Advertisement

ಯುವಕರ ನಿರ್ಲಕ್ಷ್ಯಕ್ಕೊಳಗಾಗಿರುವ ಗರಡಿಮನೆ

09:29 PM Aug 06, 2019 | Lakshmi GovindaRaj |

ದೇವನಹಳ್ಳಿ: ಒಂದು ಕಾಲದಲ್ಲಿ ಯುವಕರ ನೆಚ್ಚಿನ ಅಭ್ಯಾಸ ತಾಣಗಳಾಗಿದ್ದ ಗರಡಿ ಮನೆಗಳು ಬದಲಾದ ಜೀವನ ಶೈಲಿ ಹಾಗೂ ಅಧುನಿಕತೆಯ ಅಬ್ಬರಕ್ಕೆ ಸಿಲುಕಿ ಯುವಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಶಾಸಕ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಚನ್ನರಾಯಪಟ್ಟಣ ಬೂದಿಗೆರೆ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆಯಡಿ 10 ಲಕ್ಷ ವೆಚ್ಚದಲ್ಲಿ ಗರಡಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಅವಸಾನದಂಚಿನಲ್ಲಿ ಗರಡಿಮನೆಗಳು: ಅಧುನಿಕತೆ ಅಬ್ಬರದಲ್ಲಿ ವ್ಯಾಯಾಮ ಶಾಲೆ, ಗರಡಿ ಮನೆಗಳು ಅವಸಾನದ ಅಂಚಿಗೆ ತಲುಪಿವೆ. ಅವುಗಳನ್ನು ಮರು ಸ್ಥಾಪಿಸಿ ಯುವ ಜನರನ್ನು ಪ್ರೇರಣೆಗೊಳಿಸಬೇಕಾಗಿದೆ. ಮೊದಲೆಲ್ಲ ಕುಸ್ತಿ ಮಾಡುವುದೆಂದರೆ ಪ್ರತಿಷ್ಠಯ ವಿಷಯ. ಗರಡಿ ಮನೆಗಳು ದೇಹದಂಡನೆಗೆ ಯೋಗ್ಯ ಸ್ಥಳಗಳಾಗಿದ್ದವು. ಇದರಿಂದಾಗಿ ಆರೋಗ್ಯ ಉತ್ತಮವಾಗಿರುತ್ತಿತ್ತು. ವಿಪರ್ಯಾಸವೆಂದರೆ ಇಂದಿನ ಮಕ್ಕಳಿಗೆ ಗರಡಿ ಮನೆಗಳ ಮಹತ್ವ ತಿಳಿದಿಲ್ಲ. ಇಂದಿನಿವರು ದುಶ್ಚಟಗಳಿಗೆ ಬಲಿಯಾಗಿ, ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲರಾಗುತ್ತಿದ್ದಾರೆ. ಮತ್ತೆ ಅವರನ್ನು ಗಡಿಮನೆಗಳತ್ತ ಸೆಳೆಯಬೇಕಾಗಿದೆ ಎಂದು ಹೇಳಿದರು.

ಮಹತ್ವ ಕಳೆದುಕೊಂಡಿಲ್ಲ ಗರಡಿ ಮನೆ: ಜಿಪಂ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಗ್ರಾಮೀಣ ಭಾಗದ ಜಿಮ್‌ ಆಗಿರುವ ಗರಡಿಯ ಮಹತ್ವ ಕಳೆದುಕೊಂಡಿಲ್ಲ. ಇಲ್ಲಿ ಸಂಸ್ಕಾರ ಸಿಗುತ್ತದೆ. ಆರು ವರ್ಷದ ಮಕ್ಕಳಿಂದ 60 ವರ್ಷದ ವಯೋಮಾನದ ಪೈಲ್ವಾನರು ನಮ್ಮಲ್ಲಿ ಸಾಧನೆ ಮಾಡಬಹುದಾಗಿದೆ. ದಸರಾ ಬಂತೆಂದರೆ ಗರಡಿ ಮನೆಗಳು ಚಟುವಟಿಕೆಗಳಿಂದ ಕೂಡಿರುತ್ತಿದ್ದವು.

ಗರಡಿ ಪೈಲ್ವಾನರೇ ಹಿಂದೆ ಹುಲಿವೇಷ, ಜಂಗಿವೇಷ, ಶಿವಾಜಿ ವೇಷದೊಂದಿಗೆ ಕೋಲುವರಸೆ, ಬೆಂಕಿ ಪಂಜು ವರಸೆ ಸೇರಿದಂತೆ ಹಲವು ಶೌರ್ಯಕಲೆಗಳನ್ನು ಪ್ರದರ್ಶನ ಮಾಡುತ್ತಿದ್ದರು. ಹಳ್ಳಿಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಪೈಲ್ವಾನರ ಕಸರತ್ತುಗಳು ಸಾಮಾನ್ಯವಾಗಿ ಪ್ರದರ್ಶನಗೊಳ್ಳುತ್ತಿದ್ದವು. ಈಗಿನಂತೆ ಆರ್ಕೆಸ್ಟ್ರಾಗಳು, ನೃತ್ಯಗಳು ಇರಲಿಲ್ಲ. ಆಗ ಯುವಜನರೂ ಸೇರಿದಂತೆ ಹಿರಿಯರು ಹೆಚ್ಚು ಭಾಗವಹಿಸುತ್ತಿದ್ದರು. ಕಾಲುಗಳಿಗೆ ಕಬ್ಬಿಣದ ಸರಪಣಿ, ಗುಂಡು ಕಟ್ಟಿಕೊಂಡು ಹುಲಿವೇಷ ಹಾಕಿ ಕುಣಿಯುವುದು, ಕುಣಿಸುವುದು, ಬೆಂಕಿ ಹಚ್ಚಿಕೊಂಡು ತಿರುವುದನ್ನು ಗರಡಿಯಲ್ಲಿ ಕಲಿಸುತ್ತಿದ್ದರು ಎಂದರು.

ತಾಪಂ ಅಧ್ಯಕ್ಷೆ ಚೈತ್ರಾ ವೀರೇಗೌಡ ಮಾತನಾಡಿ, ಇಂದಿನ ಯುವಜನರು ದೇಹ ಸೌಂದರ್ಯ ಹೆಚ್ಚಿಸಿಕೊಳ್ಳುವುದರಲ್ಲಿ ಆಸಕ್ತರಾಗಿದ್ದಾರೆ. ಈಗ ಜಿಮ್‌, ಜುಂಬಾ, ಎರೊಬಿಕ್ಸ್‌ ಪದ್ಧತಿಯ ವ್ಯಾಯಾಮ ಶಾಲೆಗಳ ಪ್ರಭಾವ ದೇಶಿ ಗರಡಿಗಳು ಮಯಾವಾಗುವಂತೆ ಮಾಡುತ್ತಿವೆ. ಆದರೂ ಗ್ರಾಮಾಂತರ ಪ್ರದೇಶದಲ್ಲಿ ಗರಡಿ ಮನೆಗಳನ್ನು ನಿರ್ಮಾಣ ಮಾಡಿ ಯುವಜನರನ್ನು ಉತ್ತೇಜನ ಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

Advertisement

ಗ್ರಾಪಂ ಅಧ್ಯಕ್ಷ ಕೆ. ಶ್ರೀನಿವಾಸಗೌಡ, ತಾಪಂ ಸದಸ್ಯ ಭಾರತಿ ಲಕ್ಷ್ಮಣಗೌಡ, ಮುನೇಗೌಡ, ಪಿಕಾರ್ಡ್‌ ಬ್ಯಾಂಕ್‌ ಅದ್ಯಕ್ಷ ಮುನಿರಾಜು, ಮುಖಂಡರಾದ ಜಯರಾಮೇಗೌಡ, ಲಕ್ಷ್ಮಣಗೌಡ, ವೀರೇಗೌಡ, ಕವಿತಾ ಆನಂದ್‌, ಗುತ್ತಿಗೆದಾರ ನವೀನ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next