Advertisement

ಅಂಗಡಿಗೆ ಪರವಾನಗಿ ಪಡೆಯಲು ಹೊಸ ನಿಯಮ

02:51 PM Oct 04, 2020 | Suhan S |

ಸಕಲೇಶಪುರ: ಅಂಗಡಿಗಳಿಗೆ ಪರವಾನಗಿ ನೀಡಲು ಗ್ರಾಪಂ ಜಾರಿ ಮಾಡಿರುವ ನೂತನ ನಿಯಮದ ವಿರುದ್ಧ ಆಕ್ರೋಶಗೊಂಡಿರುವ ವರ್ತಕರು, ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ.

Advertisement

ಗ್ರಾಮದ ವರ್ತಕರ ಸಂಘದ ಸದಸ್ಯರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ, ವ್ಯಾಪಾರ ವಹಿವಾಟು ನಡೆಸಲು ಈ ಹಿಂದೆ ಇದ್ದ ನಿಯಮ ಮುಂದುವರಿಸಬೇಕು ಎಂದು ವರ್ತಕರು ಒತ್ತಾಯಿಸಿದರು.

ಈ ವೇಳೆ ಸಂಘದ ಅಧ್ಯಕ್ಷ ಬಿ.ಎನ್‌.ನಾಗೇಂದ್ರ ಮಾತನಾಡಿ, ಇಷ್ಟು ವರ್ಷ ಕಟ್ಟಡದ ಮಾಲಿಕರಿಂದ ಕರಾರು ಪತ್ರ, ವ್ಯಾಪಾರ ನಡೆಸುವ ವರ್ತಕರಿಂದ ಗುರುತಿನ ಚೀಟಿ ಪಡೆದು ಪರವಾನಗಿ ಪತ್ರವಿತರಿಸಲಾಗುತ್ತಿತ್ತು. ಆದರೆ, ಈಗಕಟ್ಟಡ ಮಾಲಿಕರ ಸ್ಥಳದ ಈ ಸ್ವತ್ತು ಹಾಗೂ ವರ್ತಕರು 20 ರೂ.ನ ಛಾಪಾಕಾಗದ ನೀಡಬೇಕೆಂದು ಪಿಡಿಒ ಹೇಳುತ್ತಿದ್ದಾರೆ ಎಂದು ಹೇಳಿದರು.

ಪಿಡಿಒ ಪ್ರಭಾ ಮಾತನಾಡಿ, ನಾವು ಯಾವುದೇ ಹೊಸ ನಿಯಮ ಜಾರಿಗೆ ತಂದಿಲ್ಲ. ಹಿಂದೆ ಕೈಬರಹದಲ್ಲಿ ಪರವಾನಗಿ ಪತ್ರ ವಿತರಿಸಲಾಗುತ್ತಿತ್ತು. ಆದರೆ, ಸರ್ಕಾರ ಆನ್‌ಲೈನ್‌ ವ್ಯವಸ್ಥೆ ಮಾಡಿದೆ.ಇದಕ್ಕೆ ಕೆಲ ದಾಖಲಾತಿ ವರ್ತಕರು ನೀಡಬೇಕು.ಕೃಷಿ ಜಾಗದಲ್ಲಿ ಅಕ್ರಮಕಟ್ಟಡ ನಿರ್ಮಿಸಿ ವಾಣಿಜ್ಯಕ್ಕೆ  ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವರ್ತಕರಿಂದ ಸ್ಥಳದ ಇ ಸ್ವತ್ತು ಪಡೆದು ಪರಿಶೀಲಿಸಿ, ಪರವಾನಗಿ ನೀಡಲಾಗುತ್ತದೆ ಎಂದರು.

ಕೆಲವು ವರ್ತಕರು ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಲ್ಲಿ ಸಾಲ ಪಡೆದು ತೀರಿಸದೆ ಊರು ಬಿಟ್ಟಿರುತ್ತಾರೆ. ಈ ಮಾಹಿತಿಯನ್ನು ಬ್ಯಾಂಕಿನವರು ಗ್ರಾಪಂಗೆ ಕೇಳುತ್ತಾರೆ. ಹಾಗಾಗಿ ಇ ಸತ್ತು ನೀಡದ ವರ್ತಕರಿಂದ 20 ರೂ. ಛಾಪಾಕಾಗದ ಪಡೆದು, ಯಾವುದೇ ರೀತಿ ಸಾಲ ಪಡೆದುಕೊಳ್ಳುವುದಿಲ್ಲ ಎಂದು ಬರೆಯಿಸಿ ಸಹಿ ಮಾಡಿಸಿಕೊಳ್ಳುತ್ತೇವೆ ಅಷ್ಟೇ ಎಂದು ತಿಳಿಸಿದರು.

Advertisement

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವರ್ತಕರ ಸಂಘದ ಉಪಾಧ್ಯಕ್ಷ ವೆಂಕಟೇಶ್‌, ಸಾಲ ನೀಡುವುದು ಬ್ಯಾಂಕಿನವರ ವಿವೇಚನೆಗೆ ಬಿಟ್ಟಿದ್ದು, ವೈಯಕ್ತಿಕ ದಾಖಲೆ ಪರಿಶೀಲನೆ ಮಾಡಿ ಸಾಲ ನೀಡುತ್ತಾರೆ. ಅದಕ್ಕೆ ನಿಮಗೆ ಏಕೆ ಬಾಂಡ್‌ ಪೇಪರ್‌ ನೀಡಬೇಕು ಎಂದರು. ಪಿಎಸ್‌ಐ ಕೆ.ಎನ್‌.ಚಂದ್ರಶೇಖರ್‌ಭದ್ರತೆ ಕಲ್ಪಿಸಿದ್ದರು. ಪಂಚಾಯ್ತಿ ಆಡಳಿತ ಅಧಿಕಾರಿ ಉಳ್ಳಾಗಡ್ಡಿ, ಕಾರ್ಯದರ್ಶಿ ಶೇಖರ್‌, ವರ್ತಕರ ಸಂಘದ ಕಾರ್ಯದರ್ಶಿ ಭೋಗರಾಜ್‌, ಖಜಾಂಚಿ ಶಿವಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next