Advertisement

ಮಲ ಹೊರಿಸಿದರೆ ಅಧಿಕಾರಿ ಹೊಣೆ

12:19 PM Aug 06, 2017 | Team Udayavani |

ಮೈಸೂರು: ಮಲ ಹೊರುವ ಪದ್ಧತಿ ನಿಷೇಧವಾಗಿದ್ದರೂ ಇಂದಿಗೂ ಅಲ್ಲಲ್ಲಿ ಮಲಹೊರುವುದು ಕಂಡುಬರುತ್ತಿದೆ. ಈ ಪ್ರಕರಣಗಳ ಬಗ್ಗೆ ದೂರುಗಳು ಕೇಳಿಬರುತ್ತಲೇ ಇರುತ್ತವೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಈ ರೀತಿ ಮ್ಯಾನ್ಯುಯಲ್‌ ಸ್ಕಾವೆಂಜರ್ ಗುಂಡಿಗೆ ಇಳಿಯುವ ಪ್ರಕರಣ ಕಂಡುಬಂದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಹಣ ದುರುಪಯೋಗ: ಪೌರ ಕಾರ್ಮಿಕರಿಗೆ ಕೆಲಸದ ವೇಳೆಯಲ್ಲಿ ಅಗತ್ಯ ಸುರûಾ ಪರಿಕರಗಳನ್ನು ಕಡ್ಡಾಯವಾಗಿ ಕೊಡಬೇಕು. ಮೈಸೂರು ಮಹಾ ನಗರಪಾಲಿಕೆಯಿಂದ 1,648 ಗುತ್ತಿಗೆ ಪೌರ ಕಾರ್ಮಿಕರಿಗೆ ಸಂಬಳ ಪಾವತಿಸಲಾಗುತ್ತಿದೆ. ಆದರೆ, ವಾಸ್ತವವಾಗಿ ಅಷ್ಟು ಜನ ಗುತ್ತಿಗೆ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿದರು. 

ಬಹುತೇಕ ಸಂದರ್ಭಗಳಲ್ಲಿ ಪೌರ ಕಾರ್ಮಿಕರ ಗುತ್ತಿಗೆದಾರರು ಮನೆಯಲ್ಲಿರುವ ಪೌರಕಾರ್ಮಿಕರ ಸಹಿ ಪಡೆದು ಹಣ ದುರುಪಯೋಗ ಮಾಡಿಕೊಳ್ಳುವ ಉದಾಹರಣೆಗಳಿವೆ.  ಹಾಜರಾತಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಕಲ್ಪಿಸಿದ್ದರೂ ಈ ಯಂತ್ರವನ್ನೇ ಪೌರಕಾರ್ಮಿಕರ ಮನೆಗೆ ಕೊಂಡೊಯ್ದು ಹಾಜರಿ ಪಡೆದ ಉದಾಹರಣೆಗಳಿವೆ. ಈ ಬಗ್ಗೆ ಎಚ್ಚರವಹಿಸಿ ಎಂದು ಮಹಾ ನಗರಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಾರ್ಮಿಕರಿಗೆ ಸೂರು: 2020ರ ಹೊತ್ತಿಗೆ ದೇಶದ ಎಲ್ಲ ಪೌರಕಾರ್ಮಿಕರಿಗೆ ತಲೆಯ ಮೇಲೊಂದು ಸೂರು ಕಲ್ಪಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸು. ಅದು ಸಾಕಾರಗೊಳ್ಳಬೇಕಾದರೆ ತಳಮಟ್ಟದಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.

Advertisement

ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಆದಷ್ಟು ಆ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸಿ, ಇತರೆ ಶಾಲೆಗಳಿಗೆ ದಾಖಲಿಸಿದರೆ ಆರಂಭದಲ್ಲೇ ಶುಲ್ಕ ಪಾವತಿಸಲು ಹಣ ಬಿಡುಗಡೆ ಮಾಡಿ ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಕ್ಕಿಂಗ್‌, ಜಟ್ಟಿಂಗ್‌ ಯಂತ್ರ: ಗ್ರಾಮೀಣ ಪ್ರದೇಶದಲ್ಲಿ ಮಲಹೊರುವ ಪದ್ಧತಿ ತಪ್ಪಿಸಬೇಕಾದರೆ ಗ್ರಾಮೀಣಭಿವೃದ್ಧಿ ಇಲಾಖೆ ಸಕ್ಕಿಂಗ್‌ ಮತ್ತು ಜಟ್ಟಿಂಗ್‌ ಯಂತ್ರಗಳನ್ನು ಖರೀದಿಸಬೇಕು. ಇದಕ್ಕಾಗಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ನೇರ ಸಾಲಸೌಲಭ್ಯ ನೀಡುವಾಗ ಸ್ಥಳೀಯ ಸಂಸ್ಥೆಗಳಿಗೆ ಉಪಯೋಗವಾಗುವ ಈ ರೀತಿಯ ಸಕ್ಕಿಂಗ್‌-ಜಟ್ಟಿಂಗ್‌ ಯಂತ್ರಗಳು, ಕಸ ಸಾಗಿಸುವ ವಾಹನ ಖರೀದಿಗೆ ಅರ್ಜಿ ಹಾಕಿಸಿ, ಸಾಲ ತೆಗೆದುಕೊಂಡವರಿಗೂ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ರಾಜ್ಯದಲ್ಲಿ 35 ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕಿದೆ. ಇದಕ್ಕಾಗಿ 10 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ರಾಜ್ಯಸರ್ಕಾರ ಹೇಳುತ್ತದೆ. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಅಗತ್ಯ ಅನುದಾನ ಕೊಡಿಸುವುದಾಗಿ ಹೇಳಿದ ನಂತರ 11 ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸಿದ್ದು, ಬಜೆಟ್‌ ಆಧರಿಸಿ ಮುಂದಿನ ದಿನಗಳಲ್ಲಿ ಉಳಿದ ಗುತ್ತಿಗೆ ಪೌರಕಾರ್ಮಿಕರನ್ನೂ ಕಾಯಂಗೊಳಿಸುವುದಾಗಿ ಹೇಳಿದೆ ಎಂದು ತಿಳಿಸಿದರು.

ಉಪಾಹಾರ ಕೊಡಿಸಿ: ಜಿಲ್ಲೆಯ ಎಲ್ಲ ನಗರಸ್ಥಳೀಯ ಸಂಸ್ಥೆಗಳೂ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಬೆಳಗಿನ ಉಪಾಹಾರ ಕೊಡಿಸುವ ವ್ಯವಸ್ಥೆ ಮಾಡಬೇಕು.  ಉಪಾಹಾರದ ಬದಲಿಗೆ ಕೆಲವೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ತಲಾ 20 ರೂ. ಕೊಡಲಾಗುತ್ತಿದೆ, ಇದು ಸರಿಯಲ್ಲ ಎಂದರು.

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಭಾರತಿ ಮಾತನಾಡಿ, ಜಿಲ್ಲೆಯಲ್ಲಿ 10,090 ಕುಟುಂಬಗಳಿಂದ 30,270 ಜನರನ್ನು ಸಫಾಯಿ ಕರ್ಮಚಾರಿಗಳೆಂದು ಗುರುತಿಸಲಾಗಿದೆ. ಈವರೆಗೆ 2,923 ಜನರಿಗೆ ವಿವಿಧ ಸೌಲಭ್ಯ ನೀಡಲಾಗಿದೆ. ಕಳೆದ ವರ್ಷ 300 ಜನರಿಗೆ ನೇರ ಸಾಲ ನೀಡುವ ಗುರಿ ನೀಡಲಾಗಿತ್ತು ಈ ಪೈಕಿ 211 ಜನರು ಸಾಲ ಸೌಲಭ್ಯ ಪಡೆದಿದ್ದಾರೆಂದು ವಿವರಿಸಿದರು.

ತಂತ್ರಜಾnನ ಅಳವಡಿಸಿಕೊಳ್ಳಿ: ಶೌಚಾಲಯ ಗುಂಡಿಗೆ ಮನುಷ್ಯ ಇಳಿದು ಸ್ವತ್ಛ ಮಾಡುವುದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ. ಇದಕ್ಕಾಗಿ ಮಲ ಶೌಚಗುಂಡಿಯಲ್ಲೇ ಇಂಗುವಂತಹ ತಾಂತ್ರಿಕತೆ ಬಂದಿದೆ. ಅದನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ರಂದೀಪ್‌ ಡಿ., ಮೈಸೂರು ಉಪ ವಿಭಾಗಾಧಿಕಾರಿ ಶಿವೇಗೌಡ, ನಗರಪಾಲಿಕೆ ಆಯುಕ್ತ ಜಿ.ಜಗದೀಶ್‌, ಹೆಚ್ಚುವರಿ ಆಯುಕ್ತ ರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರಭಾ, ಪೌರಕಾರ್ಮಿಕ ಮುಖಂಡರಾದ ರಾಚಯ್ಯ, ಎಂ.ಆರ್‌.ವೆಂಕಟೇಶ್‌, ಮಾರ ಮೊದಲಾದವರು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next