ಅಂಕೋಲಾ: ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ನಿರ್ಮಾಣ ಹಾಗೂ ಕೋಡ್ಸಣಿಯಲ್ಲಿ ಸೇತುವೆ ನಿರ್ಮಾಣಕ್ಕೆ ಹಾಕಲಾದ ಬೃಹತ್ ಪ್ರಮಾಣದ ಮಣ್ಣಿನಿಂದ ಮಳೆಗಾಲದಲ್ಲಿ ನೆರೆಯ ಭೀತಿಯಿದ್ದು, ಮಣ್ಣನ್ನು ತುರ್ತಾಗಿ ತೆಗೆಸುವಂತೆ ಒತ್ತಾಯಿಸಿ ಜೂ.3 ರಂದು ಬೆಳಗ್ಗೆ 11ಕ್ಕೆ ವಿವಿಧ ಸಂಘಟನೆಗಳು ಮತ್ತು ನಾಗರಿಕರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಲಿದ್ದಾರೆ.
ಕಳೆದ ಮೂರು ವರ್ಷಗಳಿಂದ ಗಂಗಾವಳಿ ನದಿಗೆ ನೆರೆ ಬರುತ್ತಿದ್ದು, ಇಲ್ಲಿಯ ಜನರ ಜೀವನ ಸಂಕಷ್ಟಕ್ಕೆ ದೂಡಿದಂತಾಗಿದೆ. 1962ರಲ್ಲಿ ಗಂಗಾವಳಿ ನದಿಗೆ ಒಮ್ಮೆ ಮಹಾಪೂರ ಬಂದದ್ದು ಬಿಟ್ಟರೆ ಇನ್ನು ಯಾವುದೇ ಕಾರಣಕ್ಕೂ ನೆರೆ ಬಂದಿರಲಿಲ್ಲ. ಆದರೆ ಕೋಡ್ಸಣಿ ಸಮೀಪ ಗಂಗಾವಳಿ ನದಿಗೆ ಐಆರ್‌ಬಿಯವರು ಸೇತುವೆ ನಿರ್ಮಿಸಲು ಹಾಕಿದ ಮಣ್ಣು ತೆಗೆಯದೆ ಇರುವುದು ಮತ್ತು ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ನಿರ್ಮಾಣಕ್ಕೆ ಹಾಕಿದ್ದ ಮಣ್ಣನ್ನು ತೆಗೆಯದೆ ಇರುವುದರಿಂದ ಕೃತಕ ನೆರೆ ಉಂಟಾಗುತ್ತಿದೆ. ಹೀಗಾಗಿ ತಹಶೀಲ್ದಾರರು ತಕ್ಷಣ ಮಣ್ಣನ್ನು ತೆಗೆಸುವಂತೆ ಒತ್ತಾಯಿಸಿದ್ದಾರೆ.
ಮಂಜಗುಣಿ, ಬಿಳಿಹೊಂಯ್ಗಿ ಹಿಚ್ಕಡ, ದಂಡೆಭಾಗ, ಅಗ್ರಗೋಣ, ಜೂಗ, ಸಗಡಗೇರಿ, ಶಿರೂರು, ಚಂದುಮಠ, ಉಳವರೆ, ಕೋಡ್ಸಣಿ, ವಾಸರಕುದ್ರಿಗೆ, ಹೊಸೂರು, ಮೊಗಟಾ, ಮೊರಳ್ಳಿ, ಶಿರಗುಂಜಿ, ಹೊಳೆಮಕ್ಕಿ, ಹಡಿನಗದ್ದೆ, ಹೊನ್ನಳ್ಳಿ, ಅಗಸೂರು, ಹಿಲ್ಲೂರು, ಹೊಸಕಂಬಿ, ಸುಂಕಸಾಳ, ಡೋಂಗ್ರಿ ಸೇರಿದಂತೆ ಹತ್ತಾರು ಗ್ರಾಮಗಳು ನೆರೆಯಿಂದ ಈಗಾಗಲೇ ಬಸವಳಿದಿದ್ದಾರೆ. ಈ ಬಾರಿಯೂ ನೆರೆ ಉಂಟಾದರೆ ಇನ್ನು ಅವರ ಜೀವನ ಹೇಳತೀರದ್ದಾಗಿದೆ.
ಈ ಬಗ್ಗೆ ಸ್ಥಳೀಯರು ತಹಶೀಲ್ದಾರ್ ಗೆ ಕೇಳಿದರೆ ತಾವು ಗುತ್ತಿಗೆದಾರರಿಗೆ ಮಣ್ಣು ತೆಗೆಯಲು ನೋಟಿಸ್ ನೀಡಿದ್ದೇವೆ ಎನ್ನುತ್ತಿದ್ದಾರೆ. ಆದರೆ ಮಳೆಗಾಲ ಸಮೀಪಿಸಿದರೂ ಕೂಡ ಇನ್ನುವರೆಗೂ ಮಣ್ಣು ತೆಗೆಯದೆ ಹಾಗೆಯೇ ಬಿಡಲಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಜೂ.3ರ ಬೆಳಗ್ಗೆ 11ಕ್ಕೆ ಮನವಿ ಸಲ್ಲಿಸಿ ಜತೆಗೆ ತಹಶೀಲ್ದಾರರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದಾರೆ.
ಸರಿಯಾದ ಸಮಯಕ್ಕೆ ಅಂಕೋಲಾ ತಹಶೀಲ್ದಾರ್ ಕಚೇರಿಗೆ ಜನರು ಆಗಮಿಸುವಂತೆ ಪುನೀತ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಮಂಜಗುಣಿ, ಗೌರವಾಧ್ಯಕ್ಷ ಶ್ರೀಪಾದ ನಾಯ್ಕ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ನವೋದಯ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಧುಕರ ಗೌಡ, ಕಾರ್ಯದರ್ಶಿ ಮಂಜುನಾಥ ಗೌಡ, ಪ್ರಮುಖರಾದ ಬೀರಾ ಗೌಡ, ರಮೇಶ ಗೌಡ, ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿ ಅಧ್ಯಕ್ಷ ದೇವರಾಯ ನಾಯಕ ವಿನಂತಿಸಿದ್ದಾರೆ.