ಬೆಂಗಳೂರು: ಇತ್ತೀಚೆಗಷ್ಟೇ ಸುಂಕದಕಟ್ಟೆಯ ಮುತ್ತರಾಯಸ್ವಾಮಿ ಲೇಔಟ್‌ನಲ್ಲಿ ಒಂಟಿಯಾಗಿ ವಾಸವಿದ್ದ ವೃದ್ಧೆಯೊಬ್ಬರನ್ನು ಬರ್ಬರವಾಗಿ ಕೊಂದು ಚಿನ್ನಾಭರಣ ದೋಚಿದ್ದ ಒಂಬತ್ತು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಅಗ್ರಹಾರ ಚಿಕ್ಕಪೇಟೆ ನಿವಾಸಿ ಮಹಂತಸ್ವಾಮಿ (23), ಆತನ ಸ್ನೇಹಿತರಾದ ದೀಪಕ್ (26), ಚಿತ್ರಲಿಂಗಯ್ಯ (20), ಜ್ಞಾನಭಾರತಿ ನಿವಾಸಿ ಶರತ್ (20), ಕುಮಾರ್ (21), ಕಾರ್ತಿಕ್ (19), ಲೋಕೇಶ್ (21), ಗಂಗಾಧರ (23), ಗಣೇಶ್ ಹೀರೆಮಠ(24) ಬಂಧಿತರು.
ಆರೋಪಿಗಳಿಂದ ಚಿನ್ನದ ಎರಡು ಬಳೆ, ಎರಡು ಉಂಗುರ, ಒಂದು ಕಿವಿಯೊಲೆ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಸೆ.18ರಂದು ಸುಂಕದಕಟ್ಟೆಯ ಮುತ್ತರಾಯಸ್ವಾಮಿ ಲೇಔಟ್ ನಿವಾಸಿ ಪಾರ್ವತಮ್ಮ ಅವರನ್ನು ಕೈ, ಕಾಲುಗಳನ್ನು ಕಟ್ಟಿ ಕುತ್ತಿಗೆ ಬಿಗಿದುಕೊಲೆ ಗೈದಿದ್ದರು ಎಂದು ಪೊಲೀಸರು ಹೇಳಿದರು. ಪ್ರಕರಣ ಪ್ರಮುಖ ಆರೋಪಿ ಮಹಂತಸ್ವಾಮಿ, ಮೃತ ಪಾರ್ವತಮ್ಮ ಸವರ ಸೊಸೆ (ಪುತ್ರನ ಪತ್ನಿ) ಸುಮಾ ಅವರ ಸಹೋದರನಾಗಿದ್ದು, ದಾಬಸಪೇಟೆಯಲ್ಲಿ ವಾಸವಾಗಿದ್ದ.
ಆರಂಭದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಆತ, ಇತ್ತೀಚೆಗೆ ಯಾವುದೇ ಕೆಲಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಹಣ ಮಾಡಿ ಮೋಜಿನ ಜೀವನ ನಡೆಸುವ ಉದ್ದೇಶ ಹೊಂದಿದ್ದ ಆರೋಪಿ, ಪಾರ್ವತಮ್ಮ ಒಂಟಿಯಾಗಿ ವಾಸಿಸುವ ಬಗೆ ತಿಳಿದುಕೊಂಡಿದ್ದ. ಅಲ್ಲದೆ, ನಿವೃತ್ತ ಹೊಂದಿದ ಬಳಿಕ ಪಾರ್ವತಮ್ಮ ಬಳಿ ನಗದು, ಚಿನ್ನಾಭರಣ ಇರಬಹುದು ಎಂದು ದರೋಡೆಗೆ ಸಂಚು ರೂಪಿಸಿದ್ದ.
ಅದಕ್ಕಾಗಿ ತುಮಕೂರಿನ ಸ್ನೇಹಿತರಾದ ದೀಪಕ್, ಚಿತ್ರಲಿಂಗಯ್ಯನನ್ನು ನಗರಕ್ಕೆ ಕರೆತಂದ ಆರೋಪಿ, ಚಿಕ್ಕಗೊಲ್ಲರಹಟ್ಟಿ ನಿವಾಸಿ ಗಂಗಾಧರ್ ಮೂಲಕ ಇತರೆ ಆರೋಪಿಗಳನ್ನು ಪರಿಚಯ ಮಾಡಿಕೊಂಡು ಕೃತ್ಯಕ್ಕೆ ಸಂಚು ರೂಪಿಸಿದ್ದ. ಬಳಿಕ ಸೆ.18ರಂದು ಗಂಗಾಧರ್, ಗಣೇಶ್ ಹೊರತುಪಡಿಸಿ ಇತರೆ ಆರೋಪಿಗಳು ಪಾರ್ವತಮ್ಮ ಅವರ ಮನೆಗೆ ನುಗ್ಗಿ, ಮಾರಕಾಸ್ತ್ರಗಳನ್ನು ತೋರಿಸಿ ಹಣ, ಚಿನ್ನಾಭರಣ ಕೊಡುವಂತೆ ಬೇಡಿಕೆ ಇಟ್ಟಿದ್ದರು.
ಅದಕ್ಕೆ ವಿರೋಧಿಸಿ ಪಾರ್ವತಮ್ಮ ಕೂಗಿಕೊಂಡಾಗ ಆರೋಪಿಗಳು ಅವರ ಕೈ, ಕಾಲುಗಳನ್ನು ಕಟ್ಟಿ ಕುತ್ತಿಗೆ ಬಿಗಿದು ಕೊಲೆಗೈದು, ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು. ಮನೆಯ ಹೊರಗಡೆ ಕಾರ್ತಿಕ್, ಕುಮಾರ್ ಕಾವಲು ಕಾಯುತ್ತಿದ್ದರು. ನಂತರ ಆರೋಪಿಗಳ ಪೈಕಿ ಕೆಲವರು ಉತ್ತರ ಕರ್ನಾಟಕದ ಕಡೆ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
ಪುತ್ರನ ಹೊರಗೆ ಕರೆಸಿಕೊಂಡರು: ಕೃತ್ಯ ನಡೆದ ದಿನ ಮುಂಜಾನೆಯೇ ಆರೋಪಿ ಮಹಂತಸ್ವಾಮಿ ತನ್ನ ಭಾವ (ಪಾರ್ವತಮ್ಮ ಪುತ್ರ) ಮಂಜುನಾಥ್‌ಗೆ ಕರೆ ಮಾಡಿ ಎಲ್ಲಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡಿದ್ದ. ಕೆಲ ಹೊತ್ತಿನ ಬಳಿಕ ಸ್ನೇಹಿತ ಚಿತ್ರಲಿಂಗಯ್ಯ ಮೂಲಕ ಮಂಜುನಾಥ್‌ಗೆ ಕರೆ ಮಾಡಿಸಿ, ನಿಮಗೆ ಸೇರಿದ ನಿವೇಶನ ಮಾರಾಟ ಮಾಡುವ ಕುರಿತು ಮಾತನಾಡಬೇಕಿದೆ.
ಮನೆಯಿಂದ ಸ್ವಲ್ಪ ದೂರದಲ್ಲಿರುವ ಮುಖ್ಯರಸ್ತೆಗೆ ಬನ್ನಿ ಎಂದು ಹೇಳಿಸಿದ್ದ. ಅದರಂತೆ ಮಂಜುನಾಥ್ ಮುಖ್ಯ ರಸ್ತೆಗೆ ಬಂದಿದ್ದು, ಸುಮಾರು ಒಂದು ಗಂಟೆಗಳ ಕಾಲ ಬರುತ್ತಿರುವುದಾಗಿ ಹೇಳಿ ಕಾಯುವಂತೆ ಮಾಡಿದ ಆರೋಪಿಗಳು, ಅದೇ ವೇಳೆಯಲ್ಲಿ ಮನೆಗೆ ನುಗ್ಗಿ ಪಾರ್ವತಮ್ಮ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.