ಮೈಸೂರು: ರೈತರು ಸಂಕಷ್ಟಗಳಿಂದ ಪಾರಾಗಲು ಸಮಗ್ರ ಕೃಷಿಪದ್ಧತಿ ಏಕೈಕ ಕೀಲಿ ಎಂದು ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಕೆ.ನಾರಾಯಣಗೌಡ ಅಭಿಪ್ರಾಯಪಟ್ಟರು.
ರಾಜ್ಯ ಕಬ್ಬು ಬೆಳೆಗಾರರ ಸಂಘ, ರೈತಮಿತ್ರ ಫಾರ್ಮರ್ ಪ್ರೋಡ್ನೂಸರ್ ಕಂಪನಿ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕೃಷಿ ಸಮಸ್ಯೆಗಳ ಕುರಿತು ರೈತರು-ಕೃಷಿ ತಜ್ಞರ ಸಂವಾದದಲ್ಲಿ ಮಾತನಾಡಿದರು.
ರೈತರು ಒಂದು ಬೆಳೆಗೆ ಸೀಮಿತಗೊಳ್ಳದೆ, ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಋತುಮಾನ ಆಧಾರಿತ ಬೆಳೆ ಬೆಳೆಯಬೇಕು. ಹೀಗೆ ಸಮಗ್ರ ಕೃಷಿಪದ್ಧತಿ ಅಳವಡಿಸಿಕೊಳ್ಳುವುದರಿಂದ ಬೆಳೆನಷ್ಟದ ಸಮಸ್ಯೆ ದೂರವಾಗಿ, ಆದಾಯ ಹೆಚ್ಚಾಗಿ, ಖರ್ಚು ಕಡಿಮೆಯಾಗಲಿದೆ. ಹೀಗಾಗಿ ಸಮಗ್ರ ಕೃಷಿಯಲ್ಲಿ ರೈತರಿಗೆ ಉತ್ತಮ ಭವಿಷ್ಯ ದೊರೆಯಲಿದ್ದು, ಕೇವಲ ಒಂದು ಎಕರೆ ಜಮೀನಿದ್ದವರು ಸಹ ಸಮಗ್ರ ಕೃಷಿ ಮೂಲಕ ಹಲವು ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದು ಹೇಳಿದರು.
ಮಾರುಕಟ್ಟೆ ಸಮಸ್ಯೆ, ರೋಗಬಾಧೆ ಎದುರಿಸು ತ್ತಿರುವ ತೆಂಗು ಬೆಳೆಗಾರರು ನೀರಾ ಇಳಿಸಲು ಒಲವು ತೋರಬೇಕಿದ್ದು, ಪ್ರತಿ ಎಕರೆ ಭೂಮಿಗೆ ವಾರ್ಷಿಕ 5 ಲಕ್ಷ ರೂ. ಆದಾಯ ಲಭಿಸಲಿದೆ. ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ರೈತರಿಗೆ ಹತ್ತಿರವಾಗುವ ಸ್ಥಳದಲ್ಲಿ ಸ್ಥಾಪಿಸಿದಾಗ ಅನುಕೂಲವಾಗಲಿದೆ. ಅಲ್ಲದೆ ದೇಶದಲ್ಲಿ ರೈತರಿಗಾಗಿ 155 ಯೋಜನೆಗಳಿವೆ. ಅರಿವಿನ ಕೊರತೆಯಿಂದ ಈ ಯೋಜನೆಗಳ ಸದ್ಬಳಕೆಯಾಗುತ್ತಿಲ್ಲ. ಹೀಗಾಗಿ ರೈತ ಸಂಸ್ಥೆಗಳ ಮೂಲಕ ಯೋಜನೆಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕಾದ ಅಗತ್ಯವಿದೆ. ಮಾರುಕಟ್ಟೆಗಳು ರೈತರಿಗೆ ಹತ್ತಿರವಾಗಿರಬೇಕು. ಹೀಗಾಗಿ ರಾಜ್ಯದ 14 ಸಾವಿರ ಹಾಗೂ ದೇಶದಲ್ಲಿರುವ 1.6 ಲಕ್ಷ ಹಾಲಿನ ಸೊಸೈಟಿಗಳು, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆಯ ಕೆಲವು ಗಂಟೆಗಳು ಮಾತ್ರ ಕಾರ್ಯನಿರ್ವಹಿಸಲಿದ್ದು, ಬಾಕಿ ಸಮಯದಲ್ಲಿ ಈ ಸೊಸೈಟಿಯನ್ನು ರೈತರ ಅನುಕೂಲಕ್ಕೆ ಬಳಸಿಕೊಳ್ಳುವುದರಿಂದಲೂ ರೈತರಿಗೆ ಉಪಯೋಗವಾಗಲಿದೆ ಎಂದರು.
ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಮಹದೇವಪ್ಪ, ಇತ್ತೀಚಿನ ದಿನಗಳಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಸೇರಿ ಎಲ್ಲಾ ವಿವಿಗಳು ಉಸಿರುಗಟ್ಟಿದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರೈತರು ಕೃಷಿ ಕ್ಷೇತ್ರದ ಹೊರತಾಗಿ ಅರಿವಿನ ಪ್ರಜ್ಞೆ ಬೆಳೆಸಿಕೊಂಡರೆ ರೈತರು ಸಹ ತಮ್ಮದೇ ವಿಧಾನದಲ್ಲಿ ಉತ್ತಮ ಸುಧಾರಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕೃಷಿ ವಿಜ್ಞಾನಿಗಳಿಗೆ ಇಳುವರಿ ಸುಧಾರಿಸಲು ವಿಧಾನಗಳ ಮೇಲೆ ಕೇಂದ್ರೀಕರಿಸ ಬೇಕಿದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದರು.
ಸಂವಾದದಲ್ಲಿ ಶಿವಮೊಗ್ಗ ಕೃಷಿ ವಿವಿ ನಿವೃತ್ತ ನಿರ್ದೇಶಕ ಎ.ಎಸ್.ಕುಮಾರಸ್ವಾಮಿ, ಶಿವಮೊಗ್ಗ ವಿವಿ ಪ್ರಸಾರಾಂಗ ವಿಭಾಗದ ನಿರ್ದೇಶಕ ಶಶಿಧರ್, ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮೌನೇಶ್ವರಿ ಕಮ್ಮಾರ, ಕೃಷಿ ಇಲಾಖೆ ನಿವೃತ್ತ ನಿರ್ದೇಶಕ ವಿಷಕಂಠ, ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ (ಕೃಷಿ) ಎನ್.ಕೇಶವಮೂರ್ತಿ, ಪ್ರಗತಿಪರ ಕೃಷಿಕರಾದ ಮಂಡ್ಯದ ಲಕ್ಷ್ಮೀದೇವಮ್ಮ, ಎ.ಪಿ. ಚಂದ್ರಶೇಖರ್ ಇದ್ದರು
ಕೇಂದ್ರ-ರಾಜ್ಯ ಸರ್ಕಾರಗಳು ರೂಪಿಸಿರುವ ಕೃಷಿ ನೀತಿಗಳು ಹೆಚ್ಚು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ದೇಶದಲ್ಲಿ ಕೃಷಿ ನೀತಿಗಳಿಗೆ ಕಡಿಮೆಯಿಲ್ಲ, ವರ್ಷದಿಂದ ವರ್ಷಕ್ಕೆ ಹೊಸ ಹೊಸ ಯೋಜನೆಗಳು ಜಾರಿಯಾಗುತ್ತಲೇ ಇರುತ್ತವೆ.
ಆದರೆ, ಅವುಗಳಿಂದ ರೈತರಿಗೆ ಏನು ಲಾಭವಾಗಿದೆ ಎಂಬುದನ್ನು ಯಾರೂ ನೋಡುವುದಿಲ್ಲ. ಕೇವಲ ಹಣ ಖರ್ಚು
ಮಾಡುವುದು ಮಾತ್ರ ಯೋಜನೆಗಳ ಗುರಿಯಾಗುತ್ತಿವೆ.
ಡಾ.ಮೃತ್ಯುಂಜಯ, ಐಸಿಎಆರ್ ಮಾಜಿ ನಿರ್ದೇಶಕ