Advertisement

Channapatna;ಯೋಗೇಶ್ವರ್‌,ನಿಖಿಲ್‌ ಪೈಪೋಟಿ ಮಧ್ಯೆ ದೋಸ್ತಿ ಅಭ್ಯರ್ಥಿಯಾಗಿ ಅನಿತಾ ಹೆಸರು

12:37 AM Oct 18, 2024 | Team Udayavani |

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿ ಅ. 18ರಂದು ಅಧಿಸೂಚನೆ ಹೊರ ಬೀಳಲಿದ್ದು, ಶುಕ್ರವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

Advertisement

ಇದರ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ ಮತ್ತು ವಿಪಕ್ಷಗಳ ಮೈತ್ರಿ ಕೂಟ (ಬಿಜೆಪಿ- ಜೆಡಿಎಸ್‌) ಅನುಸರಿಸುತ್ತಿರುವ ತಂತ್ರಗಾರಿಕೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ಚನ್ನಪಟ್ಟಣ ಕ್ಷೇತ್ರವಂತೂ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರದಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಗುಟ್ಟನ್ನು ಯಾವ ಪಕ್ಷವೂ ಬಿಟ್ಟುಕೊಡದ ಕಾರಣ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿದಂತಾಗಿದೆ. ಎರಡು ಕಡೆ ಯಿಂದಲೂ ಕೊನೆಯ ಘಳಿಗೆಯಲ್ಲಿ ಅಚ್ಚರಿ ಅಭ್ಯರ್ಥಿ ಆಯ್ಕೆ ಸಾಧ್ಯತೆಯಿದ್ದು, ಕಾಂಗ್ರೆಸ್‌ನಿಂದ ಡಿ.ಕೆ. ಸುರೇಶ್‌ ಹಾಗೂ ಜೆಡಿಎಸ್‌-ಬಿಜೆಪಿ ದೋಸ್ತಿಯಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

“ನಾನೇ ಅಭ್ಯರ್ಥಿ’ ಎನ್ನುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒಂದೆಡೆಯಾದರೆ, ಅವರು ಅಭ್ಯರ್ಥಿಯಾಗುವುದಾದರೆ ನಾನೂ ಅಭ್ಯರ್ಥಿ ಎನ್ನುವ ಮೂಲಕ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಇನ್ನೊಂದೆಡೆ ಕೌತುಕಕ್ಕೆ ಕಾರಣವಾಗಿದೆ. ಒಟ್ಟಾರೆ ಇಬ್ಬರೂ ಈ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ತಾವೇ ಗೆದ್ದಿದ್ದ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಕುಮಾರಸ್ವಾಮಿ ತಯಾರಿಲ್ಲ. ಅಷ್ಟೇ ಜಿದ್ದಿಗೆ ಬಿದ್ದಿರುವ ಡಿಸಿಎಂ ಶಿವಕುಮಾರ್‌, ಈ ಕ್ಷೇತ್ರವನ್ನು ಹೇಗಾದರೂ ಮಾಡಿ ಕಾಂಗ್ರೆಸ್‌ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಆದರೆ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ಮಾತ್ರ ತೆರೆ ಬಿದ್ದಿಲ್ಲ.

ಗೊಂದಲದಲ್ಲಿ ದಳಪತಿ
ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರೂ ಆಗಿರುವುದರಿಂದ ಪ್ರಭಾವ ತುಸು ಹೆಚ್ಚಾಗಿಯೇ ಇರುತ್ತದೆ ಎಂಬುದು ಸಹಜ ಲೆಕ್ಕಾಚಾರ. ಜೆಡಿಎಸ್‌ನಿಂದ ಜಯಮುತ್ತು ಹೆಸರು ಕೇಳಿಬಂದಿತ್ತಾದರೂ ಈಗ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮುಂಚೂಣಿಯಲ್ಲಿದ್ದು, ಕೊನೆಯ ಘಳಿಗೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಗಿಳಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸೋಲಿನ ಕಹಿ ಉಂಡಿರುವ ನಿಖಿಲ್‌ ಅವರನ್ನು ಮತ್ತೆ ಸ್ಪರ್ಧೆಗಿಳಿಸಬೇಕೇ ಬೇಡವೇ ಎನ್ನುವ ಗೊಂದಲದಲ್ಲಿ ಕುಮಾರಸ್ವಾಮಿ ಇದ್ದಂತಿದೆ. ಸದಸ್ಯತ್ವ ಅಭಿಯಾನ, ಸರಣಿ ಸಭೆಗಳನ್ನು ನಡೆಸಿದ್ದ ನಿಖಿಲ್‌ ಕೊಂಚ ತಣ್ಣಗಾಗಿದ್ದಾರೆ. ಕಾಂಗ್ರೆಸ್‌ನ ತಂತ್ರಗಾರಿಕೆ ಮತ್ತು ಬಿಜೆಪಿಯ ಒಳ ಏಟುಗಳನ್ನು ನಿರೀಕ್ಷಿಸಿ ಪುತ್ರ ನಿಖಿಲ್‌ ಬದಲು ಪತ್ನಿ ಅನಿತಾ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಆಲೋಚನೆ ಕುಮಾರಸ್ವಾಮಿ ಅವರಿಗೆ ಇದೆ. ಒಟ್ಟಿನಲ್ಲಿ ಜೆಡಿಎಸ್‌ ಗೊಂದಲಮಯ ಸನ್ನಿವೇಶದಲ್ಲಂತೂ ಇದೆ.

ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್‌, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಮಾತನಾಡುತ್ತಿದೆ. ಆದರೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಸಿ.ಪಿ. ಯೋಗೇಶ್ವರ್‌ ಸ್ಪರ್ಧೆಗೆ ಹಸುರು ನಿಶಾನೆ ತೋರುತ್ತಿಲ್ಲ. ಇದು ಮಿತ್ರಪಕ್ಷದಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದ್ದು, ಬಿಜೆಪಿ ನಾಯಕರಿಂದ ಯೋಗೇಶ್ವರ್‌ ಹೆಸರು ಬಿಟ್ಟು ಬೇರಾವ ಹೆಸರೂ ಬರುತ್ತಿಲ್ಲ. ಎಲ್ಲ ನಾಯಕರೂ ಯೋಗೇಶ್ವರ್‌ ಬೆನ್ನಿಗೆ ನಿಂತಿದ್ದಾರೆ. ಆದರೆಕುಮಾರಸ್ವಾಮಿ ಮನವೊಲಿಸಲು ಹರಸಾಹಸ ಪಡುವಂತಾ ಗಿದೆ. ಎಡವಟ್ಟಾಗಿ ಯೋಗೇಶ್ವರ್‌ ಸ್ವತಂತ್ರವಾಗಿ ಸ್ಪರ್ಧಿಸಿ ಕಾಂಗ್ರೆಸ್‌
ಬೆಂಬಲಿಸಿಬಿಟ್ಟರೆ ಕ್ಷೇತ್ರ ಕೈತಪ್ಪಿ ಹೋಗುವ ಆತಂಕ ಮಿತ್ರಪಕ್ಷದಲ್ಲಿದೆ. ಒಂದು ವೇಳೆ ಯೋಗೇಶ್ವರ್‌ ಸ್ವತಂತ್ರ ಸ್ಪರ್ಧೆಗೆ ಬಿಜೆಪಿ ಒಳಗೊಳಗೇ ಬೆಂಬಲಿಸಿದರೆ ಎನ್ನುವ ಹೆದರಿಕೆ ಜೆಡಿಎಸ್‌ಗೂ ಇದೆ.

Advertisement

ಇಂದಿನಿಂದ ನಾಮಪತ್ರ
ಇಂದು ಹೊರಬೀಳಲಿದೆ ಅಧಿಸೂಚನೆ
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ಅ. 25ರ ವರೆಗೆ ಉಮೇದುವಾರಿಕೆ ಸಲ್ಲಿಕೆಗೆ ಕಾಲಾವಕಾಶ
ಅ. 28ರಂದು ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ
ಹಿಂಪಡೆಯಲು ಅ. 30 ಕೊನೆಯ ದಿನ
ನ. 13ರಂದು ಮತದಾನ,
ನ. 23ರಂದು ಮತ ಎಣಿಕೆ

ಡಿ.ಕೆ. ಸುರೇಶ್‌ ಗೆಲುವಿಗೆ ಕೊಲ್ಲೂರಿನಲ್ಲಿ ಯಾಗ!
ರಾಮನಗರ: ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರೇ ಚನ್ನಪಟ್ಟಣದ ಶಾಸಕರಾಗಲಿ ಎಂದು ಚನ್ನಪಟ್ಟಣ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಅವರು ಕೊಲ್ಲೂರು ಮೂಕಾಂಬಿಕೆ ದೇವಿ ಸನ್ನಿಧಿಯಲ್ಲಿ ಚಂಡಿಕಾಯಾಗ ನಡೆಸಿದ್ದಾರೆ.

ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಬಗ್ಗೆ ಕೆ.ಸಿ.ವೇಣುಗೋಪಾಲ್‌ ಜತೆ ನಾವು ಚರ್ಚಿಸಿದ್ದೇವೆ. ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷ ಸಮರ್ಥವಾಗಿದೆ.-ಸಿದ್ದರಾಮಯ್ಯ, ಮುಖ್ಯಮಂತ್ರಿ

ಎನ್‌ಡಿಎ ಕೂಟವೇ ನನ್ನ ಕುಟುಂಬ, ಮೈತ್ರಿಕೂಟದಿಂದಲೇ ಒಬ್ಬರು ಅಭ್ಯರ್ಥಿ ಆಗುತ್ತಾರೆ. ಎಲ್ಲವನ್ನೂ ಮೈತ್ರಿ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ, ಇದು ನನ್ನ ಸ್ಪಷ್ಟ ಅಭಿಪ್ರಾಯ.
– ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next