ನರೇಗಲ್ಲ: ಗ್ರಾಮೀಣ ಪ್ರದೇಶಗಳ ಕೂಲಿ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಬಗ್ಗೆ ಪ್ರತಿ ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳು ಗ್ರಾಮೀಣ ಪ್ರದೇಶದ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ನರೇಗಾ ಅಡಿ ಕೂಲಿ ಪಡೆಯುವುದು ಕಾರ್ಮಿಕರ ಹಕ್ಕಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಸಮೀಪದ ನಿಡಗುಂದಿ ಗ್ರಾಮದಲ್ಲಿ ಗ್ರಾಪಂ ಹಾಗೂ ಕೃಷಿ ಇಲಾಖೆ ವತಿಯಿಂದ ಎಂಜಿಎನ್‌ಆರ್‌ಇಜಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಬದು ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಯೋಜನೆ ಜಾರಿಗೆ ಬಂದು 15 ವರ್ಷಗಳೇ ಕಳೆದರೂ ಪ್ರಚಾರ ಮತ್ತು ಅರಿವಿನ ಕೊರತೆಯಿಂದ ಯೋಜನೆ ಲಾಭ ಜನರಿಗೆ ತಲುಪುತ್ತಿಲ್ಲ. ಅನಕ್ಷರಸ್ಥ ಕೂಲಿ ಕಾರ್ಮಿಕರಿಗೆ ಸಾಮಾಜಿಕ ಜಾಲತಾಣದ ಸಂದೇಶಗಳು ಅರ್ಥವಾಗುವುದಿಲ್ಲ. ಹಾಗಾಗಿ ಪಿಡಿಒಗಳು, ಸಹಾಯಕ ಕಾರ್ಯದರ್ಶಿಗಳು ಸೇರಿದಂತೆ ಪಂಚಾಯಿತಿ ಸಿಬ್ಬಂದಿ ನರೇಗಾ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಸಾಮಾನ್ಯ ಕೂಲಿಕಾರನಿಗೆ ಕೆಲಸ ನೀಡುವುದು ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದರೆ ಸಾಧವಿಲ್ಲ. ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿ ಉದ್ಯೋಗ ಚೀಟಿ ನೀಡಬೇಕು. ತಂಡಗಳನ್ನು ರಚಿಸಿ ಕೊಂಡು ಗ್ರಾಮಗಳಲ್ಲಿರುವ ಜನಸಂಖ್ಯೆ ಕುಟುಂಬ ಹಾಗೂ ವಲಸೆ ಕಾರ್ಮಿಕರ ಪೂರ್ಣ ಮಾಹಿತಿಯನ್ನು ಕಲೆ ಹಾಕಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂದರು.
ಜಿಪಂ ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚಾರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬದುನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಬಸವಣ್ಣೆವ್ವ ಮಡಿವಾಳರ, ಉಪಾಧ್ಯಕ್ಷೆ ಗೀತಾ ಮಾದರ, ಈರಪ್ಪ ಬಿಚ್ಚಾರ, ಫಕೀರಪ್ಪ ಕುಕನೂರ, ಸುರೇಶ ಗಂಗರಗೊಂಡ, ಹುಚ್ಚಿರಪ್ಪ ಗಡಾದ, ಎಸ್.ಕೆ. ಚಂದಾಲವರ, ತಾಪಂ ಇಒ ಸಂತೋಷಕುಮಾರ ಪಾಟೀಲ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ, ಪಿಡಿಒ ಬಿ.ಪಿ. ಓಲೇಕಾರ ಸೇರಿದಂತೆ 519 ಕೂಲಿ ಕಾರ್ಮಿಕರು ಇದ್ದರು.