Advertisement

ಹೊಸ ರಾಜನ ಹಳೇ ಸ್ಟೈಲು

11:27 AM Feb 04, 2017 | Team Udayavani |

ಅವನೊಬ್ಬ ಸಾಮಾನ್ಯ ಹಳ್ಳಿ ಹುಡುಗ. ಕಿತ್ತು ತಿನ್ನೋ ಬಡತನವಿದ್ದರೂ, ಕನಸುಗಳಿಗೆ ಮಾತ್ರ ಬರವಿಲ್ಲ. ನೂರಾರು ಆಸೆ-ಆಕಾಂಕ್ಷೆ ಹೊತ್ತು ಬೆಂಗಳೂರಿಗೆ ಬರುವ ಅವನಿಗೆ, ಗೆಳೆಯರು ಜತೆಯಾಗುತ್ತಾರೆ. ಆಕಸ್ಮಿಕವಾಗಿ ಹುಡುಗಿಯೊಬ್ಬಳ ಪರಿಚಯವಾಗುತ್ತೆ. ಆ ಪರಿಚಯ ಪ್ರೀತಿಗೂ ತಿರುಗುತ್ತೆ. ಒಬ್ಬ ಸಾಮಾನ್ಯ ಹುಡುಗ, ಶ್ರೀಮಂತ ಹುಡುಗಿಯನ್ನು ಲವ್‌ ಮಾಡಿದಾಗ, ಏನೆಲ್ಲಾ ತೊಂದರೆಗಳು ಎದುರಾಗುತ್ತವೆಯೋ, ಅವೆಲ್ಲವನ್ನೂ ಆ ಹುಡುಗ ಅನುಭವಿಸುತ್ತಾನೆ.

Advertisement

ಅವನ “ಯಾತನಾಮಯ’ ಅನುಭವದೊಳಗೆ ಗೆಳೆತನ, ಪ್ರೀತಿ, ವಾತ್ಸಲ್ಯ, ದ್ವೇಷ, ಅಸೂಯೆ ಇತ್ಯಾದಿಗಳು ಬಂದು ಹೋಗುತ್ತವೆ. ಮುಂದಾ? ಅದನ್ನು ಹೇಳದಿರುವುದೇ ಒಳಿತು. ಇದು “ಸ್ಟೈಲ್‌ ರಾಜ’ನ ಕಥೆ ಮತ್ತು ವ್ಯಥೆ. ಇಷ್ಟು ಹೇಳಿದ ಮೇಲೆ ಸಿನಿಮಾದ ಕಥೆಯನ್ನು ವಿಸ್ತಾರವಾಗಿ ಹೇಳುವ ಅಗತ್ಯವಿಲ್ಲ. ಕಥೆಯಲ್ಲಿ ಹೊಸತನದ ಮಾತಿಲ್ಲ. ನೋಡುಗನಿಗೆ ಮಜ ಎನಿಸುವ ಸನ್ನಿವೇಶಗಳಿಲ್ಲ. ಕಾಮಿಡಿ ದೃಶ್ಯಗಳು, ಹಾಡುಗಳು ಎಲ್ಲವನ್ನೂ ಬೇಕಂತಲೇ ತುರುಕಿದಂತಿದೆ.

ಹಾಗಾಗಿ, ಈ ರಾಜನ ಅತಿಯಾದ “ಸ್ಟೈಲ್‌’ ನೋಡುಗರ ತಾಳ್ಮೆ ಪರೀಕ್ಷಿಸುವುದು ಸುಳ್ಳಲ್ಲ. ಹಾಗಂತ, ಇದನ್ನು ಆ ರಾಜನ ಮೇಲೆ ಗೂಬೆ ಕೂರಿಸುವಂತಿಲ್ಲ. ಒಬ್ಬ ನಿರ್ದೇಶಕನಿಗೆ ಕಥೆ ಹಾಗೂ ನಿರೂಪಣೆ ಮೇಲೆ ಹಿಡಿತ ಇರಬೇಕು. ಆ ಎರಡೂ ಇಲ್ಲಿದ್ದಿದ್ದರೆ ಬಹುಶಃ, ರಾಜನ ಸ್ಟೈಲ್‌ ನೋಡುಗರಿಗೆ ತಕ್ಕಮಟ್ಟಿಗೆಯಾದರೂ ಖುಷಿ ಕೊಡುತ್ತಿತ್ತೇನೋ? ಕಥೆಯ ಒನ್‌ಲೈನ್‌ ಚೆನ್ನಾಗಿದೆ. ಅದನ್ನು ಸರಿಯಾಗಿ ನಿರೂಪಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ.

ಈ ರೀತಿಯ ಕಥೆಗಳು ಸಾಕಷ್ಟು ಬಂದು ಹೋಗಿವೆಯಾದರೂ, ಬೆರಳೆಣಿಕೆಯಷ್ಟು ಒಳ್ಳೆಯ ಅಂಶಗಳಿವೆ. ಅವುಗಳನ್ನು ಇನ್ನೂ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನ ಮಾಡದಿರುವುದೇ ಚಿತ್ರದ ಮೈನಸ್‌. ಚಿತ್ರದಲ್ಲಿ ತಾಯಿ ಮತ್ತು ಮಗನ ನಡುವಿನ ಸನ್ನಿವೇಶ ಸ್ವಲ್ಪಮಟ್ಟಿಗೆ ಭಾವತೆ ಹೆಚ್ಚಿಸುವುದನ್ನು ಬಿಟ್ಟರೆ, ಉಳಿದ ಯಾವ ದೃಶ್ಯಗಳೂ ಇಲ್ಲಿ  ಗಮನಸೆಳೆಯುವುದಿಲ್ಲ. ಚಿತ್ರದಲ್ಲಿ ಚಿಕ್ಕಣ್ಣರಂತಹ ಕಾಮಿಡಿ “ಪೀಸ್‌’ ಇದ್ದರೂ ಅವರನ್ನಿಲ್ಲಿ ಸರಿಯಾಗಿ ಬಳಸಿಕೊಳ್ಳದಿರುವುದು ಇನ್ನೊಂದು ಮೈನಸ್‌.

ಚಿಕ್ಕಣ್ಣ ಅವರ ಯಾವ ದೃಶ್ಯವೂ ನಗು ತರಿಸಲ್ಲ ಅನ್ನೋದೇ ನಂಬಲಾಗದ ಸತ್ಯ! ಕಥೆ ಬರೀ, ಪ್ರೀತಿ ಸುತ್ತವೇ ತಿರುಗಿರುವುದರಿಂದ ನೋಡುಗರ ತಲೆ  ತಿರುಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ತಾನು ಪ್ರೀತಿಸುವ ಹುಡುಗಿಯ ಹಿಂದೆ ಪದೇ ಪದೇ ಸುತ್ತೋದು, ಅವಳನ್ನು ಆಕರ್ಷಿಸಲು ಮಾಡುವ ಡ್ರಾಮಾಗಳೆಲ್ಲವೂ “ಸಿಲ್ಲಿ’ತನವನ್ನು ಪ್ರದರ್ಶಿಸಿ, ನೋಡುಗರನ್ನು ಸೀಟಿಗೆ ಒರಗಿಕೊಳ್ಳುವಂತೆ ಮಾಡುತ್ತವೆ.

Advertisement

ಕಥೆಯ ಜಾಡನ್ನು ಕಷ್ಟಪಟ್ಟು  ಹಿಡಿದು, ಆಮೆಗತಿಯಲ್ಲಿ ಸಾಗುವ ದೃಶ್ಯಗಳನ್ನು ಅರ್ಥಮಾಡಿಕೊಳ್ಳುವಷ್ಟರಲ್ಲೇ, ಕ್ರಮವಲ್ಲದ ಹಾಡುಗಳು ತೂರಿಕೊಂಡು ಇನ್ನಷ್ಟು ತಾಳ್ಮೆ ಪರೀಕ್ಷಿಸವುದು ನಿಜ. ಹಾಗಾಗಿ ಸ್ಟೈಲ್‌ರಾಜನ ಇಷ್ಟ-ಕಷ್ಟಗಳು ಪರಿಣಾಮಕಾರಿ ಎನಿಸಲ್ಲ. ಗಿರೀಶ್‌ಗೆ ಇದು ಮೊದಲ ಸಿನಿಮಾ. ಹಾಗಾಗಿ, ಇರುವ ತಪ್ಪುಗಳನ್ನು ಸಹಿಸಿಕೊಂಡು ನೋಡಬೇಕು. ನಟನೆಯಲ್ಲಿನ್ನೂ ಬಹುದೂರ ಸಾಗಬೇಕು. ಫೈಟ್‌ನಲ್ಲೇನೋ “ಹರಸಾಹಸ’ ಮಾಡಿದ್ದಾರೆ. ಚಿಕ್ಕಣ್ಣ ಇಲ್ಲಿ ಹೆಸರಿಗಷ್ಟೇ.

ಅವರು ಮಾಡುವ ಹಾಸ್ಯದಲ್ಲಿ ಯಾವ ಕಚಗುಳಿಯೂ ಇಲ್ಲ. ಶೋಭರಾಜ್‌ ಪಾತ್ರಕ್ಕೆ ಯಾವುದೇ ಮೋಸ ಮಾಡಿಲ್ಲ. ವಿಲನ್‌ ಆಗಿ ಸೂರ್ಯಕಿರಣ್‌ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ನಾಯಕಿ ರನುಷಾ ಬಗ್ಗೆ ಇಲ್ಲಿ ಹೇಳದಿರುವುದೇ ಒಳಿತು. ಉಳಿದಂತೆ ಕುರಿರಂಗ, ಗಿರಿಜಾ ಲೋಕೇಶ್‌ ಇರುವಷ್ಟು ಕಾಲ ಸೈ ಎನಿಸಿಕೊಳ್ಳುತ್ತಾರೆ.  ರಾಜೇಶ್‌ ರಾಮನಾಥ್‌ ಸಂಗೀತದಲ್ಲಿ ಒಂದು ಹಾಡು ಬಿಟ್ಟರೆ, ಬೇರೇನೂ ಕೇಳುವಂತಿಲ್ಲ. ಎಂ.ಬಿ.ಅಳ್ಳಿಕಟ್ಟಿ ಕ್ಯಾಮೆರಾ ಕೈಚಳಕದಲ್ಲಿ ಯಾವ ಲೋಪದೋಷಗಳಿಲ್ಲ.

ಚಿತ್ರ: ಸ್ಟೈಲ್‌ ರಾಜ
ನಿರ್ದೇಶನ: ಹರೀಶ್‌
ನಿರ್ಮಾಣ: ರಮೇಶ್‌
ತಾರಾಗಣ: ಗಿರೀಶ್‌, ರನೂಷಾ, ಚಿಕ್ಕಣ್ಣ, ಕುರಿ ರಂಗ, ಶೋಭರಾಜ್‌, ಸೂರ್ಯಕಿರಣ್‌, ಗಿರಿಜಾ ಲೋಕೇಶ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next