Advertisement

BY Election: ಜೆಡಿಎಸ್‌ ಸಭೆಯಲ್ಲೂ ಗುಟ್ಟಾಗಿಯೇ ಉಳಿದ ಎನ್‌ಡಿಎ ಅಭ್ಯರ್ಥಿ!

12:25 AM Oct 23, 2024 | Team Udayavani |

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರು ಎನ್ನುವುದು ಗುಟ್ಟಾಗಿಯೇ ಉಳಿದಿದ್ದು, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸಮ್ಮುಖದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲೂ ಈ ಗುಟ್ಟು ರಟ್ಟಾಗಲಿಲ್ಲ. ಮಳೆಯಿಂದಾಗಿ ಸಭೆ ಅರ್ಧಕ್ಕೆ ಮೊಟಕುಗೊಂಡಿದ್ದು ಎನ್‌ಡಿಎ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿಯಿತು.

Advertisement

ಈಗಾಗಲೇ ಶಿಗ್ಗಾವಿ, ಸಂಡೂರು ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ, ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಆಯ್ಕೆಯ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಇದರಿಂದ ಜೆಡಿಎಸ್‌ ಮೇಲೆ ಒತ್ತಡವೂ ಹೆಚ್ಚಿದ್ದು ದಿನೇದಿನೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗುತ್ತಲೇ ಇದೆ. ಅದರಲ್ಲೂ ಪ್ರಬಲ ಆಕಾಂಕ್ಷಿಯಾಗಿರುವ ಸಿ.ಪಿ. ಯೋಗೇಶ್ವರ್‌ ಕೂಡ ಹಕ್ಕು ಪ್ರತಿಪಾದಿಸುತ್ತಿದ್ದು ಒಂದು ಹೆಜ್ಜೆ ಮುಂದೆ ಹೋಗಿ ಮೇಲ್ಮನೆಯ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿರುವುದರಿಂದ ಜೆಡಿಎಸ್‌ ಮೇಲಿನ ಭಾರ ಹೆಚ್ಚಾದಂತಾಗಿದೆ.

ಮುಂದಿನ ದಾರಿ ಕಾಣದೆ ಸೋಮವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ನಿವಾಸದಲ್ಲಿ ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಸಭೆ ನಡೆಸಿದ್ದರು. ಈ ವೇಳೆ ಯೋಗೇಶ್ವರ್‌ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಈ ಸಭೆಯಲ್ಲಿ ನಿರ್ಧಾರವಾದಂತೆ ಮಂಗಳವಾರ ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಕಾರ್ಯಕರ್ತರ ಸಭೆಯನ್ನೂ ಕರೆಯಲಾಗಿತ್ತು.

ಚನ್ನಪಟ್ಟಣವೂ ಉಳಿಯಬೇಕು, ಮೈತ್ರಿಯೂ ಅಳಿಯಬಾರದು
ಬಹುತೇಕ ಮುಖಂಡರು, ಕಾರ್ಯಕರ್ತರು ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹಾಕಿದರೆ, ಇನ್ನು ಕೆಲವರು ಕುಮಾರಸ್ವಾಮಿ ಅವರ ವಿವೇಚನೆಗೇ ಬಿಡುವುದಾಗಿ ಹೇಳಿದರು. ಬಿಜೆಪಿ ವರಿಷ್ಠರು ಯೋಗೇಶ್ವರ್‌ ಅವರನ್ನು ಕಟ್ಟಿ ಹಾಕಬೇಕು. ಚನ್ನಪಟ್ಟಣ ಕ್ಷೇತ್ರವೂ ಉಳಿಯಬೇಕು, ಮೈತ್ರಿಯೂ ಅಳಿಯಬಾರದು. ಪಕ್ಷ ಏನೇ ನಿರ್ಧಾರ ಕೈಗೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ. ಕೆಲಸ ಮಾಡುತ್ತೇವೆ ಎಂದು ಪಕ್ಷದ ಮೇಲೆ ಭಾರ ಹಾಕಿದರು. ನಿಖೀಲ್‌ ಕುಮಾರಸ್ವಾಮಿ ಭಾಷಣ ಆರಂಭಿಸಿದ ಕೆಲವು ಹೊತ್ತಿನ ಅನಂತರ ನೀವು ಸ್ಪರ್ಧಿಸಬೇಕು, ನೀವು ಸ್ಪರ್ಧಿಸುವುದನ್ನು ಘೋಷಿಸಬೇಕು, ಕುಮಾರಣ್ಣ… ನಿಖೀಲಣ್ಣನನ್ನೇ ನಿಲ್ಲಿಸಿ ಎಂದು ವೇದಿಕೆ ಮುಂಭಾಗಕ್ಕೆ ಬಂದು ಪ್ರಹಸನ ನಡೆಸಿದರು. ನಿಖಿಲ್‌ ಗೆ ಮಾತನಾಡಲು ಬಿಡಿ ಎಂದ ಕುಮಾರಸ್ವಾಮಿ ಮಾತಿಗೆ ಕೆಲ ಕಾರ್ಯಕರ್ತರು ಸುಮ್ಮನಾದರು. ಮತ್ತೆ ಕೆಲವರು ಒತ್ತಡ ಹಾಕಿದ್ದರಿಂದ ನಿಖೀಲ್‌ ಭಾಷಣ ಅರ್ಧಕ್ಕೆ ನಿಲ್ಲಿಸಿ, ಕುಮಾರಸ್ವಾಮಿ ಅವರನ್ನು ಮಾತನಾಡಲು ಅನುವು ಮಾಡಿಕೊಟ್ಟರು.

ಕಾರ್ಯಕರ್ತರ ಭಾವನೆಯೇ ನನ್ನ ತೀರ್ಮಾನ
ಭಾಷಣದುದ್ದಕ್ಕೂ ಬಿಜೆಪಿ ರಾಷ್ಟ್ರೀಯ ನಾಯಕರ ನಡೆಯನ್ನು ಶ್ಲಾಘಿಸಿದ ಕುಮಾರಸ್ವಾಮಿ, ಈ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿಯ ಅಗ್ನಿಪರೀಕ್ಷೆ. ಹಾಗೆಂದು ಹೆದರಿ ಕುಳಿತಿಲ್ಲ. ನೆಲದವರೆಗೂ ಬಗ್ಗಿದ್ದೇನೆ. ಇನ್ನು ಬಗ್ಗಲು ನನ್ನಿಂದ ಸಾಧ್ಯವಿಲ್ಲ ಎಂದು ಯೋಗೇಶ್ವರ್‌ಗೆ ಟಾಂಗ್‌ ನೀಡಿದರಲ್ಲದೆ, ಕಾರ್ಯಕರ್ತರ ಭಾವನೆಯೇ ನನ್ನ ಅಂತಿಮ ತೀರ್ಮಾನ. ಅದಕ್ಕೆ ವಿರುದ್ಧವಾಗಿ ನಿರ್ಧಾರ ಮಾಡುವುದಿಲ್ಲ ಎಂದರು. ಆದರೆ ಎಲ್ಲಿಯೂ ನಿಖೀಲ್‌ ಕುಮಾರಸ್ವಾಮಿ ಸ್ಪರ್ಧೆಯ ಬಗ್ಗೆ ನೇರವಾಗಿ ಏನನ್ನೂ ಹೇಳದ ಕುಮಾರಸ್ವಾಮಿ, ಬೇರಾವ ಅಭ್ಯರ್ಥಿ ಬಗ್ಗೆಯೂ ಚಕಾರ ಎತ್ತಲಿಲ್ಲ. ಕುಮಾರಸ್ವಾಮಿ ಭಾಷಣದ ನಡುವೆ ಮಳೆ ಆರಂಭವಾದ್ದರಿಂದ ಸಭೆಯೂ ಮೊಟಕಾಯಿತು.

Advertisement

ಮಾತೇ ಆಡದೆ ಕುಳಿತಿದ್ದ ಎಚ್‌ಡಿಡಿ
ಇಡೀ ಸಭೆಯುದ್ದಕ್ಕೂ ಎಲ್ಲರ ಮಾತು ಆಲಿಸುತ್ತ ಕುಳಿತಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸಭೆಯಲ್ಲೂ ಮಾತನಾಡಲಿಲ್ಲ. ಸಭೆ ಮುಗಿದ ಅನಂತರವೂ ಮಾತನಾಡಲಿಲ್ಲ. ಯೋಗೇಶ್ವರ್‌ ಕಾಂಗ್ರೆಸ್‌ ಸೇರುತ್ತಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಯೋಗೇಶ್ವರ್‌ ವಿಚಾರದಲ್ಲಿ ಬಿಜೆಪಿ ಯಾವ ನಿರ್ಣಯ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡುತ್ತೇವೆ. ನಾಮಪತ್ರ ಸಲ್ಲಿಕೆಗೆ ಇನ್ನೂ 3 ದಿನ ಅವಕಾಶ ಇದೆ ಎಂದರೇ ಹೊರತು, ಕೊನೆಗೂ ಎನ್‌ಡಿಎ ಅಭ್ಯರ್ಥಿ ಯಾರು ಎನ್ನುವ ಗುಟ್ಟು ರಟ್ಟಾಗಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next