ಹೊಸದಿಲ್ಲಿ: ದೇಶದ ಸೇನಾಪಡೆಗಳನ್ನು ಮತ್ತಷ್ಟು ಆಧುನೀಕರಣ ಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ. ಅದಕ್ಕೆ ಪೂರಕವಾಗಿ ಭೂಸೇನೆ ಏಕೀಕೃತ ಯುದ್ಧ ಗುಂಪು (ಇಂಟೆಗ್ರೇಟೆಡ್ ಬ್ಯಾಟಲ್ ಗ್ರೂಪ್) ರಚಿಸಲು ನಿರ್ಧರಿಸಿದೆ. ಈ ಬಗ್ಗೆ ಭೂಸೇನಾ ಮುಖ್ಯಸ್ಥ ಜ| ಎಂ. ಎಂ.ನರವಣೆ ಹೇಳಿದ್ದಾರೆ. ಮುಂದಿನ ವರ್ಷ ಮೊದಲ ಇಂಥ ಗುಂಪು ರಚನೆಯಾಗುವ ಸಾಧ್ಯತೆ ಇದೆ.
ಇಂಥ ಒಂದು ಏಕೀಕೃತ ಯುದ್ಧ ಗುಂಪಿನಲ್ಲಿ ಸರಿ ಸುಮಾರು 5 ಸಾವಿರ ಯೋಧರು ಇರುತ್ತಾರೆ. ಅದರಲ್ಲಿ ಕಾಲಾಳುಗಳು, ಯುದ್ಧ ಟ್ಯಾಂಕ್‌ಗಳು, ಫಿರಂಗಿ, ವೈರಿ ಸೇನೆಯಿಂದ ಬರುವ ಕ್ಷಿಪಣಿಗಳನ್ನು ನಿರೋಧಿಸುವ ಸಿಬಂದಿ, ಸಿಗ್ನಲ್‌ಗಳು ಮತ್ತು ಎಂಜಿನಿಯರ್‌ಗಳು ಇರುತ್ತಾರೆ. ಅವರೆಲ್ಲರೂ ಒಂದೇ ಗುಂಪಿನಲ್ಲಿ ಶಾಶ್ವತವಾಗಿ ಇರುತ್ತಾರೆ.
ಮುಂಬರುವ ವರ್ಷಗಳಲ್ಲಿ ಉಂಟಾಗಬಹುದಾದ ಸಂಭಾವ್ಯ ಯುದ್ಧಗಳನ್ನು ಇದೇ ರೀತಿಯಲ್ಲಿ ಎದುರಿಸಬೇಕಾಗಬಹುದು. ಅದಕ್ಕೆ ದೇಶದ ಸೇನೆಯನ್ನು ಸಿದ್ಧಗೊಳಿಸಲಾಗುತ್ತದೆ ಎಂದು ಭೂಸೇನಾ ಮುಖ್ಯಸ್ಥ ಜ| ನರವಣೆ ಹೇಳಿದ್ದಾರೆ. ಪಾಕಿಸ್ಥಾನ ಮತ್ತು ಚೀನದ ಸವಾಲು ಎದುರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಆಂತರಿಕವಾಗಿ ಹಲವು ಚರ್ಚೆಗಳೂ ಮುಂದುವರಿದಿವೆ ಎಂದು ಹೇಳಿದ್ದಾರೆ ಭೂಸೇನಾ ಮುಖ್ಯಸ್ಥ.
ಚೀನ ವಿರುದ್ಧ ನಿಗಾ: ಪಾಕಿಸ್ಥಾನವನ್ನು ಗುರಿಯಾಗಿರಿಸಿಕೊಂಡು ರಚಿಸುವ ಏಕೀಕೃತ ಯುದ್ಧ ಗುಂಪಿನಲ್ಲಿ ಯುದ್ಧ ಟ್ಯಾಂಕ್, ಫಿರಂಗಿಗಳು ಇರಲಿದ್ದು, ರಾಜಸ್ಥಾನ ಮತ್ತು ಪಂಜಾಬ್‌ಗಳನ್ನು ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸಲಿದೆ. ಚೀನ ವಿರುದ್ಧ ನಿಗಾ ಇರಿಸಲೂ ಇದೇ ಮಾದರಿಯ ಗುಂಪು ರಚಿಸಲಾಗುತ್ತದೆ. ಜತೆಗೆ 8-10 ಇಂಥ ಯುದ್ಧ ಗುಂಪುಗಳು ಇರಲಿವೆ. ಇದರ ಜತೆಗೆ ದೇಶದಲ್ಲಿ ಒಟ್ಟು ಐದು ಥಿಯೇಟರ್ ಕಮಾಂಡ್‌ಗಳನ್ನು ಸ್ಥಾಪಿಸಲು ಈಗಾಗಲೇ ನಿರ್ಧರಿಸಲಾಗಿದೆ.