Advertisement
ಸಾಮಾನ್ಯವಾಗಿ ಕೇಂದ್ರ ಕಾರಾ ಗೃಹಗಳಲ್ಲಿ ಕೈದಿಗಳಿಗೆ ಕೆಲಸ ಕೊಟ್ಟು ಅವರಿಗೆ ಸಂಭಾವನೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ವಿಚಾರಣಾಧೀನ ಕೈದಿಗಳಿರುವ ಜಿಲ್ಲಾ ಕಾರಾಗೃಹಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ. ಇದೀಗ ಸರಕಾರವು ಜಿಲ್ಲಾ ಕಾರಾಗೃಹಗಳಲ್ಲಿಯೂ ಕೈದಿಗಳಿಗೆ ವೃತ್ತಿ ತರಬೇತಿ ನೀಡಲು ಸಿದ್ಧತೆ ನಡೆದಿದೆ. ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿಯೂ ಕೆಲವು ಯೋಜನೆಗಳನ್ನು ಹಾಕಿಕೊಳ್ಳಲು ಚಿಂತನೆ ನಡೆಸಲಾಗಿದೆ. ಇದರಲ್ಲಿ “ನರ್ಸರಿ’ಗೆ ಕೂಡ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಕೈದಿಗಳು ಹಗಲಿರುಳು ಕಾರಾಗೃಹದೊಳಗೇ ಇರುವ ಬದಲು ಹೊರಾಂಗಣದಲ್ಲಿ ದೈಹಿಕ ಶ್ರಮ ನಡೆಸು ವುದಕ್ಕೂ ನರ್ಸರಿ ಕೆಲಸ ಪೂರಕವಾಗಲಿದೆ. ಅಲ್ಲದೆ ಪರಿಸರದ ಸಂರಕ್ಷಣೆಗೂ ಕೊಡುಗೆ ನೀಡಿದಂತಾಗಲಿದೆ ಎನ್ನುತ್ತಾರೆ ಕಾರಾಗೃಹದ ಅಧಿಕಾರಿಗಳು.
ಹಾಸನದ ಜಿಲ್ಲಾ ಕಾರಾಗೃಹದಲ್ಲಿ ಕಳೆದ ಸುಮಾರು ಐದೂವರೆ ವರ್ಷಗಳಲ್ಲಿ ಕಾರಾಗೃಹದ ನರ್ಸರಿಯಲ್ಲಿ ಸುಮಾರು 9,000 ಗಿಡಗಳನ್ನು ಬೆಳೆಸಿ ಸಾರ್ವಜನಿಕರು, ವಿವಿಧ ಸಂಘ – ಸಂಸ್ಥೆಗಳಿಗೆ ವಿತರಿಸಲಾಗಿದೆ. ಆಸಕ್ತ ಕೈದಿಗಳೇ ಪ್ರತಿದಿನ ಅರ್ಧ ತಾಸು ನರ್ಸರಿ ನಿರ್ವಹಣೆ ಮಾಡಿದ್ದಾರೆ. ಅದೇ ರೀತಿ ಮಂಗಳೂರಿನ ಕಾರಾಗೃಹದಲ್ಲಿಯೂ ಆಸಕ್ತ ವಿಚಾರಣಾಧೀನ ಕೈದಿಗಳನ್ನು ನರ್ಸರಿ ಕೆಲಸದಲ್ಲಿ ತೊಡಗಿಸುವ ಉದ್ದೇಶ ಹೊಂದಲಾಗಿದೆ. ಸ್ಥಳೀಯವಾಗಿ ಬೇಡಿಕೆ ಇರುವ, ಸುಲಭವಾಗಿ ನಿರ್ವಹಿಸಬಹುದಾದ ಗಿಡಗಳನ್ನು ಬೆಳೆಸಲು ಚಿಂತನೆ ನಡೆಸಲಾಗಿದೆ. ನ್ಯಾಯಯುತಗಳಿಕೆಗೆ ತರಬೇತಿ
ನ್ಯಾಯಯುತ ಗಳಿಕೆಗೆ ಕೈದಿಗಳಿಗೆ ತರಬೇತಿ ಕೊಡಿಸಬೇಕೆಂದು ಇಲಾಖೆಯ ನಿರ್ದೇಶನವಿದ್ದು, ಅದರಂತೆ ಮಂಗಳೂರು ಕಾರಾಗೃಹದ ವಿಚಾರಣಾಧೀನ ಕೈದಿಗಳಿಗೆ ಜಿಲ್ಲಾಡಳಿತದ ಸಹಕಾರದೊಂದಿಗೆ ನರ್ಸರಿ, ಟೈಲರಿಂಗ್, ಕಂಪ್ಯೂಟರ್ ತರಬೇತಿ ನೀಡುವ ಉದ್ದೇಶವಿದೆ. ಹಾಸನ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕನಾಗಿದ್ದಾಗ ವರ್ಷಕ್ಕೆ 1ರಿಂದ 2,000ದಷ್ಟು ಗಿಡಗಳನ್ನು ನರ್ಸರಿಯಲ್ಲಿ ಬೆಳೆಸಿದ್ದೆವು. ಅದೇರೀತಿ ಮಂಗಳೂರಿನಲ್ಲಿಯೂ ಗಿಡ ಬೆಳೆಸುವ ಯೋಚನೆ ಇದೆ.
– ಬಿ.ಟಿ. ಓಬಳೇಶಪ್ಪ, ಅಧೀಕ್ಷಕರು, ಜಿಲ್ಲಾ ಕಾರಾಗೃಹ, ಮಂಗಳೂರು