ವರದಿ : ವೀರೇಶ ಮಡ್ಲೂರ
ಹಾವೇರಿ: ಹಿಂದು-ಮುಸ್ಲಿಮರ ಭಾವೈಕ್ಯತೆ ಸಂಕೇತವಾಗಿದ್ದ ಸವಣೂರಿನ ನವಾಬರ ಕಾಲದ ಸ್ಮಾರಕಗಳನ್ನು ಸಂರಕ್ಷಿಸುವ ಮೂಲಕ ಅವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ನವಾಬರ ದರ್ಬಾರ್ ಅರಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗಿದೆ.
ಜಿಲ್ಲೆಯ ಸವಣೂರು ಪಟ್ಟಣ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದ್ದು, ನವಾಬರಾದ ಅಬ್ದುಲ್ ಮಜೀದಖಾನ್ ಸವಣೂರು ಪಟ್ಟಣವನ್ನು ಕೇಂದ್ರವಾಗಿ ಮಾಡಿಕೊಂಡು ತಮ್ಮ ಆಡಳಿತ ನಡೆಸಿ, ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ನವಾಬರ ಆಡಳಿತಕ್ಕೆ ಸಾಕ್ಷಿ ಎಂಬಂತೆ ಈಗಲೂ ಸವಣೂರು ಪಟ್ಟಣದಲ್ಲಿ ಅರಮನೆಗಳನ್ನು ಕಾಣಬಹುದು. ಕಾಲ ಕಳೆದಂತೆ ಅವರು ನಿರ್ಮಿಸಿದ್ದ ಅರಮನೆ, ಸ್ಮಾರಕಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅವುಗಳನ್ನು ಸಂರಕ್ಷಿಸಿ ನವಾಬರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರೂ ಆದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ವತಃ ಮುತುವರ್ಜಿ ವಹಿಸಿ, ನವಾಬರಾದ ಅಬ್ದುಲ್ ಮಜೀದಖಾನ್ ಅವರ ದರ್ಬಾರ್ ಅರಮನೆಯನ್ನು ಸಂರಕ್ಷಿಸಿ ಮ್ಯೂಸಿಯಂ ಆಗಿ ಪರಿವರ್ತಿಸಲು ಕ್ರಮ ಕೈಗೊಂಡಿದ್ದಾರೆ.
2.45 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ: ನವಾಬಾರ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿರುವ ಪಾರಂಪರಿಕ ದರ್ಬಾರ್ ಅರಮನೆ ಶಿಥಿಲಾವಸ್ಥೆ ತಲುಪಿದ್ದು, ಯಥಾಸ್ಥಿತಿಯಲ್ಲಿ ಈ ಕಟ್ಟಡವನ್ನು ಸಂರಕ್ಷಿಸಲಾಗುತ್ತಿದೆ. ಅರಮನೆಯ ಗೋಡೆ, ಮರದ ಬಾಗಿಲುಗಳು, ಮರದ ಛಾವಣಿ, ಮೆಟ್ಟಿಲುಗಳು, ಮರದ ತೊಲೆಗಳನ್ನು ಹೊಸದಾಗಿ ಅಳವಡಿಸಿ ಕಟ್ಟಡವನ್ನು ಮರು ಸ್ಥಾಪಿಸಲಾಗಿದೆ.
ಅರಮನೆಯ ಒಳಾಂಗಣದ ದರ್ಬಾರ್ ಹಾಲ್‌ನಲ್ಲಿದ್ದ ಮರದ ಕಂಬಗಳು, ತೊಲೆಗಳು ಹಾಗೂ ಇತರೆ ಆಕಾರದ ವಿನ್ಯಾಸಗಳು ಶಿಥಿಲಾವಸ್ಥೆಗೆ ತಲುಪಿದ್ದು, ಇವುಗಳನ್ನು ಮೂಲ ಆಕಾರದಲ್ಲಿಯೇ ಸಂರಕ್ಷಿಸಲಾಗಿದೆ. ಅರಮನೆಯ ಮರದ ಛಾವಣಿಯನ್ನು ಸಂಪೂರ್ಣವಾಗಿ ಸಂರಕ್ಷಿಸಲಾಗಿದ್ದು, 2.45 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿಯಲ್ಲಿ ಛಾವಣಿಗಳು, ಮರದ ಟ್ರಸ್‌ಗಳು, ಬೆಳಕಿಂಡಿಗಳು, ಮರದ ಮೆಟ್ಟಿಲುಗಳನ್ನು ಮೂಲ ಆಕಾರಕ್ಕೆ ಧಕ್ಕೆಯಾಗದಂತೆ ಸಂಪೂರ್ಣವಾಗಿ ಸಂರಕ್ಷಿಸುವ ಕಾರ್ಯ ಕೈಗೊಳ್ಳಲಾಗಿದೆ.