Advertisement

ದನಗಳ ಜಾತ್ರೆಯಲ್ಲಿ ಜನಗಳ ಸಂಖ್ಯೆಯೇ ಹೆಚ್ಚು

09:02 PM Mar 24, 2021 | Team Udayavani |

ಚಿತ್ರದುರ್ಗ: ದನಗಳ ಜಾತ್ರೆಯಲ್ಲಿ ಜನಗಳ ಸಂಖ್ಯೆ ಹೆಚ್ಚಾಗಿ ದನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಾನವ ಮಕ್ಕಳ ಪಾಲನೆಗೆ ಮಾತ್ರ ಸೀಮಿತನಾಗಿದ್ದಾನೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದರು. ಸೀಬಾರ ಗ್ರಾಮದಲ್ಲಿ ಜಿಪಂ, ತಾಪಂ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ನಡೆದ ಜಾನುವಾರು ಜಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಮನುಷ್ಯ ಸಸ್ಯ ಪಾಲನೆ, ಪಶುಪಾಲನೆಯನ್ನು ಬಿಟ್ಟಿದ್ದಾನೆ. ಇದರಿಂದ ದನಗಳ ಸಂಖ್ಯೆ ಕಮ್ಮಿಯಾಗಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಗುರುಪಾದ ಸ್ವಾಮಿಗಳ ಸ್ಮರಣೆಗಾಗಿ ಪ್ರತಿವರ್ಷ ಇಲ್ಲಿ ದನಗಳ ಜಾತ್ರೆ ನಡೆಸಲಾಗುತ್ತಿದೆ. ಆದರೆ ಈ ಹಿಂದೆ ಇದ್ದಂತೆ ದನಗಳು ಈಗ ಬರುತ್ತಿಲ್ಲ ಎಂದರು.

ಗುರುಪಾದ ಸ್ವಾಮಿಗಳು ತಪಸ್ವಿಗಳು. ಗವಿಮಠದಲ್ಲಿ ಏಕಾಂತವಾಗಿ ಧ್ಯಾನ ಮಾಡಿ ಸಮಾಜದಲ್ಲಿ ಶಾಂತಿ, ಸಹನೆ, ಬೋಧನೆ ಮಾಡಿದ್ದಾರೆ. ಮುರುಘಾ ಮಠದ ಗುರುಗಳಾಗಿ ಸಮಾಜ ಸೇವೆ ಮಾಡಿದ್ದಾರೆ. ಅವರ ಗದ್ದುಗೆ ಶ್ರೀಮಠದಲ್ಲಿದೆ. ಜಯದೇವ, ಜಯವಿಭವ ಮತ್ತು ಮಲ್ಲಿಕಾರ್ಜುನ ಶ್ರೀಗಳು ಇವರೆಲ್ಲರು ಗದ್ದುಗೆಯಲ್ಲಿ ಪೂಜೆ ಪ್ರಸಾದ ಧ್ಯಾನವನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.

ಬೇಸಿಗೆ ಕಾಲದಲ್ಲಿ ಜನರಿಗೆ ಮಜ್ಜಿಗೆ ಕೊಡಿ. ಹಾಲು, ಮೊಸರು, ಬೆಣ್ಣೆ, ತುಪ್ಪ, ಪೇಡಾ ತಿನಿಸುಗಳಿಗೆ ಹಾಲು ಅತ್ಯವಶ್ಯಕ. ಹೀಗಾಗಿ ಪಶುಪಾಲನೆ ಅತಿ ಮುಖ್ಯವಾಗಿದ್ದು ಎತ್ತು, ಎಮ್ಮೆ, ಆಕಳು, ಕುರಿ, ಮೇಕೆಗಳನ್ನು ಸಾಕಿ ಕೃಷಿ ಕಾರ್ಯಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ಪಶುಪಾಲನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು. ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮಾತನಾಡಿ, ಜಿಲ್ಲೆಯಲ್ಲೇ ಏಕೈಕ ಜಾನುವಾರು ಜಾತ್ರೆ ನಡೆಯುವ ಸ್ಥಳ ಸೀಬಾರವಾಗಿದೆ. ಹಿಂದೆ ಕುಟುಂಬ ವ್ಯವಸ್ಥೆಯಲ್ಲಿ ಜನರು ಹೆಚ್ಚು ಸಂಖ್ಯೆಯಲ್ಲಿದ್ದು ದನ ಕರುಗಳನ್ನು ಸಾಕುತ್ತಿದ್ದರು. ಈಗ ಮನೆಯಲ್ಲಿ ಜನ ಕಡಿಮೆಯಾಗಿರುವುದರಿಂದ ಪಶುಪಾಲನೆಯೂ ಕಡಿಮೆಯಾಗಿದೆ. ಜಾನುವಾರುಗಳಿಂದ ದೊರೆಯುವ ಸಾವಯವ ಗೊಬ್ಬರದಿಂದ ಭೂಮಿ ಫಲವತ್ತಾಗುತ್ತದೆ. ಆರೋಗ್ಯವೂ ಉತ್ತಮಗೊಳ್ಳುತ್ತದೆ ಎಂದರು.

ಗ್ರಾಪಂ ಸದಸ್ಯ ರಾಮಾಂಜನೇಯ ಮಾತನಾಡಿ, ಮುರುಘಾಮಠದಿಂದ ಕಳೆದ 66 ವರ್ಷಗಳಿಂದ ಈ ಜಾತ್ರೆ ನಿರಂತರವಾಗಿ ನಡೆಯುತ್ತ ಬಂದಿದೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ ಈ ಹಿಂದೆ 10 ಸಾವಿರ ಜೋಡಿ ಎತ್ತುಗಳು ಭಾಗವಹಿಸಿದ ಉದಾಹರಣೆಗಳಿವೆ. ಈಗ ಲಾಭದ ಹಿಂದೆ ಹೋಗಿ ಮಾನವ ಜಾನುವಾರು ಸಾಕುವುದನ್ನೇ ಬಿಟ್ಟಿದ್ದಾನೆ ಎಂದು ವಿಷಾದಿಸಿದರು.

Advertisement

ಎಂ.ಕೆ. ಹಟ್ಟಿ ಗ್ರಾಪಂ ಅಧ್ಯಕ್ಷೆ ಬಿ. ಗೀತಾ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೌಸಲ್ಯ ತಿಪ್ಪೇಸ್ವಾಮಿ, ತಾಪಂ ಸದಸ್ಯೆ ರಾಧಮ್ಮ ಜಗದೀಶ್‌, ಪ್ರಕಾಶ್‌ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಮುರುಘಾ ಶರಣರು ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಿದರು. ಜಾತ್ರೆಯಲ್ಲಿ ಹಳ್ಳಿಕಾರ್‌, ಅಮೃತ್‌ ಮಹಲ್‌ ಇನ್ನಿತರೆ ತಳಿಗಳ 250ಕ್ಕೂ ಹೆಚ್ಚು ಜೋಡಿ ಎತ್ತುಗಳು ಭಾಗವಹಿಸಿವೆ. ಪಶುಪಾಲನಾ ಇಲಾಖೆ ನಿರ್ದೇಶಕ ಡಾ| ಕೃಷ್ಣಪ್ಪ ಸ್ವಾಗತಿಸಿದರು. ಡಾ| ಬಿ. ಪ್ರಸನ್ನಕುಮಾರ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next