ಕ್ಯಾನ್‌ಬೆರಾ (ಆಸ್ಟ್ರೇಲಿಯ): ಏಕದಿನ ಇತಿಹಾಸದ ಸಣ್ಣ ಪಂದ್ಯವೊಂದಕ್ಕೆ ಆಸ್ಟ್ರೇಲಿಯ-ವೆಸ್ಟ್ ಇಂಡೀಸ್ ನಡುವಿನ ಮಂಗಳವಾರದ 3ನೇ ಮುಖಾಮುಖೀ ಸಾಕ್ಷಿಯಾಗಿದೆ. 100 ಓವರ್‌ಗಳ ತನಕ ಸಾಗಬೇಕಿದ್ದ ಈ ಪಂದ್ಯ ಕೇವಲ 31 ಓವರ್‌ಗಳಲ್ಲಿ ಮುಗಿದಿದೆ. ಇದು ಆಸ್ಟ್ರೇಲಿಯದಲ್ಲಿ ನಡೆದ ಅತೀ ಸಣ್ಣ ಏಕದಿನ ಮುಖಾಮುಖೀ ಎಂಬುದು ವಿಶೇಷ. ಆಸೀಸ್ 8 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು 3-0 ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಭಾರೀ ಕುಸಿತಕ್ಕೆ ಸಿಲುಕಿ 24.1 ಓವರ್‌ಗಳಲ್ಲಿ ಕೇವಲ 86 ರನ್ನಿಗೆ ಆಲೌಟ್ ಆಯಿತು. ಇದು ಏಕದಿನದಲ್ಲಿ ವಿಂಡೀಸಿನ 5ನೇ ಕನಿಷ್ಠ ಸ್ಕೋರ್. ಜವಾಬಿತ್ತ ಆಸ್ಟ್ರೇಲಿಯ ಬರೀ 6.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 87 ರನ್ ಮಾಡಿ ಜಯಭೇರಿ ಮೊಳಗಿಸಿತು. ಆಗಿನ್ನೂ 43.1 ಓವರ್‌ಗಳ ಆಟ ಬಾಕಿ ಇತ್ತು.
ಈ ಪಂದ್ಯ ಟಿ20 ಪಂದ್ಯದ ಅವಧಿ ಗಿಂತಲೂ ಬೇಗ ಮುಗಿದು ಹೋಯಿತು. ಇನ್ನಿಂಗ್ಸ್ ಬ್ರೇಕ್ ಸೇರಿದಂತೆ ಕೇವಲ 3 ಗಂಟೆಗಳಲ್ಲಿ ಸಮಾಪ್ತಿಯಾಯಿತು.
ಆಸ್ಟ್ರೇಲಿಯದಲ್ಲಿ ನಡೆದ ಇದಕ್ಕೂ ಹಿಂದಿನ ಸಣ್ಣ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ಒಳಗೊಂಡಿತ್ತು. ಅದು ಪರ್ತ್ ನಲ್ಲಿ ನಡೆದ 2013ರ ಪಂದ್ಯವಾಗಿತ್ತು. 33.1 ಓವರ್‌ಗಳಲ್ಲಿ ಇದು ಮುಗಿದಿತ್ತು. ಗೇಲ್, ಪೊಲಾರ್ಡ್, ಬ್ರಾವೊ ಬ್ರದರ್ ಮೊದಲಾದ ಘಟಾನುಘಟಿ ಆಟಗಾರರನ್ನು ಹೊಂದಿದ್ದ ಅಂದಿನ ವಿಂಡೀಸ್ ತಂಡ 23.5 ಓವರ್‌ಗಳಲ್ಲಿ ಬರೀ 70 ರನ್ನಿಗೆ ಕುಸಿದಿತ್ತು. ಆಸ್ಟ್ರೇಲಿಯ 9.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತ್ತು.
ಬಾರ್ಟ್‌ಲೆಟ್ ದಾಳಿ
ಎಡಗೈ ವೇಗಿ ಕ್ಸೇವಿಯರ್ ಬಾರ್ಟ್‌ಲೆಟ್ 21 ರನ್ನಿಗೆ 4 ವಿಕೆಟ್ ಉರುಳಿಸಿ ಕೆರಿಬಿಯನ್ನರಿಗೆ ಆಘಾತವಿಕ್ಕಿದರು. ಲ್ಯಾನ್ಸ್ ಮಾರಿಸ್ ಮತ್ತು ಆ್ಯಡಂ ಝಂಪ ತಲಾ 2 ವಿಕೆಟ್ ಉರುಳಿಸಿದರು.
32 ರನ್ ಮಾಡಿದ ಆರಂಭಕಾರ ಅಲಿಕ್ ಅಥನಾಝ್ ಅವರದೇ ವಿಂಡೀಸ್ ಸರದಿಯ ಗರಿಷ್ಠ ಗಳಿಕೆ. ಆಸೀಸ್ ಪರ ನೂತನ ಆರಂಭಕಾರ ಜೇಕ್ ಫ್ರೆàಸರ್ ಮೆಕ್‌ಗರ್ಕ್ 18 ಎಸೆತಗಳಿಂದ 41 ರನ್ (5 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಜೋಶ್ ಇಂಗ್ಲಿಸ್ 35 ರನ್ ಮಾಡಿ ಔಟಾಗದೆ ಉಳಿದರು (16 ಎಸೆತ, 4 ಬೌಂಡರಿ, 1 ಸಿಕ್ಸರ್).