ವರದಿ: ಮಹಾದೇವ ಪೂಜೇರಿ
ಚಿಕ್ಕೋಡಿ: ಮುಸ್ಲಿಂ ಕುಟುಂಬವೊಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಡಿ ಭಾಗದಲ್ಲಿ ಕೋಮು ಸೌಹಾರ್ದ ಮೆರೆಯುತ್ತಿರುವ ದೃಶ್ಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿಯಲ್ಲಿ ನೋಡಲು ಸಿಗುತ್ತದೆ.
ಕೃಷ್ಣಾ ನದಿ ತೀರದ ಮಾಂಜರಿವಾಡಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಕಳೆದ 60 ವರ್ಷಗಳಿಂದ ಪ್ರತಿ ವರ್ಷ ಗಣೇಶ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿಕೊಂಡು ಹಿಂದು-ಮುಸ್ಲಿಂ ಬೇಧ-ಭಾವವಿಲ್ಲದೇ ಭಾವ್ಯಕ್ಯತೆ ಸಂದೇಶ ಸಾರುತ್ತಿದೆ.
ಗ್ರಾಮದ ಅಲ್ಲಾಬಕ್ಷ ಜಮಾದಾರ ಕುಟುಂಬ ಪ್ರತಿ ವರ್ಷ ನೂರಾರು ಗಣಪತಿ ಮೂರ್ತಿ ತಯಾರಿಸಿ ಭಕ್ತಾ ದಿಗಳಿಗೆ ನೀಡುವ ಕಾಯಕದಲ್ಲಿ ನಿರತವಾಗಿದೆ. ಮೂಲತ: ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿರುವ ಅಲ್ಲಾಬಕ್ಷ ಜಮಾದಾರ ಅವರು ತಮ್ಮ ಬಿಡುವಿನ ಸಮಯದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಜಾತಿ-ಭೇದಭಾವ ಬದಿಗಿಟ್ಟು ಝಗಮಗಿಸುವ ಬಣ್ಣ ಬಣ್ಣಗಳಿಂದ ವಿಘ್ನೆಶ್ವರ ಮೂರ್ತಿ ತಯಾರಿಸುವ ಕಾಯಕ ತೃಪ್ತಿದಾಯಕ ತಂದಿದೆ ಎನ್ನುತ್ತಾರೆ ಅಲ್ಲಾಬಕ್ಷ ಜಮಾದಾರ.
ಮೊಹಮ್ಮದ್ ಜಮಾದಾರ್ ಅವರು ತನ್ನ ಸಹೋದರನ ಜೊತೆಗೂಡಿ ಗಣಪತಿ ವಿಗ್ರಹಗಳನ್ನ ತಯಾರು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಯಾರು ಏನೇ ಹೇಳಿದರೂ, ಜಾತಿ ಮತದ ಬಗ್ಗೆ ಪ್ರಸ್ತಾಪ ಮಾಡಿದರೂ ಅದನ್ನ ತಲೆಯಲ್ಲಿ ಹಾಕಿಕೊಳ್ಳದೇ ಇಡೀ ಕುಟುಂಬ ಗಣಪತಿಯನ್ನ ತಯಾರಿಸಿಕೊಂಡು ಬರುತ್ತಿದೆ. ಜಮಾದಾರ ಕುಟುಂಬ ತಯಾರು ಮಾಡುವ ಗಣಪತಿ ಮೂರ್ತಿಗಳಿಗೆ ಗಡಿ ಭಾಗದಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ಮಾಂಜರಿ, ಯಡೂರ, ಯಡೂರವಾಡಿ, ಶಿರಗುಪ್ಪಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಗಣೇಶ ಮೂರ್ತಿಗಳನ್ನು ಪೂಜೆಗೆ ತೆಗೆದುಕೊಂಡು ಹೋಗುತ್ತಾರೆ.
ಪ್ರಸಕ್ತ ವರ್ಷದಲ್ಲಿ ಜಮಾದಾರ ಕುಟುಂಬ ಸುಮಾರು 250 ರಿಂದ 300 ಗಣೇಶ ಮೂರ್ತಿಗಳನ್ನು ತಯಾರಿಸಿದ್ದು, ಗಣೇಶ ಚೌತಿ ಹಬ್ಬದ ಮುನ್ನಾ ದಿನ ಗಣೇಶ ಮೂರ್ತಿಗಳ ಅಂತಿಮ ಕೆಲಸ ಮುಕ್ತಾಯವಾಗಲಿದೆ ಎಂದು ಜಮಾದಾರ ಅತೀ ಉತ್ಸಾಹದಿಂದ ಅನಿಸಿಕೆ ಹಂಚಿಕೊಂಡರು. ಗಣೇಶ ಚತುರ್ಥಿಗೂ ಎರಡು ತಿಂಗಳು ಮುಂಚೆಯೇ ಜಮಾದಾರ್ ಕುಟುಂಬಸ್ಥರು ಗಣಪತಿ ಮೂರ್ತಿ ತಯಾರಿಸುವ ಕೆಲಸ ಶುರು ಮಾಡುತ್ತಾರೆ. ಒಬ್ಬರು ಮಣ್ಣು ಹದ ಮಾಡಿದರೆ, ಇನ್ನೊಬ್ಬರು ಮೂರ್ತಿಗೆ ಬೇಕಾದ ಸೊಂಡಿಲು, ಕೈ ಹಾಗೂ ಕೀರೀಟ ತಯಾರು ಮಾಡ್ತಾರೆ. ಮನೆಯ ಹೆಣ್ಣು ಮಕ್ಕಳೂ ಸಹ ಈ ಗಣೇಶ ಮೂರ್ತಿ ತಯಾರು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬರೂ ಸಹ ಒಂದೊಂದು ಕೆಲಸ ಹಂಚಿಕೊಂಡು ಭಕ್ತರಿಗೆ ಬೇಕಾದ ರೀತಿಯಲ್ಲಿ ವಿವಿಧ ಅಳತೆ, ಗಾತ್ರದ ಸುಂದರಮೂರ್ತಿಗಳನ್ನು ತಯಾರು ಮಾಡುತ್ತಿರುವ ಮುಸ್ಲಿಂ ಕುಟುಂಬದ ಕಾಯಕಕ್ಕೆ ಗಡಿ ಭಾಗದ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.