ಬೀದರ: ಕಾವ್ಯ ಯಾವಾಗಲೂ ಪ್ರಚಲಿತ ವಿದ್ಯಮಾನ ಹಾಗೂ ನೈಜತೆಯ ಸುತ್ತ ಸುತ್ತುತ್ತಿರುವಂತಿರಬೇಕು. ಕವನಗಳು ಸಮಾಜವನ್ನು ವಿಘಟನೆ ಮಾಡದೆ ಸಂಘಟನೆ ಮಾಡುವಂತಿರಬೇಕು. ಹೃದಯಗಳನ್ನು ಬೆಸೆಯುವ, ಕೋಮು ಸೌಹಾರ್ದ ಹಾಗೂ ಮಾನವೀಯ ನೆಲೆಗಟ್ಟನ್ನು ಒಳಗೊಂಡಿರುವ ಗಟ್ಟಿ ಸಾಹಿತ್ಯ ರಚನೆ ಮಾಡಬೇಕೆಂದು ಸಾಹಿತಿ ಮಹಾರುದ್ರ ಡಾಕುಳಗಿ ಸಲಹೆ ಮಾಡಿದರು.
ಮಂದಾರ ಕಲಾವಿದರ ವೇದಿಕೆಯಿಂದ ನಡೆದ ಶಿವರಾಜ ಕಾಳಶೆಟ್ಟಿ ವಿರಚಿತ ಅನುಭವ ವಾಣಿ ಕೃತಿ ಬಿಡುಗಡೆ ಹಾಗೂ ಯುವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಭಾಗದ ಬರಹಗಾರರ ಕಾದಂಬರಿಗಳು ಹಾಗೂ ಕವಿತೆಗಳು ಪಠ್ಯ-ಪುಸ್ತಕದಲ್ಲಿ ಹೆಚ್ಚು ಕಾಣಸಿಗುವುದಿಲ್ಲ. ಮುಂದಿನ ತಲೆಮಾರಿನ ಮಕ್ಕಳು ನೆನಪಿಡುವಂತಹ ಸಾಹಿತ್ಯ ರಚನೆಯಾಗಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಭಾಷೆಯನ್ನು ಗೌರಿವಿಸಿದರೆ ಹೆತ್ತ ತಾಯಿಯನ್ನೇ ಗೌರವಿಸಿದಂತೆ. ಇಂದು ಕನ್ನಡ ಮಾತನಾಡುವವರ ಹಾಗೂ ಕನ್ನಡ ಅಕ್ಷರದ ಅಧ್ಯಯನಕಾರರ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಗಡಿಜಿಲ್ಲೆ ಬೀದರನಲ್ಲಿ ಮೊದಲು ನಾವು ಕನ್ನಡ ಭಾಷೆ ಬಳಸುವುದನ್ನು ಕಲಿತು, ಮುಂದೆ ಯುವ ಪೀಳಿಗೆಗೆ ಕನ್ನಡ ಉಳಿಸಿ ಬೆಳೆಸಲು ತಿಳಿಸಬೇಕೆಂದು ಕರೆ ನೀಡಿದರು.
ಪ್ರಾಧ್ಯಾಪಕ ಡಾ| ಶಿವಕುಮಾರ ಉಪ್ಪೆ ಮಾತನಾಡಿ, ಅನುಭವ ವಾಣಿ ಕೃತಿಯು ಮೌಲ್ಯಿಕ ವಿಚಾರಗಳನ್ನೊಳಗೊಂಡಿದೆ. ಅನ್ನದಿಂದ ಆರಂಭವಾದ ಈ ಕೃತಿ ಜ್ಞಾನದೊಂದಿಗೆ ಸಮಾಪ್ತಿ ಯಾಗಿದೆ. ಓದುಗರನ್ನು ಸದಾ ಓದಿಸಿಕೊಂಡು ಹೋಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದು ಖುಷಿಯ ಸಂಗತಿ ಎಂದರು.
ಸಾಹಿತಿ ಡಾ| ಎಂ.ಜಿ ದೇಶಪಾಂಡೆ, ಕವಿ ನಾಗೇಶ ಸ್ವಾಮಿ ಮಾತನಾಡಿದರು. ಮಕ್ಕಳ ತಜ್ಞ ಡಾ| ಸಿ.ಆನಂದರಾವ, ಪ್ರಾಚಾರ್ಯ ಅಶೋಕ ಬೂದಿಹಾಳ, ಸಾಹಿತಿ ಶಿವರಾಜ ಕಾಳಶೆಟ್ಟಿ, ಶಂಭುಲಿಂಗ ವಾಲದೊಡ್ಡಿ ವೇದಿಕೆಯಲ್ಲಿದ್ದರು.