ನವದೆಹಲಿ: ಮೊಬೈಲ್ ಸಿಮ್, ಪದವಿ ತರಗತಿ ಅಂಕಪಟ್ಟಿ ಸೇರಿದಂತೆ ಒಂದೊಂದೇ ಸೌಲಭ್ಯ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಆಧಾರ್ ಅನ್ನು ಕಡ್ಡಾಯಗೊಳಿಸುತ್ತಿದೆ. ಇನ್ನು ಮುಂದೆ ಹೊಸತಾಗಿ ಡ್ರೈವಿಂಗ್ ಲೈಸನ್ಸ್ ಪಡೆಯಲು ಮತ್ತು ನವೀಕರಣಕ್ಕೆ ಆಧಾರ್ ಸಂಖ್ಯೆ ಬೇಕಾಗುತ್ತದೆ. ಒಬ್ಬರ ಹೆಸರಿನಲ್ಲಿಯೇ ಹಲವು ಡ್ರೈವಿಂಗ್ ಲೈಸನ್ಸ್‌ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಗೆ ಚಾಲನಾ ಪರವಾನಗಿ ಪಡೆಯುವುದಕ್ಕೆ ಆಧಾರ್ ಕಡ್ಡಾಯ ಮಾಡುವ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ರವಾನಿಸಲಿದೆ. ಈ ವರ್ಷದ ಅಕ್ಟೋಬರ್‌ನಿಂದ ಹೊಸ ನಿಯಮ ಜಾರಿಗೆ ಬರಲಿದೆ.
ಪದೇ ಪದೆ ಸಂಚಾರ ನಿಯಮಗಳನ್ನು ಉಲ್ಲಂ ಸಿದಾಗ, ಸಂಚಾರ ಅಪರಾಧಗಳು ನಡೆದಾಗ ಅಥವಾ ನಕಲಿ ಗುರುತಿನ ಪತ್ರ ಹೊಂದಿದ್ದಾಗ ಚಾಲನಾ ಪರವಾನಗಿ ರದ್ದು ಮಾಡಲಾಗುತ್ತದೆ. ಈ ವೇಳೆ ಬಹುತೇಕರು ಮತ್ತೂಮ್ಮೆ ಡಿಎಲ್ ಮಾಡಿಸಿಕೊಳ್ಳುತ್ತಾರೆ. ಇಂತಹ ಪ್ರಕರಣಗಳನ್ನು ಪತ್ತೆ ಮಾಡಲು ಆಧಾರ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ವಿವರಗಳು ನೆರವಾಗಲಿದೆ.
ಅರ್ಜಿದಾರರ ಹೆಸರಿನಲ್ಲಿ ದೇಶದ ಯಾವುದೇ ಭಾಗದಲ್ಲಿ ಈಗಾಗಲೇ ಡಿಎಲ್ ವಿತರಿಸಲಾಗಿದೆಯೇ ಎಂಬುವನ್ನು ಪರಿಶೀಲಿಸಲು ಅನುಕೂಲವಾಗುವಂತೆ ದೇಶದ ಎಲ್ಲ ಆರ್‌ಟಿಒಗಳಿಗೆ ಡಿಎಲ್‌ಗಳ ಕೇಂದ್ರ ದತ್ತಾಂಶಕ್ಕೆ (ಸೆಂಟ್ರಲ್ ಡಾಟಾಬೇಸ್- ಸಾರಥಿ) ಪ್ರವೇಶಾನುಮತಿ ನೀಡಲಾಗುತ್ತದೆ.
ಹಜ್ ಆಯ್ಕೆಗೆ ಆಧಾರ್ ಜೋಡಣೆಗೆ ಯುಪಿ ಸರ್ಕಾರದ ಚಿಂತನೆ
ಲಕ್ನೋ: ಹಜ್ ಯಾತ್ರೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಕೆಲಸದಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರ ಹೊಸದಾಗಿ ಆಧಾರ್ ಜೋಡಣೆ ಮಾಡಲು ಅಲೋಚನೆ ಮಾಡುತ್ತಿದೆ.
ಇದಕ್ಕಾಗಿ ಈಗಾಗಲೇ ಒಂದಕ್ಕಿಂತ ಹೆಚ್ಚು ಭಾರಿ ಹಜ್‌ಯಾತ್ರೆ ಯಾರು ಕೈಗೊಂಡಿದ್ದಾರೆ ಎಂಬುದನ್ನು ಪತ್ತೆ ಮಾಡುವ ಕೆಲಸಕ್ಕೆ ಅಧಿಕಾರಿಗಳು ಕೈ ಹಾಕಿದ್ದಾರೆ.
ಅರ್ಜಿಯ ಜೊತೆಯಲ್ಲೇ ಆಧಾರ್ ನಂಬರ್ ಜೋಡಿಸಲು ಅಧಿಕಾರಿಗಳು ಮುಂದಾಗಿದ್ದು ಇದರಿಂದ ಅವರು ಈ ಹಿಂದೆ ಯಾತ್ರೆ ಮಾಡಿದ್ದರೆ ಇಲ್ಲವೆ ಎಂಬುದನ್ನು ಪತ್ತೆಮಾಡಲು ಸಹಕಾರಿಯಾಗಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮೊಹ್ಸಿನ್ ರಾಜಾ ತಿಳಿಸಿದ್ದಾರೆ.