ಮೈಸೂರು: ಹಿಂದಿ ಭಾಷೆಗಿರುವ ವಿಶೇಷ ಶಕ್ತಿಯನ್ನು ಅರ್ಥಮಾಡಿಕೊಂಡು ಅದನ್ನು ಅನುಭವಿಸುವ ಮೂಲಕ ರಾಷ್ಟ್ರೀಯ ಭಾಷೆಯನ್ನು ಗೌರವಿಸಬೇಕು ಎಂದು ಎರ್ನಾಕುಲಂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಎನ್. ಅಂಬಿಗ ಅಭಿಪ್ರಾಯಪಟ್ಟರು.
ಮೈಸೂರು ವಿವಿ, ಮಹಾರಾಜ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಕಾಲೇಜಿನ ಜೂನಿಯರ್ ಬಿ.ಎ.ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿ ಭಾಷೆಗೆ ನಮ್ಮ ಅವಶ್ಯಕತೆಯಿಲ್ಲ. ಆದರೆ ನಮಗೆ ಹಿಂದಿ ಭಾಷೆಯ ಅಗತ್ಯವಿದೆ.
ಹೀಗಾಗಿ ನಮ್ಮ ಮಾತೃಭಾಷೆ ಬೇರೆ ಆಗಿದ್ದರೂ, ದೇಶದ ಮಾತೃಭಾಷೆ ಹಿಂದಿಯಾಗಿದೆ. ದೇಶವಾಸಿಗಳು ಹಿಂದಿಯನ್ನು ದ್ವೇಷಿಸಿದರೂ ವಿದೇಶಿಯರು ಅದನ್ನು ಗುರುತಿಸಿದರು. ಹೀಗಾಗಿ ಮನೆಯಲ್ಲಿರುವ ಹಿರಿಯರನ್ನು ಯಾವ ರೀತಿ ಪೂಜ್ಯ ಭಾವನೆಯಿಂದ ಗೌರವಿಸುವಂತೆ, ಹಿಂದಿ ಭಾಷೆಯನ್ನೂ ಸಹ ಗೌರವಿಸಬೇಕಿದೆ ಎಂದರು.
ಹಿಂದಿ ಭಾಷೆ ಎಲ್ಲರೂ ಪ್ರೀತಿಸುವ ಭಾಷೆಯಾಗಿದ್ದು, ಇದು ದೇಶದ ಹೆಮ್ಮೆಯಾಗಿದೆ. ಹಿಂದಿ ಭಾಷೆ ವ್ಯಾವಹಾರಿಕ ಭಾಷೆಯಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬರಿಗೂ ಹಿಂದಿ ಭಾಷೆಯ ಪರಿಚಯವಿದೆ. ಹಿಂದಿ ಕಲಿತರೆ ಭಾರತದ ಯಾವುದೇ ಭಾಗದಲ್ಲಾದರೂ ಸಂಚರಿಸಬಹುದು. ಪ್ರೇಮದಿಂದ ಕಲಿಸಿದರೆ ಎಲ್ಲರೂ ಕಲಿಯಲಿದ್ದು, ಹಿಂದಿ ಬಗ್ಗೆ ಭಾಷಾ ಪ್ರೇಮ ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಲೇಖಕ, ಹಿಂದಿ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಕೆ.ಬಾರಕೇರ ರಚಿತ “ಗದ್ಯ ಪ್ರತಿಭಾ, ಇಂಟರ್ ನೆಟ್ ಕೆ ದೌರ್ ಮೇ ಹಿಂದಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಅನಿಟಾ ಬ್ರಾಗ್ಸ್, ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನಿತಾ, ಹಿಂದಿ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಕೆ.ಬಾರಕೇರ ಇನ್ನಿತರರು ಹಾಜರಿದ್ದರು.