ಒಂದು ಹಳೆಯ ಮನೆಗೆ ಎಂಥಾ ಬಣ್ಣ ಬಳಿದರೂ ಅದು ಹೊಸತೆನಿಸುವುದಿಲ್ಲ. “ಯುಗಪುರಷ’ ಅದೇ ಸಾಲಿಗೆ ಸೇರುವ ಚಿತ್ರ. ದಶಕಗಳ ಹಿಂದೆ ಇಂತಹ ಅದೆಷ್ಟೋ ಕಥೆಗಳು ಬಂದಿವೆ. ಅದಕ್ಕೆ ಹೊಸದಾಗಿ ಸುಣ್ಣಬಣ್ಣ ಬಳಿದು, ಪ್ರೇಕ್ಷಕರ ಮುಂದೆ ಇಡಲಾಗಿದೆ. ಒಂದು ಸಿನಿಮಾದಲ್ಲಿ ಕಥೆಯೇ ಇರಬೇಕು ಅಂತೇನಿಲ್ಲ. ಹೇಳುವ ಮತ್ತು ತೋರಿಸುವ ವಿಧಾನ ಚೆನ್ನಾಗಿದ್ದರೆ ಸಾಕು. ಆದರೆ, “ಯುಗಪುರುಷ’ದಲ್ಲಿ ಸಾಕಷ್ಟು ಗೊಂದಲಗಳಿವೆ. ಪಾತ್ರಗಳ ಕಂಟಿನ್ಯುಟಿಯಲ್ಲಿ ನಿರೀಕ್ಷಿಸದಷ್ಟು ತಪ್ಪುಗಳಿವೆ.
ರೌಡಿಸಂ ಮತ್ತು ಗ್ಯಾಂಗ್‌ವಾರ್ ಹಿನ್ನೆಲೆಯ ಕಥೆಗಳಿಗೆ ಕನ್ನಡದಲ್ಲಿ ಬರವಿಲ್ಲ. ಇಲ್ಲೂ ರೌಡಿಸಂ, ಅರ್ಥವಾಗದ ಡೀಲ್‌ಗಳು, “ಧಮ್’ ಇರದ ಹೊಡೆದಾಟಗಳ ಜೊತೆಗೆ ಒಂದಷ್ಟು ಪ್ರೀತಿ, ಮೋಸ, ದ್ವೇಷ ಎಲ್ಲವೂ ಇದೆ. ಆದರೆ, ಶೀರ್ಷಿಕೆಗೂ, ಕಥೆಗೂ ಮತ್ತು ಹೀರೋ ಪಾತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಹೆಸರಷ್ಟೇ ಕಮರ್ಷಿಯಲ್. ಉಳಿದಿದ್ದೆಲ್ಲಾ ನಾಟ್ ರೀಚಬಲ್. ಒಂದು ಅನಾಥಾಶ್ರಮ. ಅಲ್ಲೇ ಆಡಿ ಬೆಳೆದವನು ಟಗರು (ಅರ್ಜುನ್ ದೇವ್).
ಬೆಂಗಳೂರಲ್ಲಿ ಡಾನ್ ಜಯ (ದೇವರಾಜ್) ಜೊತೆ ಸಣ್ಣಪುಟ್ಟ ಡೀಲ್ ಮಾಡಿಕೊಂಡೇ ಗೆಳೆಯರ ಜತೆ ಕಾಲ ಕಳೆಯೋನು. ಇನ್ನೊಂದು ಕಡೆ ಎಲ್ಲೋ ಹಳ್ಳಿಗಮಾರನಂತಿದ್ದುಕೊಂಡು ಪಾತಕ ಜಗತ್ತು ಆಳಬೇಕೆನ್ನುವ ಗಜ (ಪಲ್ಲಕ್ಕಿ ರಾಧಾಕೃಷ್ಣ). ಮತ್ತೂಂದು ಕಡೆ ನಾನೇ ಬೆಂಗಳೂರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಕೋಳಿ ನಾಗ (ಶೋಭರಾಜ್). ಇವರ ನಡುವೆ ನಡೆಯೋ ಅರ್ಥವಾಗದ ಡೀಲ್‌ಗಳು, ಮಾತುಕತೆಗಳು, ಬಡಿದಾಟಗಳು ಚಿತ್ರದೊಳಗಿರುವ ಅಂಶ. ಚಿಗುರೊಡೆಯುವ ಅಲ್ಲೊಂದು ಪ್ರೀತಿ.
ಇನ್ನೊಂದೆಡೆ ಆ ಪ್ರೀತಿಯನ್ನ ಚಿವುಟಿ ಹಾಕುವ ಹುನ್ನಾರ. ಇದರ ಜತೆಗೆ ಎರಡು ಗ್ಯಾಂಗ್ ನಡುವೆ ವಾರ್. ಅದು ಯಾಕೆ, ಏನು ಎತ್ತ ಎಂಬ ಕುತೂಹಲವಿದ್ದರೆ “ಯುಗಪುರುಷ’ನ ನೋಡಲ್ಲಡ್ಡಿಯಿಲ್ಲ. ಇಲ್ಲಿ ದೇವರಾಜ್‌ರಂತಹ ನಟರಿದ್ದರೂ, ಅವರನ್ನು ಸರಿಯಾಗಿ ಬಳಸಿಕೊಳ್ಳದಿರುವುದು ಚಿತ್ರದ ಮೈನಸ್. ಅವರ ಪಾತ್ರವನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡಲು ಸಾಧ್ಯವಿತ್ತು. ಪಾತ್ರ ಡಮ್ಮಿ ಎನಿಸಿದ್ದರೂ, ದೇವರಾಜ್ ಮಾತ್ರ ತೆರೆಯ ಮೇಲೆ ಇರುವಷ್ಟೂ ಸಮಯ ಇಷ್ಟವಾಗುತ್ತಾರೆ. ನಾಯಕ ಅರ್ಜುನ್ ದೇವ್ ನಟನೆಯಲ್ಲಿ ಬಲು ದೂರ ಸಾಗಬೇಕಿದೆ.
ಬಹುಶಃ ಅವರು ತಮ್ಮ ಪಾತ್ರಕ್ಕೆ ಡಬ್ ಮಾಡದೇ ಇದ್ದಿದ್ದರೆ, ಕೊನೇಪಕ್ಷ ಡೈಲಾಗ್ ಡೆಲಿವರಿಯಾದರೂ ಚೆನ್ನಾಗಿ ಕೇಳಿಸುತ್ತಿತ್ತು. ನಾಯಕಿ ಪೂಜಾ ಝವೇರಿ ಗ್ಲಾಮರ್‌ಗಷ್ಟೇ ಸೀಮಿತ. ಶೋಭರಾಜ್, ಪಲ್ಲಕ್ಕಿ ರಾಧಾಕೃಷ್ಣ ಸಿಕ್ಕ ಪಾತ್ರವನ್ನು ಜೀವಿಸಿದ್ದಾರೆ. ಹಾಸ್ಯಕಲಾವಿದರಿದ್ದರೂ ನಗೆ ಬರದ ದೃಶ್ಯಗಳಲ್ಲಿ ಹರಸಾಹಸ ಪಟ್ಟಿದ್ದಾರೆ. ಧನ್‌ಪಾಲ್ ರಜಪೂತ್ ಹಿಂದಿಯ “ಬೇಟ’ ಚಿತ್ರದ “ಧಕ್ ಧಕ್ ಕರೆ ಲಗಾ …’ ಹಾಡಿನ ಸ್ಫೂರ್ತಿ ಪಡೆದು ಹಾಡೊಂದನ್ನು ಕೊಟ್ಟಿರುವುದೇ ಸಾಧನೆ. ಶರತ್‌ಕುಮಾರ್ ಕ್ಯಾಮೆರಾದಲ್ಲೂ ಪವಾಡವಿಲ್ಲ.
ಚಿತ್ರ: ಯುಗಪುರುಷ
ನಿರ್ಮಾಣ: ಮಂಜುನಾಥ್ ಬಾಬು
ನಿರ್ದೇಶನ: ಮಂಜುನಾಥ್ ಎಂ. ಮಸ್ಕಲ್‌ವುಟ್ಟಿ
ತಾರಾಗಣ: ಅರ್ಜುನ್ ದೇವ್, ದೇವರಾಜ್, ಪೂಜಾ ಝವೇರಿ, ಶೋಭರಾಜ್, ಪಲ್ಲಕ್ಕಿ ರಾಧಾಕೃಷ್ಣ ಮುಂತಾದವರು
* ವಿಜಯ್ ಭರಮಸಾಗರ