ಮಂಗಳೂರು: ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಕಲ್ಪನೆಗಳು ಹಳೆಯದಾದರೂ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಪ್ರಧಾನಮಂತ್ರಿಗಳು ಉತ್ಸುಕತೆ ತೋರಿಸಿದ್ದಾರೆ. ಇದರ ಯಶಸ್ಸಿಗೆ ಯುವಜನತೆಯ ಸಹಕಾರ ಅತೀ ಅಗತ್ಯ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ ನಿವೃತ್ತ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಆಲೆನ್ ಪಿರೇರಾ ಹೇಳಿದರು.
ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಅಂಗಸಂಸ್ಥೆಯಾದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಲ್ಲಿ ಸ್ಕಿಲ್ ಇಂಡಿಯಾ ಟು ಲಿವರೇಜ್ ಮೇಕ್ ಇನ್ ಇಂಡಿಯಾ: ಇನಿಶಿಯೇಟಿವ್ಸ್ ಆ್ಯಂಡ್ ಚಾಲೆಂಜಸ್ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಂಕಿಂಗ್ ಕ್ಷೇತ್ರಕ್ಕೆ ದ.ಕ. ಜಿಲ್ಲೆ ಅಪಾರ ಕೊಡುಗೆಗಳನ್ನು ನೀಡಿದ್ದು, ಇಲ್ಲಿನ ಬ್ಯಾಂಕ್‌ಗಳು ಗ್ರಾಮೀಣಾಭಿವೃದ್ಧಿಗೂ ಉತ್ತೇಜನ ನೀಡುತ್ತಿದೆ. ಔದ್ಯೋಗಿಕ ಕ್ಷೇತ್ರಗಳಲ್ಲೂ ಸಾಕಷ್ಟು ಅವಕಾಶಗಳಿದ್ದು, ಯುವ ಜನತೆ ಈ ಕುರಿತು ಚಿಂತಿಸಬೇಕಿದೆ ಎಂದರು.
ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ. ಉಡುಪ ಮಾತನಾಡಿ, ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಉದ್ಯೋಗಕ್ಕೆ ಹಂಬಲಿಸುವುದಕ್ಕಿಂತ ಸ್ವಂತ ಉದ್ದಿಮೆ ಪ್ರಾರಂಭಿಸಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟರು.
ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ನಿರ್ದೇಶಕಿ ಆಶ್ರಿತಾ ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಕ್ನೋ ವಿಶ್ವವಿದ್ಯಾಲಯದ ನಗರ ಹಾಗೂ ಪರಿಸರ ಅಧ್ಯಯನದ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಡಾ| ಎ.ಕೆ. ಸಿಂಗ್, ಡೀನ್ ಡಾ| ವಿಜಯ ಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಡಾ| ಟಿ. ಜಯಪ್ರಕಾಶ್ ರಾವ್ ಅವರು ಸ್ವಾಗತಿಸಿದರು. ಉಪನ್ಯಾಸಕಿಯಾದ ಪ್ರೊ| ರಶ್ಮಿತಾ ಕೋಟ್ಯಾನ್ ವಂದಿಸಿದರು. ಪ್ರೊ| ರಾಬಿನ್ ಎಮ್. ಶಿಂಧೆ ಮತ್ತು ಪ್ರೊ| ಮಲ್ಲಿಕಾ ಡಿ.ಕೆ.ಜಿ ಅವರು ಕಾರ್ಯಕ್ರಮ ನಿರ್ವಹಿಸಿದರು.