Advertisement

ಮುಗಿಯದ ರಿಕ್ಷಾ ನಿಲ್ದಾಣ ವಿವಾದ

02:54 PM Aug 24, 2022 | Team Udayavani |

ಕುಂದಾಪುರ: ಇಲ್ಲಿನ ವಿನಾಯಕ ಥಿಯೇಟರ್‌ ಬಳಿ ಇರುವ ರಿಕ್ಷಾ ನಿಲ್ದಾಣ ವಿವಾದದ ಕೇಂದ್ರ ಬಿಂದುವಾಗಿದ್ದು ಶಾಸಕರು ಹಾಗೂ ಸಹಾಯಕ ಕಮಿಷನರ್‌ ಭೇಟಿ ನೀಡಿದರೂ ಸಮಸ್ಯೆ ಇತ್ಯರ್ಥವಾಗಲಿಲ್ಲ. ಅಂತೆಯೇ ಪುರಸಭೆ ವ್ಯಾಪ್ತಿಯಲ್ಲಿ ರಿಕ್ಷಾ ನಿಲ್ದಾಣಗಳು ಅಧಿಕೃತ ನಿಲ್ದಾಣಗಳಾಗಿ ಘೋಷಣೆಯಾಗಿಲ್ಲ.

Advertisement

ಭಾರೀ ದಂಡ ಪ್ರಸ್ತುತ ಇರುವ ರಿಕ್ಷಾ ನಿಲ್ದಾಣ ಜಾಗದ ವಿವಾದ ನ್ಯಾಯಾಲಯದ ಕಟಕಟೆ ಹತ್ತಿ ಅಲ್ಲಿಂದ ರಿಕ್ಷಾಗಳನ್ನು ತೆರವುಗೊಳಿಸಬೇಕೆಂದಾಗಿದೆ. ಸಾರಿಗೆ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ಸಂಚಾರ ಠಾಣೆಯವರಿಗೆ ರಿಕ್ಷಾಗಳನ್ನು ತೆರವು ಗೊಳಿಸುವುದು, ಮರಳಿ ಅಲ್ಲೇ ರಿಕ್ಷಾಗಳು ನಿಲ್ಲುವುದು ಇದು ಮಾಮೂಲಾಗಿದೆ. ಸಾರಿಗೆ ಅಧಿಕಾರಿಗಳು ಆಗಾಗ ಬಂದು ಪ್ರತೀ ರಿಕ್ಷಾಕ್ಕೆ 2 ಸಾವಿರ ರೂ.ಗಳಿಂದ 10 ಸಾವಿರ ರೂ. ವರೆಗೆ ದಂಡ ವಿಧಿಸುತ್ತಿದ್ದಾರೆ. ರಿಕ್ಷಾ ಚಾಲಕರ ಅಸಹನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪರ್ಯಾಯ ನಿಲ್ದಾಣ ಒದಗಿಸಲು ಎಲ್ಲರೂ ಅಸಮರ್ಥರಾಗುತ್ತಿದ್ದಾರೆ ಎಂಬ ಆಕ್ರೋಶವೂ ಹೆಚ್ಚಾಗುತ್ತಿದೆ.

ಅನಧಿಕೃತ

ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಒಂದೇ ಒಂದು ಅಧಿಕೃತ ರಿಕ್ಷಾ ನಿಲ್ದಾಣಗಳೇ ಇಲ್ಲ. ಈ ಕುರಿತು ರಿಕ್ಷಾ ಚಾಲಕರು ಪ್ರತಿಭಟನೆ,ಜಾಥಾ ನಡೆಸಿದ್ದರು. ಪುರಸಭೆಗೆ ಮುತ್ತಿಗೆ ಹಾಕಿದ್ದರು. ಅದಾದ ಬಳಿಕ ಪುರಸಭೆ ಭರವಸೆ ನೀಡಿತೆಂದು ರಿಕ್ಷಾ ಚಾಲಕರು ಧರಣಿ ಹಿಂತೆಗೆದಿದ್ದರು. ಪುರಸಭೆಯೇನೋ ಭರವಸೆಯ ಮೊದಲ ಅಂಶವಾದ ಸಾರಿಗೆ ಅಧಿಕಾರಿಗಳ ಸಭೆಯನ್ನೇನೋ ನಡೆಸಿತು. ಆಮೇಲೆ ಏನೂ ಮಾಡಲಿಲ್ಲವೋ ಆಗಲಿಲ್ಲವೋ. ಅಂತೂ ರಿಕ್ಷಾ ನಿಲ್ದಾಣಗಳ ಗುರುತಿಸುವಿಕೆ ನಡೆಯಲೇ ಇಲ್ಲ.

ಭೇಟಿ

Advertisement

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಹಾಯಕ ಕಮಿಷನರ್‌ ಕೆ. ರಾಜು ವಿನಾಯಕ ಬಳಿಯ ರಿಕ್ಷಾ ನಿಲ್ದಾಣಕ್ಕೆ ಭೇಟಿ ನೀಡಿದರು. ಚಾಲಕರ ಬಳಿ ಸಮಸ್ಯೆ ಆಲಿಸಿದರು. ಕೋಡಿ ಸಮುದ್ರತೀರ, ಶಾಲಾ ಕಾಲೇಜುಗಳು, ಕಾರ್ಖಾನೆ, ಜನವಸತಿ ಪ್ರದೇಶಕ್ಕೆ ತೆರಳುವ ನೂರಾರು ಮಂದಿಗೆ ಬಸ್‌ ಹೊರತಾದ ಪ್ರಯಾಣಸಾಧನ ಇಲ್ಲಿ ರಿಕ್ಷಾವೇ. ಆದ್ದರಿಂದ ರಿಕ್ಷಾಗಳಿಗೆ ಪಾರ್ಕಿಂಗ್‌ಗೆ ಜಾಗ ನೀಡದೆ ಇದ್ದರೆ ಜನರಿಗೂ ತೊಂದರೆ ಎನ್ನುವುದು ರಿಕ್ಷಾ ಚಾಲಕರ ವಾದ. ನ್ಯಾಯಾಲಯದ ಆದೇಶ ಇದ್ದ ಕಾರಣ ಧಿಕ್ಕರಿಸುವಂತಿಲ್ಲ, ಬದಲಿ ಜಾಗವೇ ಇಲ್ಲ ಎನ್ನುವುದು ಆಡಳಿತದ ವಾದ. ಕೋಡಿ ರಸ್ತೆ ಬದಿಯಲ್ಲಿ ಜಾಗ ಕೊಟ್ಟರೂ ರಿಕ್ಷಾಗಳು ನಿಂತದ್ದು ಮುಖ್ಯ ರಸ್ತೆಗೆ ಕಾಣುವುದಿಲ್ಲ, ಆದ್ದರಿಂದ ಮುಖ್ಯ ರಸ್ತೆ ಬದಿ ಒಂದು ರಿಕ್ಷಾ ನಿಂತು ಇತರ ರಿಕ್ಷಾಗಳು ಕೋಡಿ ರಸ್ತೆ ಬದಿ ನಿಲ್ಲಲು ನಮ್ಮ ಆಕ್ಷೇಪ ಇಲ್ಲ ಎನ್ನುವುದು ರಿಕ್ಷಾ ಚಾಲಕರ ಮನವಿ. ಒಟ್ಟಿನಲ್ಲಿ ತಿಂಗಳುಗಳು ಕಳೆದು ವರ್ಷಗಳೇ ಮುಗಿದರೂ ಸಮಸ್ಯೆ ಇತ್ಯರ್ಥವಾಗುವ ಲಕ್ಷಣ ಕಾಣಿಸುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ದಂಡದ ಪ್ರಮಾಣ ಏರುತ್ತಿದೆ.

ಸಮಸ್ಯೆ

ನಗರದಲ್ಲಿ 500ಕ್ಕಿಂತ ಅಧಿಕ ರಿಕ್ಷಾಗಳಿದ್ದು 20ಕ್ಕಿಂತ ಹೆಚ್ಚು ಕಡೆ ನಿಲ್ದಾಣಗಳಿವೆ. ಇವುಗಳನ್ನು ಪುರಸಭೆಯಾಗಲೀ, ಸಾರಿಗೆ ಇಲಾಖೆಯಾಗಲೀ ಅಧಿಕೃತ ಮಾಡದ ಕಾರಣ ಸಮಸ್ಯೆಯಾಗಿದೆ. ಸಾರಿಗೆ ಇಲಾಖೆ ತನ್ನ ನಿಯಮಗಳನ್ನು ನೋಡದೆ ಪುರಸಭೆ ನಿಲ್ದಾಣ ಮಾಡಬೇಕೆಂದು ಹೇಳುತ್ತದೆ. ಪುರಸಭೆ ತನ್ನ ವ್ಯಾಪ್ತಿಗೆ ಬರುವುದಿಲ್ಲ, ಆರ್‌ಟಿಒ ರಿಕ್ಷಾಗಳಿಗೆ ಅನುಮತಿ ನೀಡುವಾಗ ನಿಲ್ದಾಣಕ್ಕೆ ಸ್ಥಳಾವಕಾಶ ಇದೆಯೇ ಎಂದು ಪರಿಶೀಲಿಸಿ ಪುರಸಭೆಯ ಗಮನಕ್ಕೆ ತಂದು ನೀಡುವುದು ಅಲ್ಲ. ಈ ಎರಡು ಸರಕಾರಿ ಸಂಸ್ಥೆಗಳ ತಿಕ್ಕಾಟದಿಂದ ರಿಕ್ಷಾ ಚಾಲಕರು ಕಂಗಾಲಾಗಿದ್ದಾರೆ. ಕಂಡ ಕಂಡವರಿಂದ ದಂಡ ಹಾಕಿಸುವ ಇಕ್ಕಟ್ಟಿಗೆ ಸಿಲುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next