ಉಡುಪಿ: ಪತ್ರಕರ್ತರಿಗೂ ಎಲ್ಲರಿಗಿರುವಂತೆ ಪಕ್ಷಗಳ ಭಾವನೆ ಇರುತ್ತದೆ. ಆದರೆ ವರದಿ ಮಾಡುವಾಗ ವಸ್ತುನಿಷ್ಠೆ ಇರಬೇಕು ಎಂದು ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಕರೆ ನೀಡಿದರು.
ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಪೇಜಾವರ ಮಠ, ಬನ್ನಂಜೆ ರಾಮಾಚಾರ್ಯ ಜನ್ಮಶತಾಬ್ದ ಸಮಿತಿ ಆಶ್ರಯದಲ್ಲಿ ರಾಜಾಂಗಣದಲ್ಲಿ ಶನಿವಾರ ನಡೆದ ಉದಯವಾಣಿ ಆರಂಭದ ಸಂಪಾದಕೀಯ ವಿಭಾಗದ ಮುಖ್ಯಸ್ಥ ಬನ್ನಂಜೆ ರಾಮಾಚಾರ್ಯ ಜನ್ಮಶತಾಬ್ದ ಸಮಾರಂಭದ ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬನ್ನಂಜೆ ರಾಮಾಚಾರ್ಯರು ಮೂರು ಮಾಸಪತ್ರಿಕೆ, ಎರಡು ದಿನ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಜೀವನ ಮೌಲ್ಯವನ್ನು ಎತ್ತಿ ಹಿಡಿದವರು. ಕರಾವಳಿಯಲ್ಲಿ ಇವರಷ್ಟು ಸುದೀರ್ಘ ಕಾಲ ಪತ್ರಿಕಾರಂಗಕ್ಕೆ ಸೇವೆ ಸಲ್ಲಿಸಿದವರು ಇನ್ನೊಬ್ಬರಿಲ್ಲ ಎಂದರು.
ಈಗ ಮೌಲ್ಯ ಕುಸಿತ ಪತ್ರಿಕಾರಂಗದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲಿಯೂ ಕಾಣುತ್ತಿದೆ. ವೈಯಕ್ತಿಕ ಉದ್ದೇಶಗಳನ್ನು ತೀರಿಸಿಕೊಳ್ಳಲು ಮಾಧ್ಯಮಕ್ಷೇತ್ರವಲ್ಲ ಎಂದ ಆಳ್ವರು, ರಾಮಾಚಾರ್ಯರಂತಹವರ ಜೀವನ ಸಂದೇಶವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಆಶಿಸಿದರು. ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಮಾರಂಭವನ್ನು ಉದ್ಘಾಟಿಸಿದರು.
“ರಾಮಾಚಾರ್ಯರೆಂದಾಗ ಎತ್ತರದ ಶರೀರ, ಖಾದಿ ಬಟ್ಟೆ ಕಣ್ಣೆದುರು ಬರುತ್ತದೆ. ಮಾಧ್ಯಮ ರಂಗ ಪ್ರಜಾಪ್ರಭುತ್ವದ ನಾಲ್ಕು ಆಧಾರಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟರೂ ಈಗ ಅದು ವ್ಯಾಪಾರ ನಡೆದಂತೆ ನಡೆಯುತ್ತಿದೆ, ಅದರ ತೂಕ, ಘನತೆ ಕಡಿಮೆಯಾಗುತ್ತಿದೆಯೋ ಎಂದು ಭಾಸವಾಗುತ್ತಿದೆ. ಹಾಗಾಗಬಾರದು. ಹಿರಿಯರ ಬದುಕಿನ ಮಾರ್ಗದರ್ಶನ ಕಾಲಕಾಲಕ್ಕೆ ನೆನಪಿಗೆ ತಂದು ತಪ್ಪಿದ ದಾರಿಯನ್ನು ಸಹಜಸ್ಥಿತಿಗೆ ತರಬೇಕು’ ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ತಿಳಿಸಿದರು.
ರಾಮಾಚಾರ್ಯರ ನಿಷ್ಠುರವಾದಿ ವಿಶಿಷ್ಟ ವ್ಯಕ್ತಿತ್ವವನ್ನು, ತಡರಾತ್ರಿ ವರೆಗೆ “ಉದಯವಾಣಿ’ ಕಚೇರಿಯಲ್ಲಿ ನಿಂತು ನಿರ್ವಹಿಸುತ್ತಿದ್ದ ಕೆಲಸವನ್ನು ಜನ್ಮಶತಾಬ್ದ ಸಮಿತಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಯು.ಆರ್. ಸಭಾಪತಿ ಪ್ರಸ್ತಾವನೆಯಲ್ಲಿ ನೆನಪಿಸಿಕೊಂಡರು. ಸಮಿತಿ ಗೌರವ ಅಧ್ಯಕ್ಷ ಎ.ಎಸ್.ಎನ್. ಹೆಬ್ಟಾರ್, ಅಧ್ಯಕ್ಷ ರತ್ನಕುಮಾರ್, ಸರ್ವಜ್ಞ ಬನ್ನಂಜೆ ಉಪಸ್ಥಿತರಿದ್ದರು.