ಬೆಂಗಳೂರು: ಚುನಾವಣೆ ಪ್ರಕ್ರಿಯೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ನಗರದಲ್ಲಿರುವ ಕಾಲೇಜುಗಳಲ್ಲಿ ಮತದಾರರ ಪಟ್ಟಿಗೆ ಯುವಕರನ್ನು ಸೇರಿಸುವ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗಳ ಕುರಿತು ಯುವಕರು ನಿರಾಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ವಿಶೇಷ ಆಂದೋಲನ ಆರಂಭಿಸಿದೆ. ಅದರಂತೆ ಪಾಲಿಕೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿ 1-1-2017ರ ವೇಳೆಗೆ 18 ವರ್ಷ ತುಂಬಿದ ಯುವ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ನಗರದ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಪ್ರಮಾಣ ಶೇ.3 ರಿಂದ 3.5ರಷ್ಟು ಅಂದರೆ ಅಂದಾಜು 2.75 ಲಕ್ಷ ಯುವ ಮತದಾರರಿಬೇಕು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ 27,500ರಷ್ಟು ಯುವಕರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ 18-21ರ ನಡುವಿನ ಯುವ ಮತದಾರ ನೋಂದಣಿಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದ ಎಲ್ಲ 28 ವಿಧಾನ ಸಭಾ ಕ್ಷೇತ್ರಗಳಲ್ಲಿ 84,97,192 ಮತದಾರರಿದ್ದಾರೆ. ಆ ಪೈಕಿ 44,61,725 ಪುರುಷ ಹಾಗೂ 40,35,467 ಮಹಿಳಾ ಮತದಾರರಿದ್ದಾರೆ. ಯುವಜನತೆಯನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಜುಲೈ 1 ರಿಂದ 31ರವರೆಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಾಗಿದ್ದು, ವಿವಿಧ ಕಾಲೇಜುಗಳಲ್ಲಿ ಪಾಲಿಕೆಯಿಂದ ಇರಿಸಿರುವ ಬಾಕ್ಸ್‌ನಲ್ಲಿ ಅರ್ಜಿ “ನಮೂನೆ 6′ ಹಾಗೂ ಗುರುತಿನ ಚೀಟಿ ಲಗತ್ತಿಸಿದರೆ ಪಾಲಿಕೆಯ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರಿಸಲಿದ್ದಾರೆ ಎಂದರು.
ಪಾಲಿಕೆಯ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ತಹಶೀಲ್ದಾರ್ ಕಾರ್ಯಾಲಯ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ “ನಮೂನೆ 6’ನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಯುವಕರು ಆನ್‌ಲೈನಿಂದಲೂ www. voterreg.kar.nic.in www.nvsp.in, www.ceokarnataka.kar.nic.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ನಕಲಿ ಹೆಸರುಗಳನ್ನು ತೆರವು: ನಗರದ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಯಲ್ಲಿ ಬಾಂಗ್ಲಾದೇಶಿಯರನ್ನು ಸೇರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪಟ್ಟಿ ಪರಿಶೀಲಿಸಿದ ನಂತರ ಅವುಗಳನ್ನು ರದ್ದುಗೊಳಿಸಲಾಗುವುದು. ಇದರೊಂದಿಗೆ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿನ 65,635 ಮತದಾರರು ಮರಣ ಹೊಂದಿರುವುದು ಪತ್ತೆ ಹಚ್ಚಲಾಗಿದ್ದು, ಸಂಬಂಧಿಸಿದವರ ಕುಟುಂಬಕ್ಕೆ ನೋಟಿಸ್ ಜಾರಿಗೊಳಿಸಿ ಅವುಗಳನ್ನು ಪಟ್ಟಿಯಿಂದ ತೆಗೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.