Advertisement

ಕೆರೆಗಳ ಒತ್ತುವರಿ ತೆರವಿಗೆ ಅಧಿಕಾರಿಗಳ ನಿರ್ಲಕ್ಷ್ಯ

08:54 PM Jul 21, 2019 | Lakshmi GovindaRaj |

ಗುಡಿಬಂಡೆ: ತಾಲೂಕಿನಲ್ಲಿ ಅನೇಕ ಕೆರೆಗಳನ್ನು ಕೆಲ ರಾಜಕೀಯ ಪ್ರಭಾವಿತರು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ತೆರವು ಮಾಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ತಾಲೂಕಿನಲ್ಲಿ ಸಣ್ಣ ನೀರಾವರಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಗೆ ಸೇರಿರುವ 80 ಕೆರೆಗಳಿದ್ದು, ಈ ಕೆರೆಗಳ ಅತಿಕ್ರಮದ ಒಟ್ಟು ವಿಸ್ತೀರ್ಣ 2176 ಎಕರೆ 17 ಗುಂಟೆ ಆಗಿದ್ದು, ಈ ಕೆರೆಗಳನ್ನು ಉಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

Advertisement

ಅಮಾನಿಬೈರಸಾಗರ ಕೆರೆಯೇ ಹೆಚ್ಚು ಒತ್ತುವರಿ: ಗುಡಿಬಂಡೆ ಅಮಾನಿಬೈರಸಾಗರ ಕೆರೆ ಭಾರತದ ನಕ್ಷೆಯ ಭೂಪಟದಂತೆ ಕಾಣಿಸುವ ಕೆರೆಯನ್ನೇ ಇಂದು ಕೆಲ ರೈತರು ಅತಿಕ್ರಮಿಸಿ ತಮ್ಮ ಸ್ವಂತ ಜಮೀನುಗಳನ್ನಾಗಿ ಮಾಡಿಕೊಂಡಿದ್ದಾರೆ. ಇದೆಲ್ಲವೂ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡರಾಗಿರುವುದು ಸಂಶಯಕ್ಕೆ ಕಾರಣವಾಗಿದೆ.

ಜಾನುವಾರುಗಳಿಗೆ ತೊಂದರೆ: ಈ ಹಿಂದೆ ಕರೆ ಭತ್ತಿಹೋದ ನಂತರ ಅಮಾನಿಬೈರಸಾಗರ ಕೆರೆಯ ಸುತ್ತಮುತ್ತಲ ಗ್ರಾಮಸ್ಥರು ಕುರಿ, ಮೇಕೆ, ಜಾನುವಾರುಗಳನ್ನು ಕೆರೆಯಲ್ಲಿ ಮೇಯಿಸುತ್ತಿದ್ದರು. ಆದರೆ ಈಗ ಆ ಕೆರೆಯನ್ನು ಅತಿಕ್ರಮಿಸಿರುವುದರಿಂದ ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ. ಅನೇಕ ದನಕರುಗಳಿಗೆ ಈ ಕೆರೆಯೇ ಆಸರೆಯಾಗಿತ್ತು. ಆದರೆ ಇಂದು ಕೆರೆ ಜಮೀನುಗಳಾಗಿ ಮಾರ್ಪಾಡಾಗಿದ್ದು, ಜಾನುವಾರುಗಳನ್ನು ಮೇಯಿಸಲು ತೊಂದರೆಯಾಗಿದೆ.

ಅರಣ್ಯ ಇಲಾಖೆ ಬೇಜಾವಬ್ದಾರಿ:ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್‌ ಗುಡಿಬಂಡೆ ಅಮಾನಿಬೈರಸಾಗರ ಕೆರೆಯನ್ನು ಅತಿಕ್ರಮಿಸಿದ್ದೆಲ್ಲವನ್ನು ತೆರವು ಮಾಡಿಸಿ ಕೆರೆಯ ಸುತ್ತಲು ಗಡಿ ಗುರುತು ಹಾಕಿಸಿ ಅರಣ್ಯ ಇಲಾಖೆಗೆ ತೆರವುಗೊಳಿಸಿದ ಜಾಗದಲ್ಲಿ ಸಸಿ ನೆಡುವಂತೆ ಸೂಚಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಮಾತನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಾಳಿಗೆ ತೂರಿದ್ದರು.

ಗಡಿ ಗುರುತು ಕಿತ್ತೆಸೆದ ರೈತರು: 2015-16 ರಲ್ಲಿ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್‌ ಅವಧಿಯಲ್ಲಿ ಕೆರೆಯನ್ನು ಸರ್ವೆ ಮಾಡಿ ಕೆರೆಯ ಸುತ್ತಲು ಗಡಿ ಗುರುತು ನಿರ್ಮಿಸಿದ್ದರು. ಆದರೆ ಡೀಸಿ ವರ್ಗಾವಣೆಯಾದ ಕೂಡಲೇ ಕೆರೆಯ ಅಕ್ಕಪಕ್ಕದಲ್ಲಿರುವ ಜಮೀನುಗಳ ಮಾಲೀಕರು ಗಡಿ ಗುರುತುಯನ್ನು ಕಿತ್ತೆಸೆದು ಸ್ವಂತ ಜಮೀನುಗಳನ್ನಾಗಿ ಮಾಡಿಕೊಂಡಿದ್ದಾರೆ.

Advertisement

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯ: ಈ ಹಿಂದೆ ತಹಶೀಲ್ದಾರ್‌ರವರು ಸರ್ವೆ ಮಾಡಿ ಸಣ್ಣ ನೀರಾವರಿ ಇಲಾಖೆಗೆ ಒಪ್ಪಿಸಿದ್ದರು. ಆದರೆ ಕಚೇರಿ ಗುಡಿಬಂಡೆಯಲ್ಲಿ ಇಲ್ಲದ ಕಾರಣ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೇವಲ ಸಾಮಾನ್ಯ ಸಭೆ ನಡೆಯುವ ಸಮಯದಲ್ಲಿ ಮಾತ್ರ ಬಂದು ಹೋದರೆ ಮತ್ತೆ ಅವರು ಬರುವುದು ಮತ್ತೆ ಸಭೆ ಕರೆದಾಗ. ಅಲ್ಲಿಯವರೆಗೂ ಗುಡಿಬಂಡೆಯತ್ತ ತಿರುಗಿಯೂ ನೋಡಲ್ಲ. ಅಧಿಕಾರಿಗಳ ಬೇಜಾವಬ್ದಾರಿಯಿಂದಾಗಿ ಇಂದು ನೂರಾರು ಎಕರೆ ಇರುವ ಕೆರೆಗಳು ದಿನದಿಂದ ದಿನಕ್ಕೆ ವಿಸ್ತೀರ್ಣ ಕಳೆದುಕೊಳ್ಳುತ್ತಿವೆ.

ಭೂಮಿಯ ಬೆಲೆ ಹೆಚ್ಚಾದಂತೆಲ್ಲ ಅಕ್ರಮ: ಇತ್ತೀಚಿಗೆ ತಾಲೂಕಿನಲ್ಲಿ ಭೂಮಿಯ ಬೆಲೆ ಹೆಚ್ಚಾಗಿದ್ದು, ಇರುವ ಭೂಮಿಯನ್ನು ಮಾರಿಕೊಂಡು ಸರ್ಕಾರಿ ಜಮೀನುಗಳನ್ನು ಗುಳುಂ ಮಾಡಲಿಕ್ಕೆ ಅನೇಕರು ಹೊಂಚು ಹಾಕುತ್ತಿದ್ದು, ಅಧಿಕಾರಿಗಳು ಒತ್ತುವರಿ ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ.

ಕೆರೆ ಒತ್ತುವರಿ ತೆರವು ಮಾಡಿ ಗಡಿ ಗುರುತು ನಿರ್ಮಿಸಿದ ನಂತರ ಗಡಿ ಗುರುತಿನಲ್ಲಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಟ್ಟರೆ ಪರಿಸರವನ್ನು ಬೆಳೆಸಿದಂತೆ ಆಗುತ್ತದೆ. ಮತ್ತೆ ಕೆರೆ ಒತ್ತುವರಿ ಮಾಡಲು ಅವಕಾಶವಿರುವುದಿಲ್ಲ. ಕೆರೆಗಳ ಒತ್ತುವರಿ ತೆರವು ಮಾಡಿದ ಕೂಡಲೇ ಸಸಿಗಳನ್ನು ನೆಡಲು ಅಧಿಕಾರಿಗಳು ಮುಂದಾಗಬೇಕು.
-ಗುಂಪು ಮರದ ಆನಂದ್‌, ಪರಿಸರ ಪ್ರೇಮಿ

ಈ ಹಿಂದೆಯೂ ಗುಡಿಬಂಡೆ ಅಮಾನಿಬೈರಸಾಗರ ಕೆರೆಯನ್ನು ಸರ್ವೆ ಮಾಡಿಸಿ ಸಣ್ಣ ನೀರಾವರಿ ಇಲಾಖೆಗೆ ಒಪ್ಪಿಸಿದ್ದೇವೆ. ಮತ್ತೆ ಕೆರೆ ಒತ್ತುವರಿ ಆಗಿರುವುದರ ಬಗ್ಗೆ ಕೇಳಿ ಬಂದಿದ್ದು, ಮತ್ತೂಮ್ಮೆ ಸರ್ವೆ ಮಾಡಲಾಗುವುದು. ಡೀಸಿ ಸೂಚಿಸಿರುವಂತೆ ತಾಲೂಕಿನಲ್ಲಿ 40 ಕ್ಕೂ ಹೆಚ್ಚು ಕೆರೆಗಳ ಒತ್ತುವರಿ ತೆರವು ಮಾಡಿಸಿದ್ದೇವೆ. ಕೆಲವೇ ದಿನಗಳಲ್ಲಿ ಅಮಾನಿಬೈರಸಾಗರ ಕೆರೆ ಒತ್ತುವರಿ ತೆರವು ಮಾಡಿಸಿ ಸಣ್ಣ ನೀರಾವರಿ ಇಲಾಖೆಗೆ ಒಪ್ಪಿಸುತ್ತೇವೆ.
-ಡಿ.ಹನುಮಂತರಾಯಪ್ಪ, ತಹಶೀಲ್ದಾರ್‌, ಗುಡಿಬಂಡೆ ತಾಲೂಕು

Advertisement

Udayavani is now on Telegram. Click here to join our channel and stay updated with the latest news.

Next