Advertisement
ಈ ನಿಟ್ಟಿನಲ್ಲಿ ಮಂಗಳೂರು ಇನ್ನೂ ಹೆಚ್ಚು ವಿಸ್ತೃತೆಯನ್ನು ಪಡೆದುಕೊಳ್ಳುವಂತಾಗಲು ಹೊಸ ಸಾಧ್ಯತೆಗಳ ಅಧ್ಯಯನಗಳು ನಡೆಯಬೇಕಾಗಿದೆ. ಈಗಿರುವ ಮಾರ್ಗ ಗಳಲ್ಲಿ ಹೊಸ ರೈಲುಗಳ ಓಡಾಟದ ಜತೆಗೆ ಕರ್ನಾಟಕದ ಪ್ರಮುಖ ನಗರಗಳಿಗೆ ಸಂಚಾರ ವೇರ್ಪಡುವ ನಿಟ್ಟಿನಲ್ಲಿ ಹೊಸ ಮಾರ್ಗಗಳ ಗುರುತಿಸುವಿಕೆ, ಈಗಾಗಲೇ ಸಮೀಕ್ಷೆ ನಡೆದಿರುವ ಹೊಸ ಮಾರ್ಗಗಳ ಅನುಷ್ಠಾನ ಮುಂತಾದ ಸಕಾರಾತ್ಮಕ ಕ್ರಮಗಳು ನಡೆಯಬೇಕಾಗಿವೆ.
ಮಂಗಳೂರಿನಿಂದ ಗುಲ್ಬರ್ಗಾಕ್ಕೆ ರೈಲು ಸಂಚಾರಕ್ಕೆ ಪ್ರಯಾಣಿಕರೂ ಕೂಡ ಹಲವು ಸಲಹೆಗಳನ್ನು ನೀಡಿದ್ದಾರೆ. ಇದರ ಪ್ರಕಾರ ಗುಲ್ಮರ್ಗಾದಿಂದ ವಾಡಿ- ಯಾದಗಿರಿ- ರಾಯಚೂರು- ಗುಂಟಕಲ್, ಬಳ್ಳಾರಿ, ಚಿಕ್ಕಮಗಳೂರು- ಬೀರೂರ, ಕಡೂರು, ಅರಸೀಕೆರೆ, ಹಾಸನ- ಸಕಲೇಶಪುರ, -ಸುಬ್ರಹ್ಮಣ್ಯ ರಸ್ತೆ, ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಸಂಚಾರ ನಡೆಸಬಹುದು. ರೈಲ್ವೇ ಇಲಾಖೆ ಈ ಸಲಹೆಯನ್ನು ಪರಿಶೀಲಿಸಿ ಸಾಧ್ಯತೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾದರೆ ಉತ್ತರ ಕರ್ನಾಟಕದ ನಗರಗಳಿಗೆ ಮಂಗಳೂರಿನಿಂದ ರೈಲು ಸಂಪರ್ಕ ಜಾಲ ವಿಸ್ತರಣೆಗೊಳ್ಳುತ್ತದೆ. ಬಜೆಟ್‌ಗಳಲ್ಲಿ ಕರಾವಳಿ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡಿದ ಹಲವಾರು ಯೋಜನೆಗಳು ಅನುಷ್ಠಾನದಲ್ಲಿ ಗೋಚರಿಸುವುದಿಲ್ಲ. ಇದರಲ್ಲಿ ಪ್ರಾಮುಖ್ಯವಾದುದು ಪಡುಬಿದ್ರಿ- ಕಾರ್ಕಳ- ಬೆಳ್ತಂಗಡಿ- ಉಜಿರೆ- ಧರ್ಮಸ್ಥಳ-ನೆಟ್ಟಣ ಮಧ್ಯೆ 120 ಕಿ.ಮೀ. ಹೊಸ ಮಾರ್ಗ, ಬೈಂದೂರು – ಕೊಲ್ಲೂರು- ಹಾಲಾಡಿ- ಹೆಬ್ರಿ- ಕಾರ್ಕಳ- ಮೂಡಬಿದಿರೆ- ವೇಣೂರು- ಬೆಳ್ತಂಗಡಿ- ಧರ್ಮಸ್ಥಳ- ನೆಟ್ಟಣ ಮಧ್ಯೆ ಹೊಸ ಮಾರ್ಗ, ಮೈಸೂರು- ಮಂಗಳೂರು ಮಡಿಕೇರಿ ಮೂಲಕ 272 ಕಿ.ಮೀ. ಹೊಸ ಮಾರ್ಗ ಯೋಜನೆಗಳಿಗೆ ಪ್ರಾಥಮಿಕ ತಾಂತ್ರಿಕ ಮತ್ತು ಸಂಚಾರ ಸರ್ವೆ ( ಪ್ರಿಲಿಮಿನರಿ ಎಂಜಿನಿಯರಿಂಗ್ ಕಮ್ ಟ್ರಾಫಿಕ್ ಸರ್ವೆ) ಕಾರ್ಯವನ್ನು ಪ್ರಕಟಿಸಿತ್ತು. ಮಂಗಳೂರು- ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಭಾಗದಲ್ಲಿ ರೈಲು ಸಂಚಾರ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಾಗಿ ನಂದಿಕೂರು ಮೂಲಕ ಸುಮಾರು 135 ಕಿ.ಮೀ. ಪರ್ಯಾಯ ಮಾರ್ಗದ ಪ್ರಸ್ತಾವವನ್ನು ರೈಲ್ವೇ ಯಾತ್ರಿಕರ ಸಂಘ ಮಂಡಿಸಿತ್ತು. ನಂದಿಕೂರು, ಕಾರ್ಕಳ, ಬಜಗೋಳಿ, ಉಜಿರೆ, ಚಾರ್ಮಾಡಿ ಮೂಲಕ ಸಾಗಿ ಸೋಮನಕಾಡು ಸೇತುವೆಯ ಭಾಗದಲ್ಲಿ ಸುರಂಗದ ಮೂಲಕ ಸಾಗಿ ಕೊಟ್ಟಿಗೆಹಾರದಿಂದ ಮೂಡಿಗೆರೆಯಲ್ಲಿ ರೈಲುಮಾರ್ಗಕ್ಕೆ ಜೋಡಣೆಯಾಗಿ ಅಲ್ಲಿಂದ ಮುಂದೆ ಬೆಂಗಳೂರಿಗೆ ಸಾಗುವುದು ಮತ್ತು ನಂದಿಕೂರು ಜಂಕ್ಷನ್ ಆಗಿ ರೂಪುಗೊಳ್ಳುವುದು ಈ ಪ್ರಸ್ತಾವನೆಯಲ್ಲಿ ಒಳಗೊಂಡಿದೆ.
Related Articles
ಮಂಗಳೂರಿನಿಂದ ಅರಸಿಕೆರೆ ಮಾರ್ಗವಾಗಿ ಮೀರಜ್‌ಗೆ 1990ರ ದಶಕದಲ್ಲಿ ಸಂಚಾರ ನಡೆಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ಮರು ಆರಂಭಿಸ ಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಈ ಕುರಿತು ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘ ತನ್ನ ಸಲಹೆ ಯನ್ನು ರವಾನಿಸಿದೆ. ಮಂಗಳೂರು- ಹಾಸನ ನಡುವೆ ಮೀಟರ್‌ಗೇಜ್ ರೈಲು ಮಾರ್ಗವಿದ್ದ ಸಂದರ್ಭದಲ್ಲಿ ಮಂಗಳೂರಿಗೆ ಸಕಲೇಶಪುರ, ಅರಸಿಕೆರೆ, ಹುಬ್ಬಳ್ಳಿ ಧಾರವಾಡ, ಬೆಳಗಾಂ ಮೂರ್ಗದ ಮೂಲಕ ರೈಲು ಸಂಚಾರ ನಡೆಸುತ್ತಿತ್ತು. ಮಂಗಳೂರು ಸೆಂಟ್ರಲ್‌ನಿಂದ ಪ್ರತಿದಿನ ರಾತ್ರಿ 11 ಗಂಟೆಗೆ ಹೊರಡುತ್ತಿತ್ತು. ಮೀರಜ್ ಪ್ರಯಾಣಕ್ಕೆ ಒಟ್ಟು 19ತಾಸುಗಳು ತಗಲುತ್ತಿತ್ತು. ಅನಂತರ ಈ ರೈಲುಗಾಡಿ ಸ್ಥಗಿತಗೊಂಡಿತ್ತು. ಇದು ಮರು ಆರಂಭಗೊಂಡರೆ ಮಂಗಳೂರು-ಹುಬ್ಬಳ್ಳಿ, ಧಾರವಾಡ, ಬೆಳಗಾವಿ ನಡುವೆ ರೈಲು ಸಂಪರ್ಕ ಜಾಲ ಏರ್ಪಡುತ್ತದೆ.
Advertisement
ಶತಮಾನದ ಹಿನ್ನೆಲೆ1907ರಲ್ಲಿ ಮದ್ರಾಸ್- ಮಂಗಳೂರು ರೈಲು ಮಾರ್ಗ ಆರಂಭಗೊಂಡಿದ್ದು ಮದ್ರಾಸ್‌ನ ಗವರ್ನರ್ ಮಂಗಳೂರಿಗೆ ಬಂದು ವೆಸ್ಟ್‌ಕೋಸ್ಟ್ ರೈಲನ್ನು ಉದ್ಘಾಟಿಸಿದ್ದರು. ಆಗ ದೇಶದಲ್ಲಿದ್ದ ಮೂರು ರೈಲುಗಳಲ್ಲಿ ಇದು ಒಂದಾಗಿತ್ತು. 1929ರಲ್ಲಿ ಇಲ್ಲಿಂದ ಪೇಶಾವರಕ್ಕೆ ಗ್ರಾಂಡ್ ಟ್ರಾಂಕ್ ರೈಲು ಆರಂಭಗೊಂಡಿದ್ದು, ಭಾರತ ಉಪಖಂಡದ ಅತ್ಯಂತ ಉದ್ದದ ರೈಲು ಸಂಚಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1930ರಲ್ಲಿ ಈಗಿನ ರೈಲು ನಿಲ್ದಾಣ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. 2007ರಲ್ಲಿ ಶತಮಾನೋತ್ಸವ ಆಚರಿಸಿತು. 1979ರಲ್ಲಿ ಹಾಸನ- ಮಂಗಳೂರು, 1983ರಲ್ಲಿ ಮಂಗಳೂರು- ಎನ್ ಎಂಪಿಟಿ, 1996ರಲ್ಲಿ ಮಂಗಳೂರು- ರೋಹಾ ( ಕೊಂಕಣ್ ಎಕ್ಸ್‌ಪ್ರೆಸ್) ರೈಲು ಪ್ರಾರಂಭವಾಯಿತು. ಜಾರ್ಜ್ ಫೆರ್ನಾಂಡಿಸ್ ಅವರು ಪ್ರಬಲ ಇಚ್ಛಾಶಕ್ತಿಯೊಂದಿಗೆ ಕೊಂಕಣ ರೈಲ್ವೇ ಯೋಜನೆಯನ್ನು ಕಾರ್ಯಗತಗೊಳಿಸದಿರುತ್ತಿದ್ದರೆ ಇಲ್ಲಿನ ರೈಲು ಸಂಪರ್ಕದ ಸ್ಥಿತಿ ಇನ್ನೂ ಶೋಚನೀಯವಾಗಿರುತ್ತಿತ್ತು. ಪ್ರಯತ್ನ ನಡೆಯುತ್ತಿದೆ
ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ರೈಲು ಸಂಪರ್ಕ ಜಾಲ ಮತ್ತು ಸೌಲಭ್ಯಗಳ ವಿಸ್ತರಣೆಗೆ ರೈಲ್ವೇ ಸಚಿವಾಲಯಕ್ಕೆ ನಿರಂತರ ಮನವಿ ಮಾಡುತ್ತಿದ್ದೇನೆ. ಒಂದಷ್ಟು ಬೇಡಿಕೆಗಳು ಈಡೇರಿವೆ. ಮಂಗಳೂರಿನಿಂದ ಕರ್ನಾಟಕ ಭಾಗಕ್ಕೆ, ದೇಶದ ಇತರೆಡೆಗೆ ರೈಲ್ವೇ ಸಂಪರ್ಕ ಜಾಲ ಹೆಚ್ಚು ವಿಸ್ತಾರಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.
– ನಳಿನ್ ಕುಮಾರ್ ಕಟೀಲು
ಸಂಸದರು, ದ.ಕ.ಲೋಕಸಭಾ ಕ್ಷೇತ್ರ ಕೇಶವ ಕುಂದರ್