ಬೆಂಗಳೂರು: ಪ್ರಸ್ತುತ ದೇಶದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ಥಿತಿಗತಿ ಹಾಳಾಗುತ್ತಿದ್ದು, ಸಮಾಜವನ್ನು ಎಚ್ಚರಿಸಬೇಕಾದ ವಿಚಾರವಾದಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಚಂಪ ಹಮ್ಮಿಕೊಂಡಿದ್ದ “ಚಂಪಾ 79′ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ವಲಯದಲ್ಲಿ ತಮ್ಮ ನಡೆ ಹಾಗೂ ನುಡಿಗೆ ಸಂಬಂಧವೇ ಇಲ್ಲ ಎಂಬಂತೆ ಬದುಕುವವರ ಸಂಖ್ಯೆ ಹೆಚ್ಚಾಗಿದ್ದು, ಅಂತಹವರ ನಡುವೆ ಚಂಪಾ ಇಂದಿಗೂ ನೇರ ವ್ಯಕ್ತಿತ್ವದ ಮೂಲಕ ನಾಡು ನುಡಿಯ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಚಂಪಾ ಅವರದ್ದು ಸಾತ್ವಿಕ ಸಿಟ್ಟು. ವ್ಯವಸ್ಥೆಯಲ್ಲಿ ದೋಷ ಕಂಡಾಗ ಅದನ್ನು ಎತ್ತಿ ಹಿಡಿಯುವುದು ಅವರ ಸ್ವಭಾವ. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹಲವರ ಜತೆ ಜಗಳವಾಡಿರಬಹುದು ಆದರೆ, ಯಾರೊಂದಿಗೂ ವ್ಯಕ್ತಿಗತ ದ್ವೇಷವನ್ನು ಸಾಧಿಸಿಲ್ಲ. ತಮ್ಮ ಪಾರದರ್ಶಕ ವ್ಯಕ್ತಿತ್ವದಿಂದ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ, ವೈಚಾರಿಕ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಕನ್ನಡಕ್ಕಾಗಿ ದುಡಿಯಬೇಕಾದ ಅವಶ್ಯಕತೆ ಇದ್ದು, ನಮ್ಮನ್ನು ನಾವೇ ಸುಧಾರಿಸಿಕೊಂಡು ಹೋಗಬೇಕಾದ ಕಾಲ ಇದಾಗಿದೆ. ಚಂಪಾ ಸಮಾನತೆಯ ಪ್ರತಿಪಾದಕರಾಗಿದ್ದು, ಎಲ್ಲ ವರ್ಗದವರಿಗೂ ಸಮಾನ ಹಕ್ಕುಗಳು ಸಿಗಬೇಕು ಎನ್ನುವ ಆಶಯದಲ್ಲಿ ಹೋರಾಟ ಮಾಡುತ್ತಾರೆ. ನಾಡಿನ ಶ್ರೇಯೋಭಿವೃದ್ಧಿಗೆ ಚಂಪಾ ಕೊಡುಗೆ ಅಪಾರ ಎಂದರು.
ಕವಿಗೋಷ್ಠಿ ಹಾಗೂ “ಕುಂಟಾ ಕುಂಟಾ ಕುರವತ್ತಿ’ ನಾಟಕ ಪ್ರದರ್ಶನವಾಯಿತು. ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ ಉಪಸ್ಥಿತರಿದ್ದರು.
ತುರ್ತು ಪರಿಸ್ಥಿತಿಗಿಂತ ಭಿನ್ನವಲ್ಲ: ನನ್ನ ಬದುಕು ಹಲವು ಏರಿಳಿತಗಳನ್ನು ಕಂಡಿದೆ. ನನ್ನ ಕುಟುಂಬದವರು ನನ್ನೇಲ್ಲಾ ತಾತ್ವಿಕ ನಿಲುವುಗಳನ್ನು ಅರ್ಥಮಾಡಿಕೊಂಡು ಹೋರಾಟಗಳನ್ನು ಬೆಂಬಲಿಸುತ್ತಿದ್ದಾರೆ. ಇಂದಿನ ವಾತಾವರಣ 1975ರ ತುರ್ತು ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ಇನ್ನು ಯಾರು ಯಾರಿಗೂ ಸಂದೇಶ ಕೊಡಬೇಡಿ. ಯಾವ ಸಂದೇಶವನ್ನೂ ಸ್ವೀಕರಿಸಬೇಡಿ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಸಲಹೆ ನೀಡಿದರು.