಡ್‌ಗೆ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.
* ಬಸವರಾಜ ಹೂಗಾರ