ಕೋಲಾರ: ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಹಳೆಯ ಮೂರು ಅಂತಸ್ತಿನ ಕಟ್ಟಡವೊಂದು ನೆಲ ಅಂತಸ್ತಿನ ಮೇಲೆ ಸಂಪೂರ್ಣ ಕುಸಿದು ಬಿದ್ದ ಘಟನೆ ಗುರುವಾರ ಬೆಳಗ್ಗೆ ಏಳು ಗಂಟೆ ಸಮಯದಲ್ಲಿ ಜರುಗಿದೆ. ಇದೇ ಕಟ್ಟಡದಲ್ಲಿ ವಾಸವಾಗಿದ್ದ ಕುಟುಂಬವೊಂದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ನಗರದ ಬಸ್ ನಿಲ್ದಾಣ ವೃತ್ತಕ್ಕೆ ಹೊಂದಿಕೊಂಡಂತಿರುವ ಫಲಾಮೃತ ಐಸ್ ಕ್ರೀಮ್ಸ್ ಮಳಿಗೆ ಇದ್ದ ಮೂರು ಅಂತಸ್ತಿನ ಕಟ್ಟಡದ ಮೊದಲ ಅಂತಸ್ತು ದೊಡ್ಡ ಸದ್ದಿನೊಂದಿಗೆ ನೆಲಸಮವಾಗಿದೆ. ಕಟ್ಟಡದ ಎರಡನೇ ಮಹಡಿಯಲ್ಲಿ ವಾಸವಾಗಿದ್ದ ಬಸವರಾಜ್ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಏಳು ಮಂದಿ ನಿದ್ದೆ ಮಂಪರಿನಲ್ಲಿಯೇ ಭೀತರಾಗಿ ಹೊರ ಜಿಗಿದು ಬಂದಿದ್ದಾರೆ.
ಲಕ್ಷಾಂತರ ನಷ್ಟ: ಘಟನೆಯಿಂದ ಫಲಾಮೃತ ಐಸ್ಕ್ರೀಮ್ಸ್ ಮಳಿಗೆಯಲ್ಲಿದ್ದ ಪೀಠೊಪಕರಣಗಳು, ಯಂತ್ರೋಪರಣಗಳು ಸೇರಿದಂತೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆಯೆಂದು ಅಂದಾಜು ಮಾಡಲಾಗಿದೆ. ಸುಮಾರು ಎಂಭತ್ತು ವರ್ಷಗಳ ಹಿಂದೆ ಮಣ್ಣಿನಲ್ಲಿ ನಿರ್ಮಾಣ ಮಾಡಿದ್ದ ಕಟ್ಟಡದ ಮೇಲೆಯೇ ವಾಣಿಜ್ಯ ಕಾರಣಗಳಿಗಾಗಿ ಮೂರು ಅಂತಸ್ತು ನಿರ್ಮಿಸಲಾಗಿತ್ತು. ಇದರ ಭಾರವನ್ನು ಹೊರಲಾಗದೆ ಕಟ್ಟಡ ಕುಸಿದು ಬಿದ್ದಿದೆಯೆಂದು ಅಂದಾಜಿಸಲಾಗಿದೆ.
ತಡವಾಗಿದ್ದರೆ ಅಪಾಯ: ಕಟ್ಟಡವು ಪಕ್ಕದ ಕಟ್ಟಡದ ಮೇಲೆ ಉರುಳಿ ಬಿದ್ದಿದ್ದರಿಂದ ಆ ಕಟ್ಟಡಕ್ಕೂ ಕೊಂಚ ಹಾನಿಯಾಗಿದೆ. ಪಕ್ಕದ ಕಟ್ಟಡದ ಛಾವಣಿಯಲ್ಲಿದ್ದ ನಾಯಿಯನ್ನು ರಕ್ಷಿಸಲಾಗಿದೆ. ಒಂಭತ್ತು ಗಂಟೆಯ ನಂತರ ಇದೇ ಘಟನೆ ಜರುಗಿದ್ದರೆ ಕನಿಷ್ಠ ಐವತ್ತು ಮಂದಿಗಾದರೂ ಅಪಾಯವಾಗುತ್ತಿತ್ತು.
ನಾಗರಿಕರು ನೀಡಿದ ದೂರಿನ ಮೇರೆಗೆ ಬೆಸ್ಕಾಂನವರು ಆಗಮಿಸಿ ಕುಸಿದ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಈ ಮೂಲಕ ಆಗಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಡೆದರು. ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಟ್ಟಡದ ಸುತ್ತಲೂ ಜಮಾಯಿಸಿದ್ದ ಜನರನ್ನು ದೂರ ಕಳುಹಿಸಿದರು.
ಕುಸಿದು ಬಿದ್ದಿದ್ದ ಕಟ್ಟಡವನ್ನು ಮಧ್ಯಾಹ್ನದ ವೇಳೆಗೆ ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು. ನಗರದಲ್ಲಿ ಇದೇ ರೀತಿಯಲ್ಲಿ ಹಲವಾರು ಹಳೆಯ ಕಟ್ಟಡಗಳು ಕುಸಿದು ಬೀಳುವ ಆತಂಕವನ್ನು ಸೃಷ್ಟಿಸುತ್ತಿದೆ. ನಗರಸಭೆ ಕೂಡಲೇ ಗಮನ ಹರಿಸಿ ಇಂತಹ ಕಟ್ಟಡಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿ ಆಗಲಿರುವ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.