Advertisement

ರಾಜ್ಯದ ಪ್ರಗತಿಗೆ ಮೈಸೂರು ಅರಸರ ಕೊಡುಗೆ ಅಪಾರ

05:29 PM Jun 09, 2022 | Team Udayavani |

ಮೈಸೂರು: ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಿಸುವ ನಮ್ಮ ಸಂಕಲ್ಪ ನನಸಾಗಲು ಮೈಸೂರು ವಿಭಾಗದ ಪ್ರಜ್ಞಾವಂತ ಪದವೀಧರ ಮತದಾರರು ಬಿಜೆಪಿ ಬೆಂಬಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

Advertisement

ನಗರ ಮತ್ತು ಗ್ರಾಮಾಂತರ ಬಿಜೆಪಿ ಘಟಕಗಳ ವತಿಯಿಂದ ರಾಜೇಂದ್ರ ಕಲಾಮಂದಿರದಲ್ಲಿ ಬುಧವಾರ ನಡೆದ ಮತದಾರರ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ನಂತರ ಹೆಚ್ಚು ಪ್ರತಿಭಾವಂತ, ವಿದ್ಯಾವಂತ ನಾಯಕರು, ಜನರು ಇರುವುದು ಮೈಸೂರಿನಲ್ಲಿ. ಮೈಸೂರಿಗೆ ತನ್ನದೇ ಆದ ಇತಿಹಾಸ ಇದೆ. ಹೀಗಾಗಿ ಪ್ರಜ್ಞಾವಂತರಾದ ನೀವು ಬಿಜೆಪಿ ಬೆಂಬಲಿಸುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಿ ಎಂದರು.

ಪ್ರತಿ ಮತದಾರನು ತಮ್ಮ ಮತ ಗೆಲ್ಲಬೇಕು ಎಂದು ಬಯಸುತ್ತಾರೆ. ಈಗ ಪ್ರತಿ ಮತದಾರನ ಅಭಿಪ್ರಾಯ ಬಹಳ ಮುಖ್ಯ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಮತದಾರರು ಜಾಗೃತರಾಗಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಮೈ.ವಿ. ರವಿಶಂಕರ್‌ ಪರವಾದ ಅಲೆ ಇದೆ. ಜಾತಿ, ಮತ, ಪಂಥ ಮೀರಿ ಚುನಾವಣೆ ನಡೆಯುತ್ತಿದೆ. ಇಂದು ವಿದೇಶಗಳು ಭಾರತೀ ಯರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಇದಕ್ಕೆ ಪ್ರಮುಖ ಕಾರಣ ನರೇಂದ್ರ ಮೋದಿ ಅವರ ನಾಯಕತ್ವ ಎಂದರು.

ಮಹಾರಾಜರಿಂದ ಭದ್ರ ಬುನಾದಿ: ಸಿಂಗಾಪುರದ ದಾವೋಸ್‌ ನಗರ ಪ್ರವಾಸದ ವೇಳೆ ವಿದೇಶಿ ಪತ್ರಕರ್ತರೊಬ್ಬರು ದಕ್ಷಿಣ ಏಷ್ಯಾದಲ್ಲಿಯೇ ಕರ್ನಾಟಕ ಪ್ರಗತಿಪರ ರಾಜ್ಯವಾಗಲು ಕಾರಣ ಏನೆಂದು ಪ್ರಶ್ನಿಸಿದರು. ಅದಕ್ಕೆ ನನ್ನ ಉತ್ತರ ಮೈಸೂರು ಮಹಾರಾಜರು ಎಂಬುದಾಗಿತ್ತು.

ರಾಜರು ಪ್ರಗತಿಪರ ಚಿಂತನೆ, ಸಾಮಾಜಿಕ ಪ್ರಜ್ಞೆಯಿಂದ ಕೈಗಾರಿಕೆ ಸ್ಥಾಪಿಸಿ ಆಧುನಿಕ ಕರ್ನಾಟಕ ನಿರ್ಮಾತೃಗಳಾಗಿದ್ದಾರೆ. ಅವರು ಹಾಕಿದ ಭದ್ರ ಬುನಾದಿಯಿಂದಲೇ ಕರ್ನಾಟಕ ಕಟ್ಟಲು ಸಾಧ್ಯವಾಗಿದೆ. ಕರ್ನಾಟಕದ ಇತಿಹಾಸ ಬರೆಯುವಾಗ ಅದರಲ್ಲಿ ರಾಜರ ಕೊಡುಗೆ ಮುಂಚೂಣಿಯಲ್ಲಿರುತ್ತದೆ ಎಂದು ಬಣ್ಣಿಸಿದರು.

Advertisement

1.5 ಲಕ್ಷ ಯುವಕರಿಗೆ ತರಬೇತಿ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಕ್ರಮದಡಿ ರಾಜ್ಯದಲ್ಲಿ 1.5 ಲಕ್ಷ ಯುವಕರಿಗೆ ಕೌಶಲ ತರಬೇತಿ ನೀಡಲಾಗಿದೆ. ಕೃಷಿ ವಲಯ, ಉತ್ಪಾದನಾ ವಲಯ, ಸೇವಾ ವಲಯ ಉತ್ತೇಜಿಸಲಾಗುತ್ತಿದೆ. ಯುವಕರಿಗೆ ಯೋಜನೆ ರೂಪಿಸಿ ಹಣಕಾಸಿನ ನೆರವು ನೀಡಲಾಗುವುದು ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 7 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯ ಕ್ರಮಗಳನ್ನು ಮತದಾರರು ಮನಗಂಡು ವಿಧಾನ ಪರಿಷತ್ತಿನಲ್ಲಿ ನಮ್ಮ ಬಲಪಡಿಸಲು ಮೈ.ವಿ.ರವಿಶಂಕರ್‌ ಅವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ, ಸಂಸದ ಪ್ರತಾಪಸಿಂಹ, ಶಾಸಕರಾದ ಎಲ್‌.ನಾಗೇಂದ್ರ, ಎಸ್‌.ಎ. ರಾಮದಾಸ್‌, ಹರ್ಷವರ್ಧನ್‌, ಮೇಯರ್‌ ಸುನಂದಾ ಫಾಲನೇತ್ರ, ಅಭ್ಯರ್ಥಿ ಮೈ.ವಿ.ರವಿಶಂಕರ್‌, ಮುಡಾ ಅಧ್ಯಕ್ಷ ಎಚ್‌. ವಿ.ರಾಜೀವ್‌, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌ ಇದ್ದರು.

ಕಾಂಗ್ರೆಸ್‌ ಈ ತನಕ ಟೇಕಾಫ್ ಆಗಿಲ್ಲ. ಸಿದ್ದರಾಮಯ್ಯ ಟೇಕಾಫ್ ಮಾಡಲು ಮುಂದಾದರೆ ಡಿ.ಕೆ.ಶಿವಕುಮಾರ್‌ ಅದನ್ನು ತಡೆಯುತ್ತಾರೆ. ಜೆಡಿಎಸ್‌ನಲ್ಲಿ ಬಂಡಾಯ ಇದೆ. ಆದರೆ, ಬಿಜೆಪಿಯಲ್ಲಿ ಒಗ್ಗಟ್ಟಾಗಿ ಪ್ರಚಾರ ಮಾಡುತ್ತಿದ್ದೇವೆ. ಮೈಸೂರು ಜಿಲ್ಲೆಯಲ್ಲಿ 64 ಸಾವಿರ ಪದವೀಧರರ ನೋಂದಣಿ ಮಾಡಿಸಿದ್ದೇವೆ. 40 ಸಾವಿರ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇವೆ. ಈ ಚುನಾವಣೆ ಯಲ್ಲಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ.
● ಎಸ್‌.ಟಿ. ಸೋಮಶೇಖರ್‌,
ಜಿಲ್ಲಾ ಉಸ್ತುವಾರಿ ಸಚಿವ

ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ರನ್‌ವೇ ವಿಸ್ತರಣೆಗೆ ಅನುದಾನ ನೀಡಲಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಮೈಸೂರಿನಲ್ಲಿ ಉದ್ಯಮ, ಶಿಕ್ಷಣ ಸಂಸ್ಥೆ ಆರಂಭಿಸಲು ಪೂರಕ ವಾತಾವರಣ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅಲ್ಲದೇ ಮೈಸೂರಿನಲ್ಲಿ ಇಂಡಸ್ಟ್ರೀಯಲ್‌ ಟೌನ್‌ ಮಾಡಬೇಕೆಂಬ ಚಿಂತನೆ ಇದೆ.
● ಬಸವರಾಜ ಬೊಮ್ಮಾಯಿ, ಸಿಎಂ

30 ವರ್ಷಗಳಿಂದ ಪಕ್ಷದಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಮತ್ತೂಮ್ಮೆ ಟಿಕೆಟ್‌ ನೀಡಿದೆ. ಮತದಾರರು ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿ. ನಿಮ್ಮ ಮತಕ್ಕೆ ಚ್ಯುತಿಯಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
● ಮೈ.ವಿ.ರವಿಶಂಕರ್‌, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next