Advertisement

ಹೊಸ ಕೊಳವೆ ಬಾವಿಗಳಿಂದ ಹೊಸ ಸಮಸ್ಯೆ ಸೃಷ್ಟಿ

12:35 PM Mar 28, 2017 | Team Udayavani |

ಅಂಬ್ಲಿಮೊಗರು: ಒಂದೆಡೆ ಬಿರು ಬಿಸಿಲಿನ ತಾಪ, ಮತ್ತೂಂದೆಡೆ ಕುಡಿಯುವ ನೀರಿಗೆ ಪಡಿಪಾಟಲು. ಈ ಹಿನ್ನೆಲೆಯಲ್ಲೆ ಗ್ರಾಮ ಪಂಚಾಯತ್‌ ಗಳು ಬೋರ್‌ವೆಲ್‌ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಿವೆ. ಆದರೆ ಇದರಿಂದ ಹೊಸ ಸಮಸ್ಯೆ ತಲೆದೋರಿದ್ದು, ಸುತ್ತಲಿನ ಬಾವಿಗಳಲ್ಲಿ ನೀರಿನ ಕೊರತೆ ಉದ್ಭವಿಸುವ ಆತಂಕ ಎದುರಾಗಿದೆ. 

Advertisement

ಈ ಹಿನ್ನೆಲೆಯಲ್ಲಿ ಹೊಸ ಬೋರ್‌ವೆಲ್‌ ಕೊರೆಯಲು ಬರುವವರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುವ ಘಟನೆಗಳು ಆರಂಭವಾಗಿವೆ. ಇತ್ತೀಚೆಗಷ್ಟೇ ಅಂಬ್ಲಿಮೊಗರು ಪಂಚಾಯತ್‌ ವ್ಯಾಪ್ತಿಯ ತಾರಿಪಡು³ ಎಂಬಲ್ಲಿ  ಕೊಳವೆಬಾವಿ ಕೊರೆಧಿಯುವುದನ್ನು ವಿರೋಧಿಸಿ ತಾರಿಗುಡ್ಡೆ ಕೆರೆಬೈಲು, ಬರುವ ನಿವಾಸಿಗಳು ಕಾಮಗಾರಿಗೆ ತಡೆಯೊಡ್ಡಿದರು.

ತಾರಿಪಡು³ ಪ್ರದೇಶದಲ್ಲಿ ಈಗಾಗಲೇ ಮೂರು ಕೊಳವೆಬಾವಿಗಳನ್ನು ಕೊರೆಯ ಲಾಗಿದೆ. 100 ಕ್ಕಿಂತಲೂ ಅಧಿಕ ಮನೆಗಳಿಗೆ ಪಂ. ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿದೆ. ಮತ್ತೆ  ಈಗ ಗ್ರಾಮದ 300 ರಷ್ಟು ಮನೆಗಳಿರುವ ಮದಕ ಪ್ರದೇಶಕ್ಕೆ ನೀರು ಕೊಡಲು ತಾರಿಪಡು³  ಬಳಿ ಕೊಳವೆಬಾವಿ ನಿರ್ಮಿಸಲು ಬೋರ್‌ವೆಲ್‌ ಯಂತ್ರ ಆಗಮಿಸಿತ್ತು. ಇದನ್ನು ಕಂಡ ಸ್ಥಳೀಯರು  ಕಾಮಗಾರಿಗೆ ತಡೆಯೊಡ್ಡಿದರು. ಸ್ಥಳಕ್ಕಾಗಮಿಸಿದ  ಪಂ. ಅಧ್ಯಕ್ಷ ರಫೀಕ್‌ ಅವರ ಜತೆಗೆ ಸ್ಥಳೀಯರು ವಾಗ್ವಾದಕ್ಕೆ ಇಳಿದಿದ್ದರು. 

“ಹೊಸ ಬೋರ್‌ವೆಲ್‌ ಕೊರೆದರೆ ಈಗಿರುವ ಬಾವಿಗಳಲ್ಲೂ ನೀರು ಇಂಗುತ್ತದೆ. ಈ ವ್ಯಾಪ್ತಿಯಲ್ಲಿ ಈಗಾಗಲೇ 3 ಕೊಳವೆಬಾವಿ ಇದ್ದು, ಹಲವು ಮನೆಗಳ ಬಾವಿಗಳಲ್ಲಿ ನೀರು ಇಂಗಿದೆ. ಅಡಿಕೆ, ತೆಂಗಿನ ಮರಗಳು ನೀರಿಲ್ಲದೇ ಸೊರಗುತ್ತಿವೆ. ಪಂಚಾಯತ್‌ನಿಂದಲೂ ಯಾವುದೇ ವ್ಯವಸ್ಥೆಯಿಲ್ಲ. ಇಂತಹ ಸ್ಥಿತಿ ಇರುವಾಗ  ಮತ್ತೆ ಕೊಳವೆಬಾವಿ ನಿರ್ಮಿಸಿದರೆ ಹೇಗೆ?’ ಎಂದು ಜನ ಪ್ರಶ್ನಿಸಿದ್ದರು. 

ಅಂಬ್ಲಿಮೊಗರು ಪಂಚಾಯತ್‌ ವ್ಯಾಪ್ತಿ ಬಹುದೊಡ್ಡದಾಗಿದ್ದು, ಒಂದೇ ಪ್ರದೇಶವನ್ನು ಕೇಂದ್ರೀಕರಿಸಿ ಕೊಳವೆ ಬಾವಿ ನಿರ್ಮಿಸಬೇಡಿ ಎಂದೂ ಆಗ್ರಹಿಸಿದ್ದರು.

Advertisement

ಈ ವೇಳೆ  ಸ್ಥಳೀಯರನ್ನು ಸಮಾಧಾನಿ ಸುವಲ್ಲಿ ಯಶಸ್ವಿಯಾಗಿದ್ದ ರಫೀಕ್‌, ಸ್ಥಳದಲ್ಲಿರುವ 10ಕ್ಕೂ ಅಧಿಕ ಮನೆಗಳಿಗೆ ಕೊರೆಯುವ  ಬೋರ್‌ವೆಲ್‌ನಿಂದ ನೀರು ಒದಗಿಸಲಾಗುವುದು. ಅದಕ್ಕಾಗಿ ಪೈಪ್‌ ಲೈನ್‌ ಹಾಕುವ ಭರವಸೆ ಯನ್ನೂ ನೀಡಿದ್ದರು. ಜತೆಗೆ ರಸ್ತೆಯನ್ನೂ ಸರಿಪಡಿಸಿಕೊಡುವ ಭರವಸೆ ಪತ್ರವನ್ನು ನೀಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ಕೈ ಬಿಟ್ಟಿದ್ದರು.

ಚೆಂಬುಗುಡ್ಡೆಯಲ್ಲೂ ಪ್ರತಿಭಟನೆ 
ಈ ಸಮಸ್ಯೆ ಅಲ್ಲಿ ಮಾತ್ರವಲ್ಲ; ಚೆಂಬುಗುಡ್ಡೆಯಲ್ಲೂ ಪಿಲಾರ್‌ನ ಜನರೂ ಇಂಥದ್ದೇ ಪ್ರತಿಭಟನೆ ನಡೆಸಿದ್ದರು. ಸೋಮೇಶ್ವರ ಪಂಚಾಯತ್‌ ವ್ಯಾಪ್ತಿಯ ಪಿಲಾರ್‌ ಬಳಿ ಬೋರ್‌ವೆಲ್‌ ಕೊರೆಯುವುದನ್ನು ತಡೆಹಿಡಿದ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಅಂತರ್ಜಲ ಮಟ್ಟ ಕುಸಿತ ಕಳವಳ
ದಿನೇ ದಿನೆ ಕುಸಿಯುತ್ತಿರುವ ಅಂತರ್ಜಲ ಮಟ್ಟ ಸಮಸ್ಯೆ ಬಿಗಡಾಯಿ ಸುವಂತೆ ಮಾಡುತ್ತಿದೆ. ಬೇಸಗೆ ಮುಗಿಯ ಲು ಇನ್ನೂ ಎರಡು ತಿಂಗಳಿದ್ದು, ಈಗಲೇ ನೀರಿಗೆ ಸಮಸ್ಯೆ ಇದೆ. ಒಂದು ವೇಳೆ ಸಿಕ್ಕ ಸಿಕ್ಕಲ್ಲಿ ಹೊಸ ಬೋರ್‌ ವೆಲ್‌ ಗಳು ಕೊರೆದರೆ ಸಿಗುವಷ್ಟೂ ನೀರು ಸಿಗದು ಎಂಬುದು ಗ್ರಾಮಸ್ಥರ ಆತಂಕ.

ಕೆಲವು ಭಾಗಕ್ಕೆ ನೀರು ಒದಗಿಸಲು ಸಾಧ್ಯ
ಅಂಬ್ಲಿಮೊಗರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಜಿ.ಪಂ.ನಿಂದ ಕುಡಿಯುವ ನೀರಿಗಾಗಿ ಅನುದಾನ ಸಿಕ್ಕಿಲ್ಲ. ಈ ಬಾರಿ ಶಾಸಕರ ನಿಧಿಯಿಂದ 2 ಕಡೆ ಕೊಳವೆ ಬಾವಿ ಕೊರೆಯಲು ಹಣ ಮಂಜೂರಾಗಿದ್ದು,  ಇದರಲ್ಲಿ ಅಂಬ್ಲಿಮೊಗರು ಪಂಚಾಯತ್‌ ಬಳಿ ಕೊರೆಯಲಾದ ಬೋರ್‌ವೆಲ್‌ನಲ್ಲಿ  ನೀರು ಸಿಕ್ಕಿಲ್ಲ. ತಾರಿಗುಡ್ಡೆಯಲ್ಲಿ ಕೊಳವೆ ಬಾವಿ ಕೊರೆಯಲು ಸಾರ್ವಜನಿಕರು ಅಡ್ಡಿ ಪಡಿಸಿದ್ದರು. ಬಳಿಕ ಸ್ಥಳೀಯರಿಗೆ ನೀರಿನ ಸಮಸ್ಯೆ ಬಂದರೆ ನೀರು ಒದಗಿಸುವ ಭರವಸೆ ನೀಡಿದ ಬಳಿಕ ಬೋರ್‌ವೆಲ್‌ ಕೊರೆಯಲು ಅವಕಾಶ ನೀಡಿದ್ದಾರೆ.
ಮಹಮ್ಮದ್‌ ರಫೀಕ್‌,  ಅಧ್ಯಕ್ಷರು, ಅಂಬ್ಲಿಮೊಗರು ಗ್ರಾಮ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next