ಕಾರ್ಕಳ: ಅಂಕ ಗಳಿಕೆಯ ಪೈಪೋಟಿ ಯಲ್ಲಿ ಮಕ್ಕಳ ಸಹಜ ಪ್ರತಿಭೆ ಮಂಕಾಗುತ್ತಿದೆ. ಶಾಲೆಯಲ್ಲಿ ಮತ್ತು ಮನೆಯಲ್ಲಿ ಪರೀಕ್ಷೆಯ ಫಲಿತಾಂಶಕ್ಕೆ ಹೆಚ್ಚು ಮಹತ್ವ ಸಿಗುತ್ತಿರುವುದರಿಂದ ವಿದ್ಯಾರ್ಥಿಗಳ ಉಳಿದ ಆಸಕ್ತಿಗಳಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಶಾಲೆಗಳಲ್ಲಿ ನಡೆಯುವ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವಿದೆ. ಪ್ರತಿ ಮಗುವಿನಲ್ಲಿ ಸಾಂಸ್ಕೃತಿಕ, ಕ್ರೀಡೆ ಮತ್ತು ಸಾಹಿತ್ಯದ ಆಸಕ್ತಿಯನ್ನು ಬೆಳೆಸಲು ಇಂತಹ ಚಟುವಟಿಕೆಗಳು ಪೂರಕವಾಗಬೇಕೆಂದು ಶಾಸಕ ಹಾಗೂ ವಿಧಾನಸಭೆಯ ವಿಪಕ್ಷದ ಮುಖ್ಯ ಸಚೇತಕರಾಗಿರುವ ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಕಲ್ಯಾದ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ವಿದ್ಯಾರ್ಥಿ ಕನಿಷ್ಠ ಒಂದು ಕಲೆ ಅಥವಾ ಕ್ರೀಡೆ ಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡುವುದು ಶಿಕ್ಷಕರ ಮತ್ತು ಪೋಷಕರ ಕರ್ತವ್ಯ. ಇಂತಹ ಆಸಕ್ತಿಗಳಿಗೆ ನಿರಂತರವಾಗಿ ಪ್ರೋತ್ಸಾಹ ಸಿಕ್ಕಿದರೆ ಮುಂದೆ ಅವರು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ 130 ಕೋಟಿ ತಲುಪುತ್ತಿರುವ ದೇಶದ ಜನಸಂಖ್ಯೆ ಈಗ ಹೊರೆಯಲ್ಲ ಬದಲಾಗಿ ಸಂಪನ್ಮೂಲ ಎಂದು ಅರಿಯಲ್ಪಡುತ್ತದೆ. ಭಾರತದ ಮಾನವ ಸಂಪನ್ಮೂಲ ಇಂದು ಜಗತ್ತಿನೆಲ್ಲೆಡೆ ಮಾನ್ಯತೆ ಪಡೆಯಲು ಬುನಾದಿಯಾಗಿರುವುದು ಶಿಕ್ಷಣ ವ್ಯವಸ್ಥೆ. ಪ್ರಾಥ ಮಿಕ ಅವಧಿಯಿಂದಲೇ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಸಿಕ್ಕಿದರೆ ಮಕ್ಕಳು ಮುಂದೆ ದೇಶದ ಆಸ್ತಿಯಾಗುತ್ತಾರೆ ಎಂದರು. ದಾನಿಗಳಾದ ಎಂ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಜೆರಾಲ್ಡ್ ಡಿ’ಸಿಲ್ವ ಅವರನ್ನು ಸಮ್ಮಾನಿಸಲಾಯಿತು.
ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ವಿದ್ಯಾ ಎಂ. ಸಾಲ್ಯಾನ್, ಕಲ್ಯಾ ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ ಉಪಾಧ್ಯಾಯ, ಲಕ್ಷ್ಮೀಕಾಂತ್ ಭಟ್, ಸುಜಾತಾ, ಜ್ಯೋತಿ ನಾಯ್ಕ, ಶಿಕ್ಷಕ ಸಂಘದ ಉಪಾಧ್ಯಕ್ಷ ಸತೀಶ್ ಶೆಟ್ಟಿ ಅಂಬರಾಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿರಾಜ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವೀಣಾ ಕಾಮತ್ ಸ್ವಾಗತಿಸಿದರು ಹಾಗೂ ಶಿಕ್ಷಕಿ ಶಾರದಾ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ “ನೃತ್ಯ ಸಿಂಚನ’ ಮತ್ತು ಶ್ರೀ ಕೃಷ್ಣ ತುಲಾಭಾರ ಪೌರಾಣಿಕ ನಾಟಕ ಪ್ರದರ್ಶಿಸಿದರು.