ಬೆಳಗಾವಿ: ಸದಸ್ಯರು ತನ್ನ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಂಡಿದ್ದರಿಂದ ಅಧಿಕಾರ ಕೈ ತಪ್ಪುತ್ತದೆ ಎಂಬ ಆತಂಕದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ತನ್ನ ಸಹಚರರೊಂದಿಗೆ ಸೇರಿ ಸದಸ್ಯನನ್ನೇ ಹತ್ಯೆ ಮಾಡಿದ ಘಟನೆ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಗ್ರಾಪಂ ಸದಸ್ಯ ಬಣ್ಣೆಪ್ಪ ನಿಂಗಪ್ಪ ಪಾಟೀಲ(38) ಕೊಲೆಗೀಡಾದ ಸದಸ್ಯ.
ಗ್ರಾಪಂ ಅಧ್ಯಕ್ಷ ಶಿವಪ್ಪ ರಾಯಪ್ಪ ವಣ್ಣೂರಿ 16 ಜನರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.
ಹೊಸ ವಂಟಮೂರಿ ಗ್ರಾಪಂ ಅಧ್ಯಕ್ಷನಾಗಿ ಶಿವಪ್ಪ ವಣ್ಣೂರಿ 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ಈತನ ಕಾರ್ಯವೈಖರಿ ಬಗ್ಗೆ 25ಕ್ಕೂ ಹೆಚ್ಚು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಬಣ್ಣೆಪ್ಪನ ಸಹೋದರಿಯ ಮಗನ ಮೇಲೆ ಅಧ್ಯಕ್ಷ ಶಿವಪ್ಪನ ಕಡೆಯವರು ಹಲ್ಲೆ ನಡೆಸಿದ್ದರು. ಇದನ್ನು ಪ್ರಶ್ನಿಸಲು ಹೋಗಿದ್ದ ಬಣ್ಣೆಪ್ಪನ ತಲೆಗೆ ಶಿವಪ್ಪ ಸೇರಿ 16 ಜನ ಸೇರಿ ರಾಡ್‌ನಿಂದ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಬಣ್ಣೆಪ್ಪ ಮೃತಪಟ್ಟಿದ್ದಾನೆ.
ಅವಿಶ್ವಾಸ ನಿರ್ಣಯ ಮಂಡಿಸಲು ಸದಸ್ಯ ಬಣ್ಣೆಪ್ಪ ಪಾಟೀಲನೇ ಪ್ರಮುಖ ಪಾತ್ರ ವಹಿಸಿದ್ದ. ಹೆಚ್ಚಿನ ಸಂಖ್ಯೆಯ ಸದಸ್ಯರು ಬಣ್ಣೆಪ್ಪನ ಪರವಾಗಿ ಇದ್ದರು. ಅವಿಶ್ವಾಸ ನಿರ್ಣಯ ಪ್ರಶ್ನಿಸಿ ಶಿವಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೋರ್ಟಿನಿಂದ ತಡೆಯಾಜ್ಞೆ ಬಂದಿತ್ತು. ಈ ಕುರಿತು ತೀರ್ಪು ಡಿ.17ರಂದು ಪ್ರಕಟವಾಗಬೇಕಿತ್ತು. ಘಟನೆ ಕುರಿತು ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಬಣ್ಣೆಪ್ಪ ಪಾಟೀಲ ಹಾಗೂ ಈತನ ಪತ್ನಿ ಸವಿತಾ ಇಬ್ಬರೂ ಗ್ರಾಪಂ ಸದಸ್ಯರಾಗಿದ್ದಾರೆ.