Advertisement
ಜೂ. 1ರಂದು ಕಂಪೆನಿಯ ಚುಕ್ಕಾಣಿ ಹಿಡಿದ ಕನ್ನಡಿಗ ಎಂ. ವೆಂಕಟೇಶ್ ಅವರ ವಿಶೇಷ ಸಂದರ್ಶನ ಇಲ್ಲಿದೆ.ಎರಡೂ ಕಂಪೆನಿಗಳ ವಿಲೀನ ಖಚಿತವೇ?
ಎಚ್‌ಪಿಸಿಎಲ್ ಹಾಗೂ ಎಂಆರ್‌ಪಿಎಲ್ ಎರಡೂ ಒಎನ್‌ಜಿಸಿ ಅಧೀನ ಕಂಪೆನಿಗಳು. ವಿಲೀನ ಕುರಿತು ಒಎನ್‌ಜಿಸಿ ಮಟ್ಟದಲ್ಲಿ ತೀರ್ಮಾನವಾಗುತ್ತದೆ. ಪ್ರತ್ಯೇಕ ರಿಫೈನರಿ ಆಗಿ ಎರಡೂ ಕಂಪೆನಿಗಳ ಮಾರ್ಕೆಟಿಂಗ್ ವ್ಯವಸ್ಥೆ ಕಂಡಾಗ ವಿಲೀನಕ್ಕೆ ಸೂಕ್ತ ವಾತಾವರಣ ಇದೆ ಎನಿಸುತ್ತದೆ.
ಕಂಪೆನಿಗಳ ವಿಲೀನ ಸಂಬಂಧ ಮಾತುಕತೆ ನಡೆಯುತ್ತಿದೆ. ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಇದನ್ನು ದೇಶೀಯ ತೈಲ ಕ್ಷೇತ್ರದ ಬಹು ದೊಡ್ಡ ವಿಲೀನವೆನ್ನಬಹುದೇ?
ಖಂಡಿತ. ಏಕೆಂದರೆ ಎಂಆರ್‌ಪಿಎಲ್ ವಾರ್ಷಿಕ ಸುಮಾರು 60 ಸಾವಿರ ಕೋ.ರೂ.ಗೂ ಅಧಿಕ ವಹಿವಾಟು ನಡೆಸುವ ಕಂಪೆನಿ. ಇಂಥ ಕಂಪೆನಿಯು ಎಚ್‌ಪಿಸಿಎಲ್ ಜತೆ ವಿಲೀನಗೊಂಡರೆ, ಆಗ ಹಣಕಾಸು ಹಾಗೂ ಮೂಲ ಸೌಕರ್ಯದ ದೃಷ್ಟಿಯಿಂದ ಇದನ್ನು ದೇಶೀಯ ವ್ಯಾವಹಾರಿಕ ಕ್ಷೇತ್ರದ ಬಹುದೊಡ್ಡ ಬೆಳವಣಿಗೆ ಎನ್ನಬಹುದು
Related Articles
ಎಂಆರ್‌ಪಿಎಲ್ ತೈಲ ಸಂಸ್ಕರಣ ಘಟಕ ವಾರ್ಷಿಕ 1.6 ಕೋಟಿ ಮೆ.ಟನ್ ಕಚ್ಚಾ ತೈಲ ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಎಚ್‌ಪಿಸಿಎಲ್ ಸಾಮರ್ಥ್ಯವೂ ಇಷ್ಟೇ ಇದೆ. ವಿಲೀನಗೊಂಡರೆ, ಒಟ್ಟು ಉತ್ಪಾದನ ಸಾಮರ್ಥ್ಯ ದ್ವಿಗುಣಗೊಂಡು ಎಚ್‌ಪಿಸಿಎಲ್ ದೇಶದ ದೈತ್ಯ ತೈಲ ಸಂಸ್ಕರಣ ಕಂಪೆನಿಗಳಲ್ಲಿ ಒಂದೆನಿಸಲಿದೆ. ಕಂಪೆನಿಗಳ ಕಾರ್ಯಕ್ಷಮತೆ ಹೆಚ್ಚಿಸಲು ವಿಲೀನದ ಚಿಂತನೆ ನಡೆಯುತ್ತಿದೆ. ಇದು ಸಾಧ್ಯವಾದರೆ, ಎಂಆರ್‌ಪಿಎಲ್ ಎಚ್‌ಪಿಸಿಎಲ್‌ನ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಸಂಯೋಜನೆಗೊಳ್ಳುತ್ತದೆ. ನನ್ನ ಪ್ರಕಾರ ಹೆಚ್ಚಿನ ಲಾಭ ಎಚ್‌ಪಿಸಿಎಲ್‌ಗೆ ಆಗಲಿದೆ.
Advertisement
ಎಚ್‌ಪಿಸಿಎಲ್ ವಹಿವಾಟು ಹೆಚ್ಚೀತೇ?
ಎಚ್‌ಪಿಸಿಎಲ್‌ಗೆ ಇರುವ ತೈಲ ಉತ್ಪನ್ನಗಳ ಲಭ್ಯತೆಯ ಕೊರತೆ ನೀಗಿಸುವ ಮೂಲಕ ಮಾರುಕಟ್ಟೆ ವಿಸ್ತರಿಸಲು ಎಂಆರ್‌ಪಿಎಲ್ ವಿಲೀನ ಸಹಕಾರಿಯಾಗಬಹುದು. ಎಂಆರ್‌ಪಿಎಲ್ ಪ್ರತ್ಯೇಕ ಪಾಲಿ ಪ್ರೊಪಿಲೀನ್ ಉತ್ಪಾದನ ಘಟಕ ಹೊಂದಿರುವ ಕಾರಣ ಎಚ್‌ಪಿಸಿಎಲ್‌ಗೆ ಈ ಕ್ಷೇತ್ರದ ಮಾರುಕಟ್ಟೆ ವಿಸ್ತರಣೆಗೂ ಅನುಕೂಲ. ವಿಲೀನದಿಂದ ಎಂಆರ್‌ಪಿಎಲ್ ಹೆಸರು ಕಣ್ಮರೆಯಾಗಬಹುದೇ?
ವಿಲೀನದ ಬಳಿಕವೂ ಎಂಆರ್‌ಪಿಎಲ್‌ನ ಬ್ರ್ಯಾಂಡ್ ಮುಂದುವರಿಯುವ ವಿಶ್ವಾಸವಿದೆ. ಸಾಮಾನ್ಯವಾಗಿ ಖರೀದಿಸುವ ಕಂಪೆನಿಯು ಮಾರಾಟವಾದ ಕಂಪೆನಿಯ ಬ್ರ್ಯಾಂಡ್ ಬಗ್ಗೆ ನಿರ್ಧರಿಸುತ್ತದೆ. ಹೀಗಾಗಿ ಎಂಆರ್‌ಪಿಎಲ್ ಹೆಸರು ಮಾಯವಾದರೂ ಮಂಗಳೂರು ರಿಫೈನರಿ ಎನ್ನುವ ಉತ್ಕೃಷ್ಟ ಬ್ರ್ಯಾಂಡ್ ಇಮೇಜ್ ಎಚ್‌ಪಿಸಿಎಲ್‌ನಡಿ ಮುಂದುವರಿಯಬಹುದು. ಎಚ್‌ಪಿಸಿಎಲ್ ಈ ಬ್ರ್ಯಾಂಡ್ ಬಳಸಿಕೊಂಡು ಗುಣಮಟ್ಟದ ಉತ್ಪನ್ನಗಳೊಂದಿಗೆ ಮಂಗಳೂರು ರಿಫೈನರಿಯನ್ನು ಇನ್ನಷ್ಟು ಬೆಳೆಸಬಹುದು. ಗಗನಕ್ಕೇರುತ್ತಿರುವ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಗೆ ಪರ್ಯಾಯ ವ್ಯವಸ್ಥೆ ಏನು?
ಪೆಟ್ರೋಲ್-ಡೀಸೆಲ್ ಬೆಲೆ ಕಚ್ಚಾ ತೈಲದ ಬೆಲೆಯಲ್ಲಿ ಆಗುವ ಏರಿಳಿತ ವನ್ನು ಅವಲಂಬಿಸಿರುತ್ತದೆ. ಕೇಂದ್ರ ಸರಕಾರ ಪರ್ಯಾಯ ಶುದ್ಧ ಇಂಧನಗಳ ಬಳಕೆಗೆ ಒತ್ತು ನೀಡುತ್ತಿದೆ. ಎಲ್ಲರೂ ನೈಸರ್ಗಿಕ ಗ್ಯಾಸ್ ಬಳಕೆಗೆ ಪರಿ ವರ್ತನೆ ಹೊಂದಿ ಪೆಟ್ರೋಲ್- ಡೀಸೆಲ್ ಬಳಕೆ ಕಡಿಮೆ ಮಾಡಬೇಕಿದೆ. ಆದರೂ ಜನರು ಪೆಟ್ರೋಲ್- ಡೀಸೆಲ್ ಬಳಕೆಗೆ ಒತ್ತು ನೀಡುತ್ತಿದ್ದಾರಲ್ಲವೇ?
ನಾವು ಎಷ್ಟು ವರ್ಷ ವಿದೇಶಗಳ ಆರ್ಥಿಕತೆ, ರಾಜಕೀಯ ಸ್ಥಿತ್ಯಂತರ ಆಧರಿಸಿ ಪೆಟ್ರೋಲ್-ಡೀಸೆಲ್ ಬೆಲೆ ಅವ ಲಂಬಿಸಿ ಇರಲು ಸಾಧ್ಯ? ಇನ್ನು ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಗ್ಯಾಸ್ ಬಳಕೆಗೆ ಬೇಕಾದ ಮೂಲಸೌಕರ್ಯ ಸಿದ್ಧವಾಗಲಿದೆ. ಆಗ ಈಗಿನ 80 ರೂ. ಬದಲಿಗೆ 40 ರೂ.ಗೆ ಇಂಧನ ಲಭಿಸಲಿದೆ. ಪೆಟ್ರೋ ಕೆಮಿಕಲ್‌ಗಳ ಉತ್ಪಾದನೆ ಯಲ್ಲಿ ಭಾರತ ಸ್ವಾವಲಂಬಿ ಆಗ ಬಹುದೇ?
ಕಚ್ಚಾ ತೈಲದಿಂದ ಅಧಿಕ ಮೌಲ್ಯಯುತ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾ ದನೆಗೆ ಒತ್ತು ನೀಡಿದರೆ, ಇನ್ನು 15 ವರ್ಷಗಳಲ್ಲಿ ನಮ್ಮ ದೇಶವೂ ಸ್ವಾವಲಂಬಿಯಾಗಬಹುದು. ಪ್ರತಿಷ್ಠಿತ ಕಂಪೆನಿಗೆ ಮುಖ್ಯಸ್ಥರಾಗಿರುವುದು ಕನ್ನಡಿಗರಾಗಿ ಹೆಮ್ಮೆಯಲ್ಲವೇ?
ಎಂಆರ್‌ಪಿಎಲ್ ದೇಶದಲ್ಲೇ ಅತಿ ಹೆಚ್ಚು ಸಾಮರ್ಥ್ಯದ ತೈಲ ಸಂಸ್ಕರಣ ಘಟಕ ವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ. ಉತ್ಪನ್ನಗಳ ಗುಣಮಟ್ಟ ಹಾಗೂ ಉದ್ಯೋಗಿಗಳ ಬದ್ಧತೆ ಇದಕ್ಕೆ ಕಾರಣ. ಮೈಸೂರಿನಲ್ಲಿ ಜನಿಸಿದ ನಾನು 1994ರಲ್ಲಿ ಕಂಪೆನಿ ಸೇರಿದೆ. ಒಬ್ಬ ಕನ್ನಡಿಗನಾಗಿ ಇದರ ಚುಕ್ಕಾಣಿ ಹಿಡಿದಿರುವುದು ಹೆಮ್ಮೆಯೇ. ಇಲ್ಲೇ ಕೆಲಸ ಪ್ರಾರಂಭಿಸಿದ್ದ ನಿಮಗೆ ಇಷ್ಟು ಉನ್ನತ ಹುದ್ದೆಗೇರುವ ಕನಸು ಇತ್ತೇ?
ಖಂಡಿತ ಇರಲಿಲ್ಲ. ನನಗೆ ಇದ್ದದ್ದು ಒಂದೇ ಗುರಿ- ಎಂಆರ್‌ಪಿಎಲ್ ದೇಶದಲ್ಲೇ ಒಂದು ಮಾದರಿ ತೈಲಾಗಾರ ಆಗಬೇಕೆನ್ನುವುದು. ಈಗ ಉತ್ಪನ್ನಗಳ ಗುಣಮಟ್ಟದಿಂದ ಹಿಡಿದು ಸಂಸ್ಕರಣ ಸಾಮರ್ಥ್ಯದವರೆಗೆ ದೇಶದಲ್ಲೇ ಮುಂಚೂಣಿಯಲ್ಲಿದೆ. ದೇಶದ ಆರ್ಥಿಕ ಬೆಳವಣಿಗೆ ಹಾಗೂ ರಕ್ಷಣೆಯ ದೃಷ್ಟಿಯಿಂದ ಎಂಆರ್‌ಪಿಎಲ್ ಒಂದು ಮಹತ್ವದ ಕಂಪೆನಿ. ಟಾರ್ ಅನ್ನು ಪೆಟ್ರೋಲ್-ಡೀಸೆಲ್ ಆಗಿ ಪರಿವರ್ತಿಸಲು ಸಾಧ್ಯವೇ?
ಹೌದು, ನಾವು ಕಚ್ಚಾ ತೈಲ ಸಂಸ್ಕರಿಸುವಾಗ ಟಾರ್ ಅಥವಾ ಡಾಂಬರು ಲಭಿಸುತ್ತದೆ. ಇದನ್ನೂ ಎಲ್‌ಪಿಜಿಯಾಗಿ ಪರಿವರ್ತಿಸಬಹುದು. ಅದರಿಂದಲೂ ಪಾಲಿ ಪ್ರೊಪಿಲೀನ್ ಉತ್ಪಾದಿಸಬಹುದು. ಈಗ ಕಚ್ಚಾ ತೈಲ ಸಂಸ್ಕರಣೆಯ ಉಪ ಉತ್ಪನ್ನವಾಗಿ ಸಿಗುತ್ತಿರುವ ಟಾರ್ ಅನ್ನು ಕೇವಲ ರಸ್ತೆ ನಿರ್ಮಾಣಕ್ಕೆ ಬಳಸುತ್ತಿದ್ದೇವೆ. ಆದರೆ ಇದರಿಂದಲೂ ಅತಿ ಉತ್ಕೃಷ್ಟ ಹಾಗೂ ಹೆಚ್ಚಿನ ಮೌಲ್ಯದ ಪೆಟ್ರೋಲ್- ಡೀಸೆಲ್ ಉತ್ಪಾದಿಸಬಹುದು. ಎಂಆರ್‌ಪಿಎಲ್ ಸಹ ಈ ನಿಟ್ಟಿನಲ್ಲೇ ಹೆಚ್ಚಿನ ಸಂಶೋಧನೆ-ಬಂಡವಾಳ ಹೂಡಿಕೆ ಮಾಡುತ್ತಿದೆ.
ಕಂಪೆನಿಯ ಉತ್ಪಾದನಾ ಸಾಮರ್ಥ್ಯ ಈಗ ಹೇಗಿದೆ?
ಮೂರು ಹಂತಗಳಲ್ಲಿ ವಿಸ್ತರಣೆ ಗೊಂಡಿರುವ ಕಂಪೆನಿ, ವಾರ್ಷಿಕ ಒಟ್ಟು 1.6 ಕೋಟಿ ಮೆಟ್ರಿಕ್ ಟನ್ ತೈಲ ಸಂಸ್ಕರಣ ಸಾಮರ್ಥ್ಯ ಹೊಂದಿದೆ. ಇಷ್ಟು ಬೃಹತ್ ಸಂಸ್ಕರಣ ಸಾಮರ್ಥ್ಯ ಹೊಂದಿರುವ ಸಂಸ್ಕರಣಾಗಾರ ದೇಶ ದಲ್ಲಿ ಇನ್ನೊಂದಿಲ್ಲ. ಈಗ ವಾರ್ಷಿಕ ಸುಮಾರು 60-70 ಲಕ್ಷ ಟನ್ ಡೀಸೆಲ್, 10.2 ಲಕ್ಷ ಟನ್ ಪೆಟ್ರೋಲ್ ಹಾಗೂ 10 ಲಕ್ಷ ಟನ್ ಎಲ್‌ಪಿಜಿ ಉತ್ಪಾದಿಸುತ್ತಿದೆ. ವಾರ್ಷಿಕ ಸುಮಾರು 60 ಸಾವಿರ ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಿ, ಕರ್ನಾಟಕದ ಪೆಟ್ರೋಲ್- ಡೀಸೆಲ್ ಬೇಡಿಕೆಯ ಶೇ.75ರಷ್ಟು ಪೂರೈಸುತ್ತಿದೆ. ಮುಂದಿರುವ ಹೊಸ ಯೋಜನೆಗಳೇನು?
ಪೆಟ್ರೋಲ್-ಡೀಸೆಲ್ ಇಂಧನದ ಗುಣಮಟ್ಟವನ್ನು ಭಾರತ್ ಸ್ಟೇಜ್-6 (ಬಿಎಸ್- 6) ಗ್ರೇಡ್‌ಗೆ ಹೆಚ್ಚಿಸುವುದೇ ನಮ್ಮ ಸದ್ಯದ ಗುರಿ. ದೇಶದಲ್ಲಿ ಸೀಸ ಮುಕ್ತ ಪೆಟ್ರೋಲ್- ಡೀಸೆಲ್ ಕೊಡಬೇಕೆಂಬ ನಿಯಮ ಬಂದದ್ದು 2000ದಲ್ಲಿ. ಆದರೆ ನಾವು 1996ರಿಂದಲೇ ಸೀಸಮುಕ್ತ ಇಂಧನ ಉತ್ಪಾದಿಸುತ್ತಿದ್ದೇವೆ. ಬಿಎಸ್-4 ಗ್ರೇಡ್ ಇಂಧನವನ್ನು ದೇಶದಲ್ಲೇ ಮೊತ್ತಮೊದಲು ಸರಬರಾಜು ಮಾಡಿದ್ದು ಎಂಆರ್‌ಪಿಎಲ್. ಅದೇ ರೀತಿ 2020ರ ಎಪ್ರಿಲ್‌ನಿಂದ ಗ್ರಾಹಕರಿಗೆ ಬಿಎಸ್-6 ಗ್ರೇಡ್ ಇಂಧನ ದೊರೆಯಬೇಕಿದೆ. ಈಗ ನಾವೂ ಬಿಎಸ್-6 ಇಂಧನ ಉತ್ಪಾದನೆ ಯೋಜನೆ ಕೈಗೆತ್ತಿಕೊಂಡಿದ್ದು, 1,800 ಕೋಟಿ ರೂ.ಗಳನ್ನು ಹೂಡಲಾಗುತ್ತಿದೆ. ಇನ್ನು ಪಾಲಿ ಪ್ರೊಪಿಲೀನ್ ಘಟಕದ ಉತ್ಪಾದನೆ ಸಾಮರ್ಥ್ಯವನ್ನೂ 1.6 ಕೋಟಿ ಮೆ. ಟನ್‌ಗಳಿಂದ 1.8 ಕೋಟಿ ಮೆ. ಟನ್‌ಗೆ ಹೆಚ್ಚಿಸುವ ಗುರಿಯಿದೆ. ಸುರೇಶ್ ಪುದುವೆಟ್ಟು