Advertisement

ಹೊಸತನ ಕೊಡ್ತೀವಿ ಅಂದರು: ಜೊತೆಯಾಗಿ ಬಂದರು

11:26 AM Sep 08, 2017 | Team Udayavani |

“ಇದೊಂದು ಮ್ಯೂಸಿಕಲ್‌ ಸಿನಿಮಾ. ಜೊತೆಗೊಂದು ರೊಮ್ಯಾಂಟಿಕ್‌ ಲವ್‌ಸ್ಟೋರಿ..’
– ಹೀಗೆ ಹೇಳಿ ಹಾಗೊಂದು ಸ್ಮೈಲ್ ಕೊಟ್ಟರು ನಿರ್ದೇಶಕ ಸುಪ್ರೀತ್‌ ಶಂಕರ್‌ ರತ್ನ. ಅವರು ಹೇಳಿದ್ದು ತಮ್ಮ ಮೊದಲ ನಿರ್ದೇಶನದ “ಜೊತೆಯಾಗಿ’ ಚಿತ್ರದ ಬಗ್ಗೆ. ನಿರ್ದೇಶನದ ಜತೆಯಲ್ಲಿ ನಿರ್ಮಾಣದ ಜವಾಬ್ದಾರಿಯೂ ಇವರದೇ. ಇದು ಹೊಸಬರ ಸಿನಿಮಾ. ಹಾಗಂತ ಅಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ ಇವರೆಲ್ಲರಿಗೂ ಚಿತ್ರರಂಗ ಹೊಸದೇನಲ್ಲ. ನಿರ್ದೇಶಕ ಸುಪ್ರೀತ್‌ ಸ್ವತಃ ಸಂಕಲನಕಾರರು. ನಿರ್ದೇಶನ ಮಾತ್ರ ಹೊಸದು. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿತು. ಅಂದು ಚಿತ್ರರಂಗದ ಅನೇಕರು ಬಂದು ಹೊಸ ತಂಡಕ್ಕೆ ಭಕೋರಿದರು. ಅಷ್ಟೇ ಅಲ್ಲ, ಪುನೀತ್‌ ರಾಜ್‌ಕುಮಾರ್‌ ಕೂಡ ಮುಹೂರ್ತಕ್ಕೆ ಆಗಮಿಸಿ ಹೊಸಬರನ್ನು ಹಾರೈಸಿದರು. 

Advertisement

ಒಂದಷ್ಟು ಗೆಳೆಯರು, ಹಿತೈಷಿಗಳು ಬಂದು ಶುಭ ಕೋರಿದ ಬಳಿಕ ಚಿತ್ರತಂಡ ಪತ್ರಕರ್ತರ ಮುಂದೆ ಬಂದು ಕುಳಿತುಕೊಂಡಿತು. ನಿರ್ದೇಶಕ ಸುಪ್ರೀತ್‌ ಶಂಕರ್‌ ರತ್ನ ಮಾತಿಗಿಳಿದರು. “ನಾನು ಬೇಸಿಕಲಿ ಸಂಕಲನಕಾರ. ಇದುವರೆಗೆ ಮುನ್ನೂರಕ್ಕು ಹೆಚ್ಚು ಹಾಡುಗಳಿಗೆ ಸ್ಪೆಷಲ್‌ ಎಡಿಟ್‌ ಮಾಡಿರುವುದುಂಟು. ಸಿನಿಮಾ ನಿರ್ದೇಶಿಸುವ ಆಸೆ  ಇತ್ತು. ಈಗ “ಜೊತೆಯಾಗಿ’ ಮೂಲಕ ಈಡೇರುತ್ತಿದೆ. ಇದೊಂದು ಮ್ಯೂಸಿಕಲ್‌ ಚಿತ್ರ ಅನ್ನಬಹುದು. ಒಂದು ಮುದ್ದಾದ ಪ್ರೇಮಕಥೆಯಲ್ಲಿ ಸಾಕಷ್ಟು ಏರಿಳಿತಗಳು ಬಂದು ಹೋಗುತ್ತವೆ. ಆಗ ಏನೆಲ್ಲಾ ಆಗುತ್ತೆ ಎಂಬುದು ಕಥೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಇಲ್ಲಿದೆ. ಹಾಡಿಗೆ ಇಲ್ಲಿ ಒತ್ತು ಕೊಡಲಾಗಿದೆ.  ಮನಾಲಿ, ಕೇರಳ, ಮಡಿಕೇರಿ, ಬೆಂಗಳೂರು ಇತರೆಡೆ ಚಿತ್ರೀಕರಣ ಮಾಡಲಾಗುವುದು. ಸದ್ಯಕ್ಕೆ ನಾಯಕಿ ಹಾಗೂ ಉಳಿದ ಕಲಾವಿದರ ಆಯ್ಕೆಯಾಗಬೇಕಿದೆ’ ಎಂದರು ಸುಪ್ರೀತ್‌.

ನಾಯಕ ಅಕ್ಷಯ್‌ರಾಜ್‌ಗೆ ಇದು ಮೊದಲ ಚಿತ್ರ. ಮೂಲತಃ ಡ್ಯಾನ್ಸರ್‌ ಆಗಿರುವ ಅಕ್ಷಯ್‌ ರಾಜ್‌, ಆದರ್ಶ ನಟನೆ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಒಬ್ಬ ಮುಗ್ಧ ಮನಸ್ಸಿನ ಹುಡುಗನ ಪಾತ್ರ ನನ್ನದು. ಡ್ಯಾನ್ಸರ್‌ ಆಗಿರುವುದರಿಂದ ಇಲ್ಲೊಂದು ಸ್ಪೆಷಲ್‌ ಸಾಂಗ್‌ ಕೂಡ ಇದೆ. ಆದರೂ, ಇಲ್ಲಿ ಮೆಲೋಡಿಗೆ ಹೆಚ್ಚು ಒತ್ತು ಕೊಡಲಾಗಿದೆ. ನಿಮ್ಮೆಲ್ಲರ ಸಹಕಾರ ನನಗೆ ಬೇಕು’ ಎಂದರು ಅಕ್ಷಯ್‌ರಾಜ್‌. ಸಂಗೀತ ನಿರ್ದೇಶಕ ಪಳನಿ ಡಿ.ಸೇನಾಪತಿ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರಂತೆ. “ಟ್ರಾಕ್‌ ಸಿಂಗರ್‌ ಅವರೇ ಅಂತಿಮವಾಗಿ ಆ ಹಾಡು ಹಾಡಬೇಕು. ಹಾಗಾಗಿ, ಮೊದಲೇ ಪ್ಲಾನ್‌ ಮಾಡಿ, ಟ್ರಾಕ್‌ ಹಾಡಿಸಿ, ಅದಕ್ಕೆ ಏನೆಲ್ಲಾ ಬೇಕು, ಬೇಡ ಎಂಬುದನ್ನು ನೋಡಿ  ಅವರಿಂದಲೇ ಆ ಹಾಡು ಹೊರಬರುವಂತೆ
ಮಾಡುವುದು ನನ್ನ ಐಡಿಯಾ. ಹಾಡುಗಳು ಚೆನ್ನಾಗಿ ಕೇಳಬೇಕು, ಸಾಹಿತ್ಯಕ್ಕೂ ಒತ್ತು ಕೊಡಬೇಕು. ಹಾಗಾಗಿ ಇಲ್ಲಿ ಮೆಲೋಡಿ ಹಾಡುಗಳಿರಲಿವೆ ಎಂದರು ಪಳನಿ.

ಕ್ಯಾಮೆರಾಮೆನ್‌ ಕರಣೇಶ್‌ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು “ಪ್ರತಿಕ್ಷಣ’ ಚಿತ್ರ ಮಾಡಿದ್ದರು. “ನಿರ್ದೇಶಕ ಸುಪ್ರೀತ್‌ ನನಗೆ ಹತ್ತು ವರ್ಷಗಳ ಗೆಳೆಯ. ನನಗೆ ಈ ಕಥೆ ಹೇಳಿದಾಗ, ಎಮೋಷನ್ಸ್‌ ಜತೆಗೆ ಒಂದೊಳ್ಳೆಯ ಲವ್‌ ಸ್ಟೋರಿ ಇದೆ ಅನಿಸಿತು. ಇಲ್ಲಿ ಕ್ಯಾಮೆರಾ ಮೂಲಕ ಹೊಸದೇನನ್ನೋ ಹೇಳಬಹುದು ಎಂಬ ಯೋಚನೆ ಬಂತು. ಡಿಫ‌ರೆಂಟ್‌ ಲೈಟಿಂಗ್‌ ಪ್ಯಾಟ್ರನ್‌ನಲ್ಲಿ ಸಿನಿಮಾ ಮಾಡುವ ಆಸೆ ಇದೆ. ಪ್ರತಿ ದೃಶ್ಯ ಪೇಂಟಿಂಗ್‌ ರೀತಿ ಇರಬೇಕು. ಹಾಗಾಗಿಯೇ ಮೊದಲೇ ಸ್ಟೋರಿ ಬೊರ್ಡ್‌ ಮಾಡಿಕೊಂಡು, ಹೇಗೆಲ್ಲಾ ಕೆಲಸ ಮಾಡಬಹುದು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ ಅಂದರು ಕರಣೇಶ್‌.

Advertisement

Udayavani is now on Telegram. Click here to join our channel and stay updated with the latest news.

Next