Advertisement

ಬಾಲ್ಯವಿವಾಹ ತಡೆಗೆ ಸಹಕಾರ ಅಗತ್ಯ; ಎಂ.ಗಾಯಿತ್ರಿ

05:54 PM Jun 16, 2022 | Team Udayavani |

ಚಾಮರಾಜನಗರ: ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಬಾಲ್ಯವಿವಾಹ, ಮಹಿಳಾ ಸಾಗಾಣಿಕೆ ತಡೆಗಟ್ಟುವ ಬಗ್ಗೆ ಮಹಿಳೆಯರು ಮತ್ತು ಮಕ್ಕಳಿಗೆ ಅರಿವು ಮೂಡಿಸಿ ಆತ್ಮವಿಶ್ವಾಸ ತುಂಬುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಹೇಳಿದರು.

Advertisement

ನಗರದ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬಾಲ್ಯ ವಿವಾಹ, ಮಹಿಳಾ ಸಾಗಾಣಿಕೆ ಹಾಗೂ ಪೋಕ್ಸೊ ಕಾಯ್ದೆ ಕುರಿತು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಳ್ಳಿ: ಬಾಲ್ಯವಿವಾಹ, ಮಹಿಳೆಯರ ಸಾಗಾಣಿಕೆ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಬೇಕು. ವಿದ್ಯಾರ್ಥಿನಿಲಯಗಳಲ್ಲೂ ನಿಲಯ ಪಾಲಕರು ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳಬೇಕು. ಈ ಸಂಬಂಧ ವಾರಾಂತ್ಯದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಶಿಕ್ಷಣ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬಾಲ್ಯವಿವಾಹ, ಮಹಿಳಾ ಸಾಗಾಣಿಕೆ, ಪೋಕ್ಸೊ ಪ್ರಕರಣಗಳನ್ನು ತಡೆಗಟ್ಟಲು ತಂದೆ-ತಾಯಿ, ಪೋಷಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯ ಎಂದರು.

ನಿಗದಿತ ವಯಸ್ಸಿಗೆ ಮೊದಲೇ ಹೆಣ್ಣು ಮಕ್ಕಳನ್ನು ಮದುವೆ ಮಾಡಿದರೆ ಅದು ಬಾಲ್ಯ ವಿವಾಹವಾಗಲಿದೆ. ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳು ದೈಹಿಕ, ಮಾನಸಿಕ, ಬೌದ್ಧಿಕವಾಗಿ ಬೆಳೆವಣಿಗೆಯಾಗದೆ ತೊಂದರೆಗೆ ಒಳಗಾಗುತ್ತಾರೆ. ಬಾಲ್ಯವಿವಾಹ ನಡೆದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪೋಷಕರಿಗೂ ಅರಿವು ಮೂಡಿಸಬೇಕು. ಬಾಲ್ಯವಿವಾಹದಿಂದ ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ತಡೆಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದರು.

Advertisement

ಕಾಯ್ದೆಯ ಅರಿವು ಸಾರ್ವಜನಿಕರಿಗೆ ಅಗತ್ಯ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ ಮಾತನಾಡಿ, ಬಾಲ್ಯವಿವಾಹ ಸೇರಿದಂತೆ ಪ್ರತಿಯೊಂದು ಕಾಯ್ದೆಯ ಅರಿವು ಸಾರ್ವಜನಿಕರಿಗೆ ಅಗತ್ಯ. ಹೆಣ್ಣು ಮಕ್ಕಳಿಗೆ ಮದುವೆಯ ವಯಸ್ಸು 18, ಗಂಡು ಮಕ್ಕಳ ವಯಸ್ಸು 21 ವರ್ಷವಾಗಿರಬೇಕೆಂಬ ಕಾನೂನು ಜಾರಿಯಾಗಿದ್ದರೂ ಸಹ ಜಿಲ್ಲೆಯಲ್ಲಿ ಬಾಲ್ಯವಿವಾಹ ಹೆಚ್ಚಾಗುತ್ತಿದೆ. ಹೆಣ್ಣು ಮಕ್ಕಳ ವ್ಯಕ್ತತ್ವ ವಿಕಸನ ಹಾಗೂ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸಹ ನಿರಂತರವಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಬಾಲ್ಯ ವಿವಾಹದಲ್ಲಿ ಯಾರೇ ಭಾಗವಹಿಸಿದರೂ ಸಹ ಅವರೆಲ್ಲರೂ ಉತ್ತೇಜಕರು ಎಂದು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ನ್ಯಾಯಾಲಯ ಸರ್ಕಾರಿ ಅಭಿಯೋಜಕಿ ಟಿ.ಎಚ್‌. ಲೋಲಾಕ್ಷಿ ಮಾತನಾಡಿ, ಲೈಂಗಿಕ ದೌರ್ಜನ್ಯಗಳು ಕೇವಲ ಹೆಣ್ಣು ಮಕ್ಕಳಿಗಲ್ಲದೇ ಇತ್ತೀಚಿನ ದಿನಗಳಲ್ಲಿ ಬಾಲಕರ ಮೇಲೂ ಸಹ ಅವ್ಯಾಹತವಾಗಿ ನಡೆಯುತ್ತಿದೆ. ಪ್ರೌಢಶಾಲೆ ಹಾಗೂ ಪಿಯು ಹಂತದಲ್ಲಿ ಮಕ್ಕಳ ಮನಸ್ಸು ಪ್ರಚೋದನೆಗೊಳಪಡಲಿದ್ದು, ಈ ವಯಸ್ಸಿನಲ್ಲಿ ಮಕ್ಕಳ ಸೂಕ್ಷ್ಮ ಮನಸ್ಸನ್ನು ತಂದೆ-ತಾಯಿ, ಪೋಷಕರು ಹಾಗೂ ಶಿಕ್ಷಕರು ಅರಿತು ಉತ್ತಮ ಮಾರ್ಗದರ್ಶನ ಮಾಡಬೇಕು ಎಂದರು.

ಮನೆ ಮನೆಗೆ ಭೇಟಿ ನೀಡಿ ಮಾಹಿತಿ: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸರಸ್ವತಿ ಮಾತನಾಡಿ, ಬಾಲ್ಯವಿವಾಹ ಕಾಯ್ದೆ ಜಾರಿಯಾಗಿದ್ದರೂ ಸಹ ಕಾಯ್ದೆಯ ಅರಿವು ಸಾಕಷ್ಟು ಜನರಿಗಿಲ್ಲ. ಬಾಲ್ಯವಿವಾಹದಲ್ಲಿ ವಿಶ್ವದಲ್ಲಿ ಭಾರತ 2ನೇ ಸ್ಥಾನ ಹಾಗೂ ರಾಜ್ಯದಲ್ಲಿ ಜಿಲ್ಲೆ 4ನೇ ಸ್ಥಾನದಲ್ಲಿರುವುದು ವಿಷಾದದ ಸಂಗತಿಯಾಗಿದೆ. ಬಾಲ್ಯವಿವಾಹ ಹಾಗೂ ಪೋಕ್ಸೊ ಪ್ರಕರಣವನ್ನು ತಡೆಗಟ್ಟಲು ಶಿಕ್ಷಣ ಇಲಾಖೆಯ ಬಿ.ಆರ್‌.ಸಿ, ಬಿ.ಆರ್‌.ಪಿ ಹಾಗೂ ಸಿ.ಆರ್‌.ಪಿಗಳು ಕ್ರಿಯಾಶೀಲರಾಗಬೇಕು.

ಮಕ್ಕಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಶಿಕ್ಷಕರು ಮಕ್ಕಳ ಗೈರು ಹಾಜರಾತಿಯನ್ನು ಅರಿತು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದು ಪೋಷಕರಲ್ಲಿ ಅರಿವು ಮೂಡಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಗೀತಾಲಕ್ಷ್ಮಿ, ಜಿಲ್ಲಾ ನಿರೂಪಣಾಧಿಕಾರಿ ಎಚ್‌. ಆರ್‌. ಸುರೇಶ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋವಿಂದರಾಜು, ನ್ಯಾಯಾಧೀಶರಾದ ನಾಗಮಣಿ ಕಾರ್ಯಾಗಾರದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next