ಆಳಂದ: ಬೃಹತ್ ಉದ್ಯಮದ ಜತೆಗೆ ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ಹೆಚ್ಚು ಉದ್ಯೋಗ ಒದಗಿಸುವುದು ಇಂದಿನ ಅಗತ್ಯವಾಗಿದೆ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು. ಪಟ್ಟಣದ ಗುರುಭವನದಲ್ಲಿ ಸೋಮವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೈಗಾರಿಕಾ ವಿಭಾಗ ಮತ್ತು ಜಿಪಂ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕೈಗಾರಿಕಾ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಕೈಗಾರಿಕೆ ಜತೆಗೆ ನಮ್ಮ ಗ್ರಾಮೀಣ ಭಾಗದ ಮೂಲ ಗುಡಿ ಕೈಗಾರಿಕೆಗಳಿಗೆ ಮತ್ತೆ ಜೀವ ತುಂಬುವು ಮೂಲಕ ಉದ್ಯೋಗ ಸೃಷ್ಟಿಸವ ಕೆಲಸವಾಗಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲು ಕೈಗಾರಿಕೆ ಇಲಾಖೆ ನಿರಂತರವಾಗಿ ಸಲಹೆ ಸೂಚನೆ ಜಾಗƒತಿ ಮೂಡಿಸುವ ಕೆಲಸ ಮಾಡಬೇಕು.
ಸಮಾಜದಲ್ಲಿ ವಿವಿಧ ರೀತಿಯ ವೃತ್ತಿ ನಿರತರಿಗೆ ಮತ್ತು ಕುಶಲ ಕರ್ಮಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯ ಮತ್ತು ಅನುದಾನವನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸಲು ಅಧಿಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ ಮಾತನಾಡಿ, ಕೈಗಾರಿಕೆ ಇಲಾಖೆ ಮೂಲಕ ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ದೊಡ್ಡಬಸವರಾಜ ಮಾತನಾಡಿ, ಉದ್ಯೋಗ ಕೈಗೊಳ್ಳಲು ಮತ್ತು ಸಣ್ಣ, ಸಣ್ಣ ಕಾರ್ಖಾನೆ ಸ್ಥಾಪಿಸಲು ಸರ್ಕಾರದ ಸಹಾಯಧನ ಮತ್ತು ಸೌಲಭ್ಯಗಳಿವೆ. ಅವುಗಳನ್ನು ಪಡೆಯಲು ಮುಂದಾಗಬೇಕು ಎಂದು ಹೇಳಿದರು.ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ಜಿಪಂ ಅಧ್ಯಕ್ಷೆ ಸುವರ್ಣ ಎಚ್. ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ,
ತಾಪಂಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ, ಉಪಾಧ್ಯಕ್ಷ ಗುರುನಾಥ ಡಿ. ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಸರಸಂಬಿ, ತಾಪಂ ಇಒ ಡಾ| ಸಂಜಯ ರೆಡ್ಡಿ, ಕೆಎಸ್ ಎಫ್‌ಸಿ ಡಾ| ಚಂದ್ರಕಾಂತ, ಮುಕುಂದ ರಡ್ಡಿ ಪಾಟೀಲ ಇದ್ದರು. ಕೈಗಾರಿಕೆ ತಾಲೂಕು ಅಧ್ಯಕ್ಷ ಜಾಫರ್ ಹುಸೇನ್ ಸ್ವಾಗತಿಸಿದರು. ಪ್ರಹ್ಲಾದ ಶಿಂಧೆ ಕಾರ್ಯಕ್ರಮ ನಿರೂಪಿಸಿದರು.