Advertisement

ತುತ್ತಿನ ಚೀಲ ತುಂಬಿಸಲು ಚಿಂದಿ ಆಯುವ ಅಜ್ಜಿ 

12:36 PM Jun 17, 2018 | Team Udayavani |

ಸುಬ್ರಹ್ಮಣ್ಯ : ಪ್ರೀತಿಯಿಂದ ಬೆಳೆಸಿದ ಮಗಳು ಹಡೆದವ್ವಳನ್ನೆ ತನ್ನ ಪತಿಯ ಗಂಡನ ಜತೆ ಸೇರಿ ಹೊರ ಹಾಕಿದ ಘಟನೆಯಿದು. ಪರಿಣಾಮವಾಗಿ ಕೇರಳದ ಈ ವೃದ್ಧೆ ಈಗ ಕುಕ್ಕೆ ಸುಬ್ರಹ್ಮಣ್ಯ ಸೇರಿದ್ದಾರೆ, ತುತ್ತಿಗಾಗಿ ಇಲ್ಲಿ ಅಲೆದಾಡುತ್ತಿದ್ದಾರೆ. ಈ ನತದೃಷ್ಟ ವೃದ್ಧೆಯ ಕರುಣಾಜನಕ ಕಥೆ ಕೇಳಿದರೆ ಕರುಳು ಚುರುಕು ಎನ್ನದಿರದು.

Advertisement

ಸ್ವಂತ ಮಗಳಿಂದಲೇ ಪರಿತ್ಯಕ್ತೆಯಾಗಿ ಬಂದ ಈ ವೃದ್ಧೆ ಈಗ ಕುಕ್ಕೆ ಸುಬ್ರಹ್ಮಣ್ಯ ಪರಿಸರ ದಲ್ಲಿ ಒಂಟಿಯಾಗಿ ವಾಸವಿದ್ದಾರೆ. ಇಲ್ಲಿನ ದೇಗುಲದ ಛತ್ರ ಹಾಗೂ ಬಸ್‌ ನಿಲ್ದಾಣ ಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಹಗಲಿನಲ್ಲಿ ಬಿರು ಬಿಸಿಲಿನಲ್ಲಿ ಅಲೆದು ಚಿಂದಿ ಆಯ್ದು ಗುಜರಿ ಅಂಗಡಿಗೆ ಮಾರಿ ಅಷ್ಟಿಷ್ಟು ಸಂಪಾ ದಿಸಿ ಜೀವನ ಸಾಗಿಸುತ್ತಿದ್ದಾರೆ.

ಎರ್ನಾಕುಲಂನವರು
ಮಧ್ಯ ಕೇರಳದ ಎರ್ನಾಕುಳಂನ ಆಲುವಾ ಸಮೀಪದ ವಿಮಾನ ನಿಲ್ದಾಣ ಸನಿಹದವ ರಾದ ಕಾರ್ತ್ಯಾಯಿನಿ  ಅವರಿಗೆ ಈಗ 75ರ ಇಳಿವಯಸ್ಸು. ಈಕೆಯ ಪತಿ ಮಾಧವನ್‌ ಮರ ಸೀಳುವ ವೃತ್ತಿ ಮಾಡುತ್ತಿ ದ್ದರು. ಸುಮಾರು ಏಳು ಎಕರೆ ಆಸ್ತಿ ಕೂಡ ಈ ದಂಪತಿಗಿತ್ತು. ಮಧ್ಯಮ ವರ್ಗದ ಕುಟುಂಬ. ಹಣದ ಕೊರತೆ ಇರಲಿಲ್ಲ. ಒಬ್ಬಳೇ ಮಗಳು ಗಿರಿಜಾಳನ್ನು ಚೆನ್ನಾಗಿ ಸಾಕಿದ್ದರು.

ಮರ ಸೀಳುವ ವೃತ್ತಿಯಲ್ಲಿ ಸಂಪಾದನೆ ಚೆನ್ನಾಗಿದ್ದಾಗ ಮಾಧವನ್‌ ಮೋಜು ಮಸ್ತಿಗೆ ಮುಂದಾಗಿ ದುಶ್ಚಟಗಳ ಕಡೆ ಮನಸ್ಸು ಹೊರಳಿಸಿದ. ಖರ್ಚು ಮಿತಿಮೀರಿತು. ಜೂಜು, ಲಾಟರಿ, ಕುಡಿತದ ದುಶ್ಚಟಗಳಿಗೆ ಬಲಿಯಾದ ಕಾರಣ ಮಾಧವನ್‌ ಬಳಿ ಇದ್ದ ಆಸ್ತಿ ಕರಗಿತು. ಕೊನೆಗೊಮ್ಮೆ ದುಶ್ಚಟವೇ ಅವರ ಸಾವಿಗೆ ಕಾರಣವಾಯಿತು. ಮಗು ಹುಟ್ಟಿದ ಸ್ವಲ್ಪ ಅವಧಿಯಲ್ಲಿ ಮಾಧವನ್‌ ಮೃತಪಟ್ಟರು.

ಮನೆ ನಿಭಾಯಿಸಿದ ಕಾರ್ತ್ಯಾಯಿನಿ 
ಗಂಡನ ಮರಣಾನಂತರ ಮನೆ ಮತ್ತು ಮಗಳ ಜವಾಬ್ದಾರಿ ಕಾರ್ತ್ಯಾಯಿನಿ ಅವರ ಹೆಗಲಿಗೇರಿತು. ಮನೆಯಲ್ಲಿ ಬಡತನ, ಮಗಳ ಶಿಕ್ಷಣ ಇವೆರಡನ್ನೂ ನಿಭಾಯಿಸಲು ಆಕೆ ಕಾಫಿ ತೋಟಕ್ಕೆ ತೆರಳಿ ದುಡಿದರು. ಮಗಳನ್ನು ಹತ್ತನೇ ತನಕ ಓದಿಸಿದರು. ಮಗಳು ವಯಸ್ಸಿಗೆ ಬಂದಾಗ ವಿವಾಹ ಮಾಡಿಕೊಡುವ ವೇಳೆ ಗಂಡಿನ ಕಡೆಯವರು ಕೇಳಿದ ವರದಕ್ಷಿಣೆ, ಆಭರಣ ನೀಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ
ಸ್ವಂತ ಮನೆಯನ್ನೇ ಮಗಳ ಹೆಸರಿಗೆ ಮಾಡಿಕೊಟ್ಟರು. ಮದುವೆಯ ಬಳಿಕ ಮಗಳು – ಅಳಿಯನಿಗೆ ನೀಡಿ ಅವರ ಜತೆ ತಾನು ವಾಸವಿದ್ದರು.

Advertisement

ಕಿರುಕುಳಕ್ಕೆ ಮನೆ ಬಿಟ್ಟ ವೃದ್ಧೆ
ಆರಂಭದಲ್ಲಿ ಮಗಳು-ಅಳಿಯ ವೃದ್ಧೆ ಕಾರ್ತ್ಯಾಯಿನಿ  ಅವರನ್ನು ಚೆನ್ನಾಗಿಯೇ ನೋಡಿಕೊಂಡರೂ ಬಳಿಕ ಕಿರುಕುಳ ನೀಡಲಾರಂಭಿಸಿದರು. ಕಿರುಕುಳದಿಂದ ಬೇಸತ್ತ ಕಾರ್ತ್ಯಾಯಿನಿ ಹತ್ತು ವರ್ಷ ಗಳ ಹಿಂದೆ ಮನೆ ತೊರೆದಿದ್ದಾರೆ. ಆರಂಭದ ದಿನಗಳಲ್ಲಿ ಕೇರಳದ ಕೆಲವು ಕಡೆಗಳಲ್ಲಿ ಕೂಲಿ ಕೆಲಸ ಮಾಡಿದರು. ಬಳಿಕ ಅಲ್ಲಿಂದ ರೈಲು ಮೂಲಕ ಮಂಗಳೂರಿಗೆ ಬಂದು ಅಲ್ಲಿನ ಮುಸ್ಲಿಂ ಕುಟುಂಬವೊಂದರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆ ಕುಟುಂಬ ದುಬೈಗೆ ಹೊರಟು ಹೋದಾಗ ಮತ್ತೆ ದಿಕ್ಕಿಲ್ಲದಾದ ಕಾರ್ತ್ಯಾಯಿನಿ ಧರ್ಮಸ್ಥಳಕ್ಕೆ ತೆರಳಲು ನಿರ್ಧರಿಸಿದ್ದರು. ಆದರೆ ಹಾಗೆ ಮಾಡದೆ ಕುಕ್ಕೆ ಸುಬ್ರಹ್ಮಣ್ಯದ ಹಾದಿ ಹಿಡಿದು ಇಲ್ಲಿಗೆ ಆಗಮಿಸಿ ವಾಸವಿದ್ದಾರೆ.

ಸಾಕಿದ ಗಿಣಿಯೇ ಕುಕಿತು!
ತಾನು ಸಾಕಿದ ಮುದ್ದಿನ ಮಗಳು ತನ್ನನ್ನು ಮನೆಯಿಂದ ಹೊರಹಾಕಿದ ಬೇಸರ, ನೋವು ಕಾರ್ತ್ಯಾಯಿನಿ ಅವರನ್ನು ಕಾಡುತ್ತಲೇ ಇದೆ. ಪತಿಯ ಸಾವಿನ ಬಳಿಕ ಮಗಳನ್ನು ಕಷ್ಟಪಟ್ಟು ಸಾಕಿದೆ. ಪತಿ ಸಹಿತ ಆಕೆ ಚೆನ್ನಾಗಿರಲೆಂದು ಮನೆಯನ್ನು ಕೊಟ್ಟೆ. ಆದರೆ ಆಕೆ ನನ್ನನ್ನೇ ಮನೆಯಿಂದ ಹೊರಹಾಕಿದಳು. ದೇವರು ಅವಕಾಶ ಕೊಡುವ ತನಕ ಈ ರೀತಿ ಬದುಕುತ್ತೇನೆ. ಪುಣ್ಯಾತ್ಮರು ಕೆಲವರು ನನ್ನನ್ನು ನೋಡಿ ಅಷ್ಟಿಷ್ಟು ಹಣ ಕೊಡುತ್ತಾರೆ. ಇದು ಮತ್ತು ಗುಜರಿ ಮಾರಿದ ಹಣದಿಂದ ಜೀವನ ಸಾಗುತ್ತದೆ. ರೋಗಗಳು ಬಾಧಿಸಿದರೆ ಪುಣ್ಯ ಕ್ಷೇತ್ರದಲ್ಲಿ ಪ್ರಾಣ ಬಿಟ್ಟು ಮಣ್ಣಾಗುತ್ತೇನೆ. ಇದಕ್ಕಿಂದ ಭಾಗ್ಯ ಇನ್ನೇನಿದೆ ಎಂದು ಹೆಪ್ಪುಗಟ್ಟಿದ ನೋವಿನಲ್ಲಿ ನೊಂದು ನುಡಿಯುತ್ತಾರೆ ಕಾರ್ತ್ಯಾಯಿನಿ. ಮಗಳಿಗೆ ಮೂರು ಮಂದಿ ಹೆಣ್ಣು ಮಕ್ಕಳಿದ್ದಾರೆ ಎಂದು ಹೇಳಲು ಆಕೆ ಮರೆಯುವುದಿಲ್ಲ.

ಸಚ್ಛತೆಗೆಗೂ ಕೊಡುಗೆ 
ಭಕ್ತರು, ಯಾತ್ರಾರ್ಥಿಗಳಿಂದ ಜನದಟ್ಟಣೆ ಹೆಚ್ಚಾಗಿ ಕಸ, ತ್ಯಾಜ್ಯದಿಂದ ತುಂಬಿರುವ ಕ್ಷೇತ್ರದ ಸ್ವಚ್ಛತೆಗೂ ಇವರದು ಕೊಡುಗೆ ಇದೆ. ಪುಣ್ಯ ಕ್ಷೇತ್ರದ ಛತ್ರ, ಬಸ್‌ ನಿಲ್ದಾಣ ಹಾಗೂ ಇನ್ನಿತರ ಕಡೆಗಳಲ್ಲಿ ಹರಡಿರುವ ಪ್ಲಾಸ್ಟಿಕ್‌, ಬಾಟಲಿ, ತ್ಯಾಜ್ಯ, ಆಯುವ ಕೆಲಸದಲ್ಲಿ ನಿರತರಾಗಿರುವ ಈಕೆ ಬಳಿಕ ಅದನ್ನು ಗುಜರಿ ಅಂಗಡಿಗೆ ಮಾರಿ ಬಂದ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ, ನಗರದ ಸ್ವಚ್ಛತೆಗೆಗೂ ಕೊಡುಗೆ ನೀಡುತ್ತಿದ್ದಾರೆ.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next