Advertisement

ಆಧುನಿಕ ತಂತ್ರಜ್ಞಾನದಿಂದ ಓದುಗರ ಸಂಖ್ಯೆ ಕ್ಷೀಣ

11:58 AM Nov 20, 2018 | |

ಸೇಡಂ: ಆಧುನಿಕ ತಂತ್ರಜ್ಞಾನದಿಂದ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಪತ್ರಿಕೆಗಳಲ್ಲಿ ಬರುವ ಲೇಖನಗಳು ಜಾಸ್ತಿಯಾಗಿವೆ ಆದರೆ ಸಾಹಿತ್ಯಾಸಕ್ತರು ಕಡಿಮೆಯಾಗಿದ್ದಾರೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ಪಟ್ಟಣದ ಮಾತೃಛಾಯಾ ಕಾಲೇಜು ಪ್ರಾಂಗಣದಲ್ಲಿ ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರ 54ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಹಿತ್ಯ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಅನಾದಿಕಾಲದಲ್ಲಿ ಜ್ಞಾನದ ಜ್ಯೋತಿ ಬೆಳಗಲು ವೇದ, ಪುರಾಣ, ಉಪನಿಷತ್ತುಗಳಿದ್ದವು. 

ಬರಬರುತ್ತ ಆಧುನಿಕ ತಂತ್ರಜ್ಞಾನದ ಎದುರು ಸುಧಾ-ತರಂಗದಂತಹ ಬಹು ಸಂಖ್ಯೆ ಓದುಗರನ್ನು ಹೊಂದಿದ್ದ ಪತ್ರಿಕೆಗಳು ಕುಂದುತ್ತ ಬಂದವು. ಈಗ ದೈನಂದಿನ ಸಾಹಿತ್ಯ ಗೊಂದಲ ಸೃಷ್ಟಿಸುತ್ತಿದೆ. ಇದರಿಂದ ನಿಜವಾದ ಸಾಹಿತ್ಯ ಗುರುತಿಸುವುದು ಕಷ್ಟಕರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬದುಕಿಗೆ ಆನಂದ ಕೊಡುವ ಸುಂದರ ಸಾಹಿತ್ಯದ ಅವಶ್ಯಕತೆ ಇದೆ. ಸತ್ಸಂಗ, ವಾಣಿಯಿಂದ ಬದುಕು ಬದಲಾವಣೆ ಸಾಧ್ಯ.
ಜಗವೆಲ್ಲ ಕಲ್ಯಾಣವಾಗಲು ಉತ್ತಮ ಸಾಹಿತ್ಯ ಬೇಕು ಎಂದು ಹೇಳಿದರು. 

ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಶಿವಯ್ಯ ಮಠಪತಿ, ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ, ಭಾಲ್ಕಿ ಜಿಲ್ಲೆ ಮೇಹಕಲ್‌ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ಶ್ರೀದೇವಿ ಖಂಡಾಳೆ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿದರು.

Advertisement

ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯರು. ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಸಿದ್ದಪ್ಪ ತಾತ, ಮಳಖೇಡದ ಕೊಟ್ಟೂರೇಶ್ವರ ಸ್ವಾಮೀಜಿ, ಮಾಜಿ ಶಾಸಕ ಡಾ| ನಾಗರೆಡ್ಡಿ ಪಾಟೀಲ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಬಸಪ್ಪ ಹಾಗರಗಿ, ಹೈಕೋರ್ಟ್‌ ವಕೀಲ ಕಾಶಿನಾಥ ಮೋತಕಪಲ್ಲಿ, ಹಾಪಕಾಮ್ಸ್‌  ರಾಜ್ಯ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ಶಂಭುರೆಡ್ಡಿ ಮದ್ನಿ, ಕಲ್ಯಾಣಪ್ಪಗೌಡ ಪಾಟೀಲ, ವಿಶ್ವನಾಥ ಪಾಟೀಲ, ಸಿದ್ದಣ್ಣಗೌಡ ಪಾಟೀಲ ಕೋಲಕುಂದಾ, ರಾಮಯ್ಯ ಪೂಜಾರಿ, ಜಗದೇವಪ್ಪ ಪಾಟೀಲ, ಡಿ.ಕೆ. ಹಿರೇಮಠ, ಎಂ.ಕೆ. ಹಿರೇಮಠ, ಶ್ರೀಕಾಂತರೆಡ್ಡಿ ಪಾಟೀಲ ಮುಧೋಳ, ಸಹಜಾನಂದ ಶಾಸ್ತ್ರಿ ಸಿಂಧನಮಡು, ಕಲ್ಲಪ್ಪ ಮುಕ್ತಾಪುರ ಇದ್ದರು. ಶಿವಶಂಕರ ಬಿರಾದಾರ ಕೋಟನೂರ ತಂಡ ಪ್ರಸ್ತುತಪಡಿಸಿದ ಸಂಗೀತ ಕಾರ್ಯಕ್ರಮ ನೆರೆದವರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು. ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಸ್ವಾಗತಿಸಿದರು. ನವಲಿಂಗ ಪಾಟೀಲ ನಿರೂಪಿಸಿ, ವಂದಿಸಿದರು.

ಸಾಹಿತಿಗಳಿಲ್ಲದ ಚಿಂತನಾ ಸಮಾವೇಶ
ಮಾತೃಛಾಯಾ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಸಾಹಿತ್ಯ ಚಿಂತನ ಸಮಾವೇಶ ಸಾಹಿತಿಗಳ ಕೆಂಗಣ್ಣಿಗೆ ಗುರಿಯಾಯಿತು. ಕಾರಣ ಸಾಹಿತಿಗಳಿಲ್ಲದೆಯೇ ಸಾಹಿತ್ಯದ ಚಿಂತನೆ ನಡೆಸುವಂತಾಗಿತ್ತು. ರಾಜ್ಯಸಭಾ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ, ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಶಿವಯ್ಯ ಮಠಪತಿ ಹೊರತುಪಡಿಸಿದರೆ ಸಾಹಿತ್ಯ ಚಿಂತನೆ ನಡೆಸುವವರು ಯಾರೂ ಇರಲಿಲ್ಲ. ಕಲಬುರಗಿ ನೆಲದಲ್ಲಿ ನೂರಾರು ಹಿರಿಯ ಸಾಹಿತಿಗಳಿದ್ದಾರೆ. ಅಂತವರ ಪೈಕಿ ಕೆಲವರನ್ನು ಆಹ್ವಾನಿಸಬಹುದಿಲ್ಲವೇ ಎಂಬ ಪ್ರಶ್ನೆಗಳು ಸಾಹಿತ್ಯ ವಲಯದಲ್ಲಿ ಕೇಳಿಬಂದವು. ಇದಲ್ಲದೆ ಪ್ರೇಕ್ಷಕರಲ್ಲೂ ಬೆರಳೆಣಿಕೆ ಸಾಹಿತಿಗಳು ಕಂಡು ಬಂದರು.

ಜಗತ್ತಿನ ಬಹುದೊಡ್ಡ ಸಾಹಿತಿ ಸುಧಾಮೂರ್ತಿ ಸುಧಾಮೂರ್ತಿ ಇಂಗ್ಲಿಷ್‌ ಜಗತ್ತಿನ ಬಹುದೊಡ್ಡ ಸಾಹಿತಿಯಾಗಿದ್ದಾರೆ. ಆದರೆ ರಾಜ್ಯದ ಸಾಹಿತಿಗಳಲ್ಲಿ ಅವರನ್ನು ಗುರುತಿಸುವವರಿಲ್ಲ. ಸಾಹಿತಿಗಳೊಂದಿಗೆ ತಿರುಗಾಡುವವರೂ ಸಹ ಸಾಹಿತಿಗಳಾ ಗುತ್ತಿರುವುದು ದುರದೃಷ್ಟಕರ ಸಂಗತಿ. ಸಾಹಿತ್ಯ ರಚನೆಗಿರುವ ಕಿಂಚಿತ್ತೂ ಕಲೆ, ಕಾಳಜಿ, ಜ್ಞಾನ ಇಲ್ಲದ ಅನೇಕರು ಪ್ರಸ್ತುತ ದಿನಗಳಲ್ಲಿ ಸಾಹಿತಿಗಳು, ಲೇಖಕರು, ಕವಿಗಳು ಎಂದು ಗುರುತಿಸಿಕೊಳ್ಳುತ್ತಿರುವುದು ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟ. 
ಡಾ| ಬಸವರಾಜ ಪಾಟೀಲ ಸೇಡಂ, ರಾಜ್ಯಸಭಾ ಮಾಜಿ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next