Advertisement

“ಉತ್ತರ’ದತ್ತ ಆಯೋಗದ ಮುಖ

06:25 PM Apr 20, 2019 | Team Udayavani |

ಬೆಂಗಳೂರು: ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಸಮರ್ಥವಾಗಿ ನಿಭಾಯಿಸಿರುವ ಚುನಾವಣಾ ಆಯೋಗ, ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳ ಮತದಾನ ನಡೆಸಲು ಸಜ್ಜುಗೊಂಡಿದ್ದು, ಇದೀಗ “ಉತ್ತರ’ದ ಕಡೆ ಮುಖ ಮಾಡಿದೆ.

Advertisement

“ದಕ್ಷಿಣಾರ್ಧ’ದಲ್ಲಿ ಕಂಡಿರುವ ಯಶಸ್ಸಿನ ಹುಮ್ಮಸ್ಸು ಇಟ್ಟುಕೊಂಡು ಚುನಾವಣಾ ಆಯೋಗದ ಭಾಗಶಃ ಆಡಳಿತ ಯಂತ್ರ “ಉತ್ತರಾರ್ಧ’ಕ್ಕೆ ಸ್ಥಳಾಂತರಗೊಳ್ಳಲಿದೆ. ಮತದಾನಕ್ಕೆ ಇನ್ನೇನು ಮೂರೇ ದಿನ ಇದ್ದು, ಬಹಿರಂಗ ಪ್ರಚಾರ ಭಾನುವಾರ (ಏ.20) ಸಂಜೆ 6 ಗಂಟೆಗೆ ಕೊನೆಗೊಳ್ಳಲಿದ್ದು, ಈ ಅವಧಿ ಹಾಗೂ ಕೊನೆಯ 48 ಗಂಟೆ ಆಯೋಗದ ಪಾಲಿಗೆ ಸವಾಲು ಆಗಿರುತ್ತದೆ.

ಜತೆಗೆ ಈ 14 ಕ್ಷೇತ್ರಗಳಲ್ಲಿ ಪ್ರಚಾರ ತಾರಕ್ಕಕ್ಕೇರಿದ್ದು, ಎಲ್ಲ ರಾಜಕೀಯ ಪಕ್ಷಗಳು ಉತ್ತರಕ್ಕೆ ವಲಸೆ ಹೋಗಿವೆ, ಪಕ್ಷದ ಘಟಾನುಘಟಿಗಳು ಕಾಲಿಗೆ ಚಕ್ರ ಸುತ್ತಿಕೊಂಡಂವರಂತೆ ತಮ್ಮ ಅಭ್ಯರ್ಥಿಗಳ ಪರ ಮತ ಬೇಟೆಗೆ ಇಳಿದಿದ್ದಾರೆ. ರಾಷ್ಟ್ರೀಯ ನಾಯಕರ ಪ್ರಚಾರ ಸಭೆಗಳ ಭರಾಟೆಯೂ ಇದೆ. ಹೀಗಾಗಿ, ನೀತಿ ಸಂಹಿತೆ ಜಾರಿಗೆ ಇನ್ನಷ್ಟು ಬಿಗಿಗೊಳಿಸಲು ಆಯೋಗ ಕ್ರಮ ಕೈಗೊಂಡಿದೆ.

ಮೊದಲ ಹಂತದ ಚುನಾವಣೆಗೆ ನಿಯೋಜಿತರಾಗಿದ್ದ 30 ಸಾವಿರ ಪೊಲೀಸ್‌ ಸಿಬ್ಬಂದಿಗಳ ಪೈಕಿ ಬಹುತೇಕ ಸಿಬ್ಬಂದಿ ಉತ್ತರ ಕರ್ನಾಟಕಕ್ಕೆ ಹೋಗಲಿದ್ದಾರೆ. ಅಲ್ಲದೇ ಕೇಂದ್ರದ ಪಡೆಗಳನ್ನು ಸಹ ಆ ಭಾಗಕ್ಕೆ ರವಾನಿಸಲಾಗುತ್ತಿದ್ದು, ಅಗತ್ಯ ಇರುವ ಕಡೆ ಹೆಚ್ಚುವರಿ ತುಕಡಿಗಳ ನಿಯೋಜನೆ ಮಾಡಲಾಗುವುದು.

ಉಳಿದಂತೆ ನೀತಿ ಸಂಹಿತೆ ಜಾರಿ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳ ಮೂಲಕ ಫೈಯಿಂಗ್‌ ಸ್ಕ್ವಾಡ್‌, ಸ್ಟಾಟಿಕ್‌ ಸರ್ವೆಲೆನ್ಸ್‌ ಟೀಮ್‌, ಅಬಕಾರಿ ತಂಡಗಳು, ಐಟಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಲವು ಸುತ್ತಿನ ಸಭೆಗಳನ್ನೂ ಸಹ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ನಿಯೋಜಿತರಾಗಿರುವ ಪೊಲೀಸ್‌ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರು ನಿಗಾ ಇಡಲಿದ್ದಾರೆ. ಇದಲ್ಲದೇ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೆಲವು ಹಿರಿಯ ಅಧಿಕಾರಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಠಿಕಾಣಿ ಹೂಡಲಿದ್ದಾರೆಂದು ಹೇಳಲಾಗಿದೆ.

Advertisement

ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ರಾಯಚೂರು, ಬಳ್ಳಾರಿ, ಬೀದರ್‌, ಬೆಳಗಾವಿ, ಉತ್ತರ ಕನ್ನಡ, ಹಾಗೂ ವಿಜಯಪುರ ಕ್ಷೇತ್ರಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.

ಕರ್ನಾಟಕಕ್ಕೆ ಹೊಂದಿಕೊಂಡ ಗಡಿ ರಾಜ್ಯದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀತಿ ಸಂಹಿತೆ ಜಾರಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಈಗಾಗಲೇ ರಾಜ್ಯಕ್ಕೆ ಪ್ರವೇಶಿಸುವ ಗಡಿಗಳಲ್ಲಿ ಪೊಲೀಸ್‌ ನಾಕಾಗಳನ್ನು ಸ್ಥಾಪಿಸಲಾಗಿದ್ದು, ಮದ್ಯ ಹಾಗೂ ಹಣದ ಸಾಗಾಟ ತಡೆಗಟ್ಟಲು ಅಬಕಾರಿ ಮತ್ತು ಐಟಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ. ಇವರಿಗೆ ಪೊಲೀಸ್‌ ಅಧಿಕಾರಿಗಳು ಸಹ ಸಾಥ್‌ ನೀಡಲಿದ್ದಾರೆ. ಅಲ್ಲದೇ ಬೆಂಗಳೂರಿನಿಂದ ಚುನಾವಣೆ ನಡೆಯಲಿರುವ ಜಿಲ್ಲೆಗಳಿಗೆ ಪ್ರವೇಶಿಸುವ ರಸ್ತೆಗಳಲ್ಲಿಯೂ ವಿಶೇಷ ನಿಗಾ ಇಡಲಾಗುತ್ತಿದೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

2.43 ಕೋಟಿ ಮತದಾರರು: ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಮೇ 23ರಂದು ಮತದಾನ ನಡೆಯಲಿದೆ. ಈ 14 ಕ್ಷೇತ್ರಗಳಲ್ಲಿ ಒಟ್ಟು 2.43 ಕೋಟಿ ಮತದಾರರು ಇದ್ದು, 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಅತಿ ಹೆಚ್ಚು 57 ಅಭ್ಯರ್ಥಿಗಳು ಬೆಳಗಾವಿಯಲ್ಲಿದ್ದರೆ, ಕಡಿಮೆ ಅಭ್ಯರ್ಥಿಗಳು ರಾಯೂಚೂರಿನಲ್ಲಿ 6 ಮಂದಿ ಇದ್ದಾರೆ. ಇದಕ್ಕಾಗಿ 28,022 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಎರಡನೇ ಹಂತದ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿಯ ತರಬೇತಿ ಹಾಗೂ ನಿಯೋಜನೆ ಆಗಿದೆ. ಅಂತಿಮ ಸಿದ್ಧತೆಗಳ ಇನ್ನಷ್ಟು ಚುರುಕುಗೊಳಿಸಲಾಗುವುದು. ನೀತಿ ಸಂಹಿತೆ ಜಾರಿ ವಿಚಾರದಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಂದರ್ಭಾನುಸಾರ ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ಕೊಡಲಾಗುತ್ತಿದೆ. ಕೇಂದ್ರ ಸ್ಥಳದಲ್ಲಿದ್ದುಕೊಂಡೇ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದೇನೆ.
-ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next