Advertisement

ಮುಂದಿನ ವರ್ಷವೇ ಉತ್ತರ ವಿವಿ ಆರಂಭ

01:02 PM Oct 19, 2017 | Team Udayavani |

ಬೆಂಗಳೂರು: ಮುಂದಿನ ವರ್ಷದಿಂದಲೇ ಬೆಂಗಳೂರು ಉತ್ತರ ವಿವಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗುವುದು ಎಂದು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಟಿ.ಡಿ. ಕೆಂಪರಾಜು ಹೇಳೀದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಬೆಂಗಳೂರು ವಿವಿಯಿಂದ 100 ಮಂದಿ ಬೋಧಕೇತರ ಹುದ್ದೆಗಳನ್ನು ಉತ್ತರ ವಿವಿಗೆ ನೀಡುವಂತೆ ಆದೇಶ ನೀಡಲಾಗಿದೆ.

Advertisement

ಈ ಹುದ್ದೆಗಳ ವರ್ಗಾವಣೆ ನಂತರ ಸರ್ಕಾರಿ ನಿಯಮದಡಿ ನೇಮಕಾತಿ ಆರಂಭಿಸಲಾಗುವುದು. ಇದರ ಜತೆಗೆ 28 ಬೋಧಕ ಸಿಬ್ಬಂದಿ ಬೇಕಾಗಿದ್ದಾರೆ. ಈಗಾಗಲೇ 16 ಮಂದಿಯನ್ನು ನೇಮಕ ಮಾಡಿಕೊಂಡಿದ್ದು, ಉಳಿದ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳುತ್ತೇವೆ ಎಂದರು.

ಬೆಂಗಳೂರು ಉತ್ತರ ವಿವಿಯ ವ್ಯಾಪ್ತಿಗೆ ಬರುವ ಎಲ್ಲಾ ಪದವಿ ಕಾಲೇಜುಗಳಲ್ಲಿ ದಾಖಲಾತಿ ಹಾಗೂ ಹೊಸ ಕೋರ್ಸ್‌ಗಳ ಸಂಯೋಜನೆ ಆರಂಭಿಸಲಾಗುವುದು. ಈಗಾಗಲೇ ಇರುವ ಸಾಂಪ್ರದಾಯಿಕ ಕೋರ್ಸ್‌ಗಳೊಂದಿಗೆ ಹೊಸದಾಗಿ ಯುಜಿಸಿ ಮಾನ್ಯತೆ ಪಡೆದ ಮೂರು ಪದವಿ ಹಾಗೂ 8 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು. 

ವಿದ್ಯಾರ್ಥಿ ವೇತನ ನಿಧಿ ಸ್ಥಾಪನೆ: 2019-20ನೇ ಸಾಲಿನಲ್ಲಿ ಭೌತಶಾಸ್ತ್ರ ಮತ್ತು 2020-21ರ ಶೈಕ್ಷಣಿಕ ವರ್ಷದಲ್ಲಿ ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಅತ್ಯುತ್ತಮ ಪ್ರಯೋಗಾಲಯದ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ವಿದ್ಯಾರ್ಥಿವೇತನ ನಿಧಿ ಸ್ಥಾಪನೆ ಮತ್ತು ಬಡತನದ ರೇಖೆಗಿಂತ ಕಡಿಮೆ ಇರುವ ಕುಟುಂಬದ ಹೆಣ್ಣು ಮಕ್ಕಳಿಗೆ ಸಂಪೂರ್ಣ ಶುಲ್ಕ ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.

ಉತ್ತರ ವಿವಿ ಸ್ಥಾಪನೆಗಾಗಿ ಚಿಕ್ಕಬಳ್ಳಾಪುರದ ಎಚ್‌.ಕ್ರಾಸ್‌ನ ಅಮರಾವತಿ ಗ್ರಾಮದಲ್ಲಿ 172 ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ. ಈ ಪೈಕಿ 57 ಎಕರೆಯನ್ನು ಈಗಾಗಲೇ ನೀಡಲಾಗಿದೆ. ಉಳಿದ ಭೂಮಿ ಮುಂದಿನ ಒಂದೆರಡು ತಿಂಗಳಲ್ಲಿ ದೊರೆಯುವ ಸಾಧ್ಯತೆ ಇದೆ. ಇದಾದ ಬಳಿಕ ಯೋಜನೆ ಸಿದ್ಧಪಡಿಸಿ ಮೂಲಸೌಲಭ್ಯಗಳತ್ತ ಗಮನ ಹರಿಸಲಾಗುವುದು ಎಂದರು.

Advertisement

ಶಾಶ್ವತ ಕಟ್ಟಡಕ್ಕೆ ಅಗತ್ಯವಿರುವ ಪೂರ್ಣ ಜಾಗ ಸಿಗುವವರೆಗೆ ತಾತ್ಕಾಲಿಕವಾಗಿ ಕೋಲಾರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರಾದೇಶಿಕ ಕೇಂದ್ರದ ಕಟ್ಟಡದಲ್ಲಿ ಆಡಳಿತಾತ್ಮಕ ಚಟುವಟಿಕೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅನುದಾನಕ್ಕೆ ಪ್ರಸ್ತಾವನೆ: ಹೊಸ ವಿವಿ ಆರಂಭಕ್ಕಾಗಿ ಐದು ವರ್ಷಗಳ ಯೋಜನೆಗಾಗಿ ಒಟ್ಟು 355 ಕೋಟಿ ರೂ. ಅನುದಾನ ಕೋರಲಾಗಿದೆ. ಆರಂಭಿಕ ವರ್ಷದಲ್ಲಿ 185 ಕೋಟಿ ರೂ. ಕೇಳಲಾಗಿದ್ದು, ಇದುವರೆಗೆ ವಿವಿಗೆ ಯಾವುದೇ ಹಣ ಬಂದಿಲ್ಲ. ಆದರೆ, ಬೆಂಗಳೂರು ವಿವಿ (ಜ್ಞಾನಭಾರತಿ)ಯಿಂದ ಒಟ್ಟು 3 ಕೋಟಿ ರೂ. ಸಿಕ್ಕಿದೆ. ಜತೆಗೆ ವಿವಿಯಿಂದ 15 ಕೋಟಿ ಅನುದಾನ ನೀಡುವಂತೆ ಸಸರ್ಕಾರ ಬೆಂಗಳೂರು ವಿವಿಗೆ ಸೂಚನೆ ನೀಡಿದೆ ಎಂದು ತಿಳಿಸಿದರು. 

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ಥಾಪನೆಗೆ 2015ರಲ್ಲಿಯೇ ಸರ್ಕಾರ ಅಧಿಸೂಚನೆ ಹೊರಡಿಸಿದೆ. 2017-18ನೇ ಸಾಲಿನಲ್ಲಿಯೇ ನೂತನ ವಿಶ್ವವಿದ್ಯಾಲಯಗಳು ತಮ್ಮ ಆಡಳಿತ ಮತ್ತು ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲು ಅಧಿಸೂಚನೆ ನೀಡಿದೆ. ಆದರೆ, ಸಿದ್ಧತೆ ಪೂರ್ಣಗೊಂಡ ಬಳಿಕೆ ಶೈಕ್ಷಣಿಕ ಚಟುವಟಿಕೆ ಆರಂಭಿಸುವ ಉದ್ದೇಶದಿಂದ ಈ ವರ್ಷ ಕಾರ್ಯಾರಂಭ ಮಾಡಿರಲಿಲ್ಲ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಗೋಷ್ಠಿಯಲ್ಲಿ ಬೆಂಗಳೂರು ಉತ್ತರ ವಿವಿ ಕುಲಸಚಿವ ಎಂ.ಎಸ್‌. ರೆಡ್ಡಿ, ಮೌಲ್ಯಮಾಪನ ಕುಲಸಚಿವ ಸುಂದರ್‌ರಾಜ್‌ ಅರಸ್‌ ಉಪಸ್ಥಿತರಿದ್ದರು.

224 ಕಾಲೇಜುಗಳು
ಬೆಂಗಳೂರು ಉತ್ತರ ವಿವಿ ವ್ಯಾಪ್ತಿಗೆ ಒಟ್ಟಾರೆ 224 ಕಾಲೇಜುಗಳು ಬರುತ್ತವೆ. ಈ ಪೈಕಿ ಕೋಲಾರ ಜಿಲ್ಲೆ 57 ಕಾಲೇಜುಗಳು, ಚಿಕ್ಕಬಳ್ಳಾಪುರ ಜಿಲ್ಲೆ 41 ಕಾಳೇಜುಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ 25 ಕಾಲೇಜುಗಳು, ಬೆಂಗಳೂರು ನಗರ 101 ಕಾಲೇಜುಗಳಿವೆ.

ಯುಜಿಸಿ ಹೊಸ ನಿಯಮ
ಯಾವುದೇ ದೂರ ಶಿಕ್ಷಣ ಕೋರ್ಸ್‌ ಆರಂಭಿಸುವಂತಿಲ್ಲ. ಕ್ಯಾಂಪಸ್‌ ಹೊರಗೆ ಯಾವುದೇ ಕೋರ್ಸ್‌ ನಡೆಸುವಂತಿಲ್ಲ. ಹೊರ ರಾಜ್ಯಗಳಲ್ಲಿ ಕೋರ್ಸ್‌ ನಡೆಸುವಂತಿಲ್ಲ.ಯುಜಿಸಿ ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಷರತ್ತಿನೊಂದಿಗೆ ಯುಜಿಸಿ ಮಾನ್ಯತೆ ನೀಡಿದೆ. ಕೆಎಸ್‌ಒಯು ಘಟನೆ ನಂತರ ಮೊದಲ ಬಾರಿಗೆ ದೂರ ಶಿಕ್ಷಣ ವಿಭಾಗದ ಕೋರ್ಸ್‌ ನಡೆಸದಂತೆ ಯುಜಿಸಿ ಹೊಸ ನಿಯಮ ಜಾರಿಗೆ ತಂದಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಪದವೀಧರರೇ ಇಲ್ಲದಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಅಧ್ಯಯನ ಮಾಡಿ, ಪದವೀಧರರೇ ಇಲ್ಲದ ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅವರಿಗೆ ಶೈಕ್ಷಣಿಕ ಸೌಲಭ್ಯಗಳನ್ನು ನೀಡಲಾಗುವುದು.
-ಪ್ರೊ.ಟಿ.ಡಿ.ಕೆಂಪರಾಜ್‌, ಕುಲಪತಿ.

Advertisement

Udayavani is now on Telegram. Click here to join our channel and stay updated with the latest news.

Next