ಬೆಂಗಳೂರು: ವರ್ಣಚಿತ್ರಗಳು ಇಲ್ಲಿ ಕಥೆ ಹೇಳುತ್ತಿವೆ. ಮಹಾಭಾರತ, ರಾಮಾಯಣವನ್ನು ನೆನೆಪಿಸುತ್ತಿವೆ. ದೇವಾನುದೇವತೆಗಳ ಅವತಾರ, ರಾಕ್ಷಸರ ಸಂಹಾರ ವರ್ಣಗಳಲ್ಲಿ ಜೀವ ಪಡೆದಿದೆ. ಶ್ರೀರಾಮಚಂದ್ರನ ಪಟ್ಟಾಭಿಷೇಕ, ಗೀತೋಪದೇಶ, ಬಾಲ ಕೃಷ್ಣನ ತುಂಟಾಟ, ಯಶೋಧೆಯ ಮಮತೆ. ರತಿ ಮನ್ಮಥರು, ತ್ರಿಪುರ ಸಂಹಾರ ಸೇರಿ ನೂರಾರು ಚಿತ್ರಗಳು ಒಂದೊಂದು ಕಥೆ ಹೇಳುತ್ತವೆ.
ಈ ವರ್ಣಮಯ ಜಗತ್ತು ತೆರೆದುಕೊಂಡಿರುವುದು ಕುಮಾರ ಕೃಪ ರಸ್ತೆಯ ಚಿತ್ರಕಲಾ ಪರಿಷತ್‌ನಲ್ಲಿ. ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಮೈಸೂರಿನ ಸಾಂಪ್ರಾದಾಯಿಕ ವರ್ಣಚಿತ್ರಗಳ ಮಹಾ ಪ್ರದರ್ಶನ ಮೇಳ ಸೋಮವಾರ ಆರಂಭವಾಗಿದ್ದು,
ಡಿ.17ರವರೆಗೆ ನಡೆಯಲಿದ್ದು, ಬೆಳಗ್ಗೆ 10 ರಿಂದ ಸಂಜೆ 7ರ ವರೆಗೆ ಪ್ರದರ್ಶನವಿರಲಿದೆ. ಮೈಸೂರಿನ ಪ್ರಸಿದ್ಧ ವರ್ಣಚಿತ್ರಗಾರರಾದ ದಿನೇಶ್, ರಾಮಕೃಷ್ಣ ಮತ್ತು ತಿ.ನರಸಿಪುರದ ಶ್ರೀಹರಿ ಅವರ ಕಲ್ಪನೆಯಲ್ಲಿ ಮೂಡಿ ಬಂದಿರುವ ನೂರಾರು ಚಿತ್ರಗಳು ಮೇಳದಲ್ಲಿವೆ.
ಶ್ರೀರಾಮನ ಪಟ್ಟಾಭಿಷಕ, ಕೃಷ್ಣ ರುಕ್ಮಿಣಿಯರ ಕಲ್ಯಾಣ, ಮುಮ್ಮಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವರ್ಣಚಿತ್ರಗಳು ಆಗಿನ ಕಾಲ, ಸನ್ನಿವೇಷ ಹಾಗೂ ವೈಭವದ ಚಿತ್ರಣ ಕಟ್ಟಿಕೊಡುತ್ತವೆ. ನೋಡುತ್ತಿದ್ದರೆ ಕಣ್ಣಮುಂದೇ ದೃಶ್ಯ ಘಟಿಸುತ್ತಿದೆ ಎಂಬ ನೈಜ ಚಿತ್ರಣ ನೀಡುವುದು ಈ ವರ್ಣಚಿತ್ರಗಳ ರಚನೆಯಲ್ಲಿನ ಜೀವಂತಿಕೆಗೆ ಸಾಕ್ಷಿ.
ಮೇಳದಲ್ಲಿ 150ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಕ್ಕಿದ್ದು, ಎಲ್ಲವೂ ಮೈಸೂರಿನ ಸಾಂಪ್ರಾದಾಯಿಕ ವರ್ಣಚಿತ್ರಗಳಾಗಿವೆ. ಈಗಾಗಲೇ ಚಿತ್ರಕಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ವರ್ಣಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಸಿದ್ದಾರೆ ಎಂದು ವಿಠಲ್ ತಿಳಿಸಿದರು.
ಚಿನ್ನದ ಲೇಪನದ ಶ್ರೀಮಂತಿಕೆ: ಕೆಲ ವರ್ಣಚಿತ್ರಗಳು ಬಂಗಾರದ ಲೇಪನದೊಂದಿಗೆ ಶ್ರೀಮಂತಿಕೆಯಿಂದ ನಳನಳಿಸುತ್ತಿವೆ. ಇಂಥ ಚಿನ್ನದ ಲೇಪನ ರಾಮನ ಪಟ್ಟಾಭಿಷೇಕದ ವರ್ಣ ಚಿತ್ರಕ್ಕೂ ಇದ್ದು, ಇದರ ಬೆಲೆ 5 ಲಕ್ಷ ರೂ! ಮೇಳದಲ್ಲಿರುವ ವರ್ಣಚಿತ್ರಗಳ ಬೆಲೆ 3 ಲಕ್ಷ ರೂ.ಗಳಿಂದ ಆರಂಭವಾಗಲಿದ್ದು, 30 ಲಕ್ಷ ರೂ.ವರೆಗಿನ ಚಿತ್ರಗಳನ್ನು ಇಲ್ಲಿ ಕಾಣಬಹುದು.
“ಕಳೆದ ಬಾರಿ ಆಯೋಜಿಸಿದ್ದ ಮೇಳದಲ್ಲಿ ಒಂದೂ ವರ್ಣಚಿತ್ರ ಮಾರಾಟವಾಗದೆ ನಿರಾಶೆ ಅನುಭವಿಸಿದ್ದೆವು. ಆದರೆ ಈ ಬಾರಿ ಹಾಗಾಗುವುದಿಲ್ಲ ಎಂಬ ನಂಬಿಕೆಯೊಂದಿಗೆ ಮತ್ತೂಮ್ಮೆ ಮೇಳ ಆಯೋಜಿಸಲಾಗಿದೆ,’ ಎಂದು ಆಯೋಜಕ ವಿಠಲ್ ವಿಶ್ವಾಸ ವ್ಯಕ್ತಪಡಿಸಿದರು.