Advertisement

ಬರ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮ

07:22 AM Jan 24, 2019 | Team Udayavani |

ಮೈಸೂರು: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿವ ನೀರಿನ ಅಭಾವ ತಲೆದೋರದಂತೆ ವ್ಯವಸ್ಥೆ ಮಾಡುವುದು ಹಾಗೂ ಜನರು ವಲಸೆ ಹೋಗದಂತೆ ತಡೆಯಲು ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ಮೈಸೂರು ಜಿಪಂ ಸಭಾಂಗಣದಲ್ಲಿ ಆಯೋಜಿಸಿರುವ ರಾಜ್ಯದ ಎಲ್ಲ ಜಿಪಂಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು  ಹಾಗೂ ಮುಖ್ಯ ಇಂಜಿನಿಯರ್‌ಗಳು, ಕಾರ್ಯಪಾಲಕ ಇಂಜಿನಿಯರ್‌ಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದ 162 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿರುವುದರಿಂದ ಬರ ಪರಿಹಾರದ ದಿಕ್ಕಿನಲ್ಲಿ ಜಿಪಂಗಳ ಪಾತ್ರ ಬಹಳ ಮುಖ್ಯವಾದುದ್ದು, ಅದಕ್ಕಾಗಿ ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಇಲಾಖೆಯ ಕಾರ್ಯಕ್ರಮಗಳ ಆದ್ಯತೆ ಏನಿರಬೇಕು ಎಂದು ಚಿಂತನ-ಮಂಥನ ನಡೆಸುವುದಾಗಿ ಹೇಳಿದರು.

ನೀರಿಗಾರಿ ಅನುದಾನ: ಶಾಶ್ವತ ಕುಡಿಯುವ ನೀರು ಯೋಜನೆಗಳಿಗಾಗಿ ಜಿಪಂಗಳಿಗೆ ಈವರ್ಷ 2400 ಕೋಟಿ ಅನುದಾನ ನೀಡಲಾಗಿದೆ. ಬರ ಪೀಡಿತ ತಾಲೂಕು ಹಾಗೂ ಬರ ಘೋಷಣೆಯಾಗದ ತಾಲೂಕುಗಳಿಗೆ ಸ್ಥಳೀಯ ಶಾಸಕರ ಅಧ್ಯಕ್ಷತೆಯ ಟಾಸ್ಕ್ಫೋರ್ಸ್‌ ಮೂಲಕ ಪರಿಹಾರ ಕಾಮಗಾರಿ ಕೈಗೊಳ್ಳಲು 134 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಈ ವರ್ಷ 29 ಸಾವಿರ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 27 ಸಾವಿರ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಫೆಬ್ರವರಿ ಅಥವಾ ಮಾರ್ಚ್‌ ಅಂತ್ಯಕ್ಕೆ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಈ ಕಾಮಗಾರಿಗಳಿಗಾಗಿ ಈವರೆಗೆ 1600 ಕೋಟಿ ವೆಚ್ಚ ಮಾಡಲಾಗಿದೆ. ಪ್ರಗತಿಯಲ್ಲಿರುವ ಕಾಮಗಾರಿಗಳಿಗಾಗಿ ಒಂದು ಸಾವಿರ ಕೋಟಿಯನ್ನು ಮಾರ್ಚ್‌ ವೇಳೆಗೆ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ಮಾನವ ದಿನ ಸೃಜನೆ: ಉದ್ಯೋಗ ಖಾತರಿ ಯೋಜನೆಯಡಿ ಈ ವರ್ಷ 10.50 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ನಿರೀಕ್ಷೆ ಇದೆ. ವರ್ಷದ ಆರಂಭದಲ್ಲಿ 8.50 ಕೋಟಿ ಮಾನವ ದಿನಗಳ ಸೃಜನೆ ಗುರಿ ಹೊಂದಲಾಗಿತ್ತು. ಆದರೆ, ರಾಜ್ಯದ 162 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿದ್ದರಿಂದ, ಜನರಿಗೆ ಉದ್ಯೋಗ ನೀಡಲು ಈಗಾಗಲೇ 7.70 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಿದ್ದು, ಶೇ. 90.66ರಷ್ಟು ಕೆಲಸ ಮಾಡಲಾಗಿದೆ.

3780 ಕೋಟಿ ಗೆ ಎದುರಾಗಿ 2920 ಕೋಟಿ ಮೊತ್ತದ ಕೆಲಸವನ್ನು ಈಗಾಗಲೇ ಮಾಡಲಾಗಿದೆ. ಕಳೆದ ಆರೇಳು ವರ್ಷಕ್ಕೆ ಹೋಲಿಸಿದರೆ 2010-11ರ ನಂತರ ಈ ವರ್ಷ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಕೆಲಸ ಮಾಡಿದ್ದೇವೆ. ಹೀಗಾಗಿ ವರ್ಷದ ಗುರಿ ಮೀರಿ 10.50 ಕೋಟಿ ಮಾನವ ದಿನಗಳ ಸೃಜನೆ ಮಾಡುವ ನಿರೀಕ್ಷೆ ಇದೆ ಎಂದರು.

ಉದ್ಯೋಗ ದೊರಕಿಸಿಕೊಡುವ ಜೊತೆಗೆ ಆಸ್ತಿ ಸೃಜನೆಗೂ ಒತ್ತು ನೀಡಿದ್ದು, ಶಾಲಾ ಕಾಂಪೌಂಡ್‌, ಶಾಲಾ ಶೌಚಾಲಯ, ಅಂಗನವಾಡಿ ಕಟ್ಟಡ, ಚೆಕ್‌ ಡ್ಯಾಂ ನಿರ್ಮಾಣ, ಹೂಳೆತ್ತುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ಒಟ್ಟಾರೆ ವರ್ಷದ ಗುರಿಗಿಂತ ಶೇ.25ರಷ್ಟು ಹೆಚ್ಚಿನ ಸಾಧನೆ ಮಾಡುವುದಾಗಿ ಹೇಳಿದರು.

ವರ್ಷಕ್ಕೆ 100 ದಿನ ಮಾತ್ರವಲ್ಲ, ವರ್ಷಪೂರ್ತಿ ನರೇಗಾದಡಿ ಕೆಲಸ ಕೊಡುವಂತೆ ಬೇಡಿಕೆ ಇದೆ. ರಾಜ್ಯದ ಎಲ್ಲ ಭಾಗಗಳನ್ನೂ ಗಮನದಲ್ಲಿಟ್ಟುಕೊಂಡು 250 ರೂ. ಕೂಲಿ ನೀಡಲಾಗುತ್ತಿದೆ. ಮುಂದಿನ ವರ್ಷ ಕೂಲಿಯ ದರವನ್ನು ಹೆಚ್ಚಳ ಮಾಡುವುದಾಗಿ ತಿಳಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಕಾರ್ಯದರ್ಶಿ ಅಯ್ಯಪ್ಪ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಉಪಸ್ಥಿತರಿದ್ದರು.

ಟ್ಯಾಂಕರ್‌ ಮೂಲಕ ನೀರು: ಪ್ರಸ್ತುತ ರಾಜ್ಯದ 646 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ತುರ್ತು ಪರಿಹಾರ ಕ್ರಮವಾಗಿ 284 ಕುಡಿಯುವ ನೀರು ಬಾಧಿತ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ 490 ಟ್ಯಾಂಕರ್‌ ಬಳಸಲಾಗುತ್ತಿದ್ದು, ನಿತ್ಯ 1386 ಟ್ರಿಪ್‌ ನೀರು ಸರಬರಾಜು ಮಾಡಲಾಗುತ್ತಿದೆ.  362 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗ‌ಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜಿಗೆ ಕ್ರಮವಹಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next