ಬೆಂಗಳೂರು: ಕುಡಿತದ ಅಮಲಿನಲ್ಲಿ ಬಂದು ಜಗಳವಾಡಿ ಕಾರಿನ ಗಾಜು ಪುಡಿ ಮಾಡಿದ್ದರಿಂದ ಆಕ್ರೋಶಗೊಂಡ ಅಣ್ಣ, ಸಿಮೆಂಟ್ ಇಟ್ಟಿಗೆಯನ್ನು ತಲೆಮೇಲೆ ಎತ್ತಿಹಾಕಿ ತಮ್ಮನನ್ನು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಅಂಜನಾ ನಗರದ ಕೆಇಬಿ ಕಾಲೋನಿಯಲ್ಲಿ ನಡೆದಿದೆ. ಜಗದೀಶ್ (30)ಮೃತ ವ್ಯಕ್ತಿ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ತಮ್ಮನನ್ನು ಕೊಂದ ಆರೋಪಿ ಮುನಿರಾಜು (35) ಬಂಧನಕ್ಕೆ ಬಲೆ ಬೀಸಿದ್ದಾರೆ.
ನಿತ್ಯ ರಂಪಾಟ: ತಾವರೆಕೆರೆಯ ಹೊನ್ನಗನಹಟ್ಟಿಯ ನಿವಾಸಿಯಾದ ಜಗದೀಶ್ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಪ್ರೀತಿಸಿದ್ದ ಕಸುಮ ಎಂಬಾಕೆಯನ್ನು ವಿವಾಹವಾಗಿದ್ದು, ಇದಕ್ಕೆ ಅಣ್ಣ ಹಾಗೂ ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಸ್ನೇಹಿತರ ಸಹಕಾರದಿಂದ ವಿವಾಹ ಮಾಡಿಕೊಂಡಿದ್ದ ಜಗದೀಶ್ ಪತ್ನಿಯನ್ನು ಮನೆಗೆ ಕರೆತಂದಿದ್ದು ಒಟ್ಟಿಗೆ ವಾಸ ವಾಡುತ್ತಿದ್ದರು. ಇದೇ ವಿಚಾರಕ್ಕೆ ಅಣ್ಣನ ಜತೆ ಪದೇ ಪದೇ ಜಗಳವಾಗುತ್ತಿತ್ತು. ತಮ್ಮ ಮದುವೆಗೆ ಒಪ್ಪಲಿಲ್ಲ ಎಂಬ ವಿಚಾರವನ್ನೇ ಮುಂದಕ್ಕೆ ತರುತ್ತಿದ್ದ ಜಗದೀಶ್, ದಿನ ನಿತ್ಯ ಕುಡಿದು ರಂಪಾಟ ನಡೆಸುತ್ತಿದ್ದ.
ಇದರಿಂದ ಬೇಸತ್ತ ಮುನಿರಾಜು ಕಳೆದ 15ದಿನಗಳ ಹಿಂದೆ ಪತ್ನಿಯ ಜತೆಗೂಡಿ ಅಂಜನಾ ನಗರದ ಕೆಇಬಿ ಕಾಲೋನಿಯಲ್ಲಿರುವ ಅಕ್ಕ ಲಕ್ಷ್ಮಮ್ಮನ ಮನೆಗೆ ಬಂದು ಉಳಿದುಕೊಂಡಿದ್ದರು. ಸೋಮವಾರ ಹೊನ್ನಗನಹಟ್ಟಿಯ ಮನೆಗೆ ತೆರಳಿದ್ದ ಮುನಿರಾಜು ಪತ್ನಿಗೆ ನಿಂದಿಸಿದ್ದಾರೆ ಎಂದು ಆಕ್ರೋಶಗೊಂಡ ಜಗದೀಶ್ ಸಂಜೆ 6-30ರ ಸುಮಾರಿಗೆ ಕೆಇಬಿ ಕಾಲೋನಿಯಲ್ಲಿರುವ ಸಹೋದರಿ ಮನೆಯ ಹತ್ತಿರ ಬಂದು ಜಗಳವಾಡಿಕೊಂಡು ವಾಪಾಸಾಗಿದ್ದಾನೆ.
ಸ್ಥಳದಲ್ಲೇ ಸಾವು: ಮತ್ತೆ ರಾತ್ರಿ 11-30ರ ಸುಮಾರಿಗೆ ತನ್ನ ಜತೆ ಕೆಲಸ ಮಾಡುವ ಗಿರೀಶ್ ಎಂಬ ಹುಡುಗನನ್ನು ಕರೆದುಕೊಂಡು ಬಂದ ಜಗದೀಶ್, ಕಾರು ತೆಗೆದುಕೊಂಡು ಹೋಗುವ ವಿಚಾರಕ್ಕೆ ಮುನಿರಾಜು ಜೊತೆ ಮತ್ತೆ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ನಾಲ್ಕನೇ ಮಹಡಿಯಲ್ಲಿರುವ ಮನೆಯಿಂದ ಕೆಳಗಡೆ ಇಳಿದು ಬಂದ ಜಗದೀಶ್ ಅಲ್ಲಿಯೇ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾನೆ.
ಇದನ್ನು ನಾಲ್ಕನೇ ಮಹಡಿಯಿಂದಲೇ ಗಮನಿಸಿದ ಮುನಿರಾಜು, ಕೋಪದಿಂದ ಸಿಮೆಂಟ್ ಇಟ್ಟಿಗೆ ಕೆಳಕ್ಕೆ ಎಸೆದಿದ್ದರಿಂದ ಅದು ಜಗದೀಶ್ ತಲೆಯ ಮೇಲೆಯೇ ಬಿದ್ದಿದೆ. ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿದ್ದರಿಂದ ಜಗದೀಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆಯನ್ನು ನೋಡಿದ ಗಿರೀಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮುನಿರಾಜು ಬಂಧನಕ್ಕೆ ಕ್ರಮ ವಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.