ಬೆಂಗಳೂರು: ವೈದ್ಯಕೀಯ ಸೀಟುಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ-2022 (ನೀಟ್) ರವಿವಾರ ರಾಜ್ಯಾದ್ಯಂತ ಸುಸೂತ್ರವಾಗಿ ನಡೆದಿದೆ.
ರಾಜ್ಯದಲ್ಲಿ 1.19 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಪರೀಕ್ಷೆಯು ಮಧ್ಯಾಹ್ನ 2ರಿಂದ ಸಂಜೆ 5.20 ಗಂಟೆಯವರೆಗೆ ನಡೆದಿದೆ.
ವಿದ್ಯಾರ್ಥಿಗಳು ಪಾಲಿಸಬೇಕಾದ ಸಾಮಾನ್ಯ ಸೂಚನೆಗಳನ್ನು ಮೊದಲೇ ನೀಡಿದ್ದರಿಂದ ಎಲ್ಲಿಯೂ ಸಮಸ್ಯೆ ಎದುರಾಗಿಲ್ಲವೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಬ್ಬರು ತಿಳಿಸಿದರು.
ದೂರದ ಊರುಗಳಿಂದ ಬಂದ ಅಭ್ಯರ್ಥಿಗಳು ಒಂದು ದಿನ ಮೊದಲೇ ಪರೀಕ್ಷಾ ಕೇಂದ್ರದ ಸುತ್ತಮುತ್ತಲ್ಲಿರುವ ಲಾಡ್ಜ್ ಗಳಲ್ಲಿ ಉಳಿದುಕೊಂಡು ಭಾನುವಾರ ಪರೀಕ್ಷೆ ಬರೆದಿದ್ದಾರೆ. ಬಹುತೇಕ ಅಭ್ಯರ್ಥಿಗಳು ಬೆಳಗ್ಗೆಯೇ ಪರೀಕ್ಷಾ ಕೇಂದ್ರದ ಮುಂದೆ ಕುಳಿತು ವ್ಯಾಸಂಗದಲ್ಲಿ ತೊಡಗಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಅಭ್ಯರ್ಥಿಗಳು ಓಲೆ ಸೇರಿದಂತೆ ಯಾವುದೇ ರೀತಿಯ ಆಭರಣಗಳನ್ನು ಧರಿಸುವಂತಿಲ್ಲವೆಂದು ಸೂಚನೆ ನೀಡಿದ್ದರಿಂದ ಎಲ್ಲರೂ ಸೂಚನೆಗಳನ್ನು ಪಾಲಿಸಿದ್ದರು. ಮರೆತು ಕೇಂದ್ರಕ್ಕೆ ಆಗಮಿಸಿದ್ದ ಅಭ್ಯರ್ಥಿಗಳು ಸ್ಥಳದಲ್ಲೇ ಓಲೆಗಳನ್ನು ಬಿಚ್ಚಿ ಪಾಲಕರಿಗೆ ನೀಡಿ ಆನಂತರ ಕೇಂದ್ರ ಪ್ರವೇಶ ಪಡೆದುಕೊಂಡರು. ಶೂ ಧರಿಸಲು ನಿಷೇಧ ಹೇರಿದ್ದರಿಂದ ಅಭ್ಯರ್ಥಿಗಳು ಚಪ್ಪಲ್ಲಿಯಲ್ಲೇ ಬಂದಿದ್ದರು.
ಪ್ರಶ್ನೆ ಪತ್ರಿಕೆ ಸುಲಭವಾಗಿತ್ತು. ಯಾವುದೇ ರೀತಿಯಲ್ಲಿ ಪ್ರಶ್ನೆಗಳು ಗೊಂದಲ ಹಾಗೂ ಪಠ್ಯೇತರ ಭಾಗದಿಂದ ಕೇಳಿರಲಿಲ್ಲ. ಎಲ್ಲಾ ಪ್ರಶ್ನೆಗಳನ್ನು ಎನ್‌ಸಿಇಆರ್‌ಟಿ ಪಠ್ಯದಲ್ಲಿಯೇ ಕೇಳಿದ್ದರು. ಉತ್ತಮ ಅಂಕಗಳನ್ನು ಗಳಿಸಬಹುದಾಗಿದೆ ಎಂದು ಅಭ್ಯರ್ಥಿಗಳು ಅನಿಸಿಕೆ ಹಂಚಿಕೊಂಡಿದ್ದಾರೆ.