Advertisement

9 ವರ್ಷದ ಮಗಳ 4ನೇ ಮಹಡಿಯಿಂದ ಎಸೆದು ಕೊಂದ ತಾಯಿ!

11:44 AM Aug 28, 2017 | Team Udayavani |

ಬೆಂಗಳೂರು: ಹೆತ್ತ ತಾಯಿಯೇ ತನ್ನ 9 ವರ್ಷದ ಬುದ್ಧಿಮಾಂದ್ಯ ಪುತ್ರಿಯನ್ನು ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಎಸೆದು ಕೊಂದಿರುವ ಘಟನೆ ಜರಗನಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಹೃದಯ ಕಲಕುವ ವಿಷಯವೇನೆಂದರೆ ಮೊದಲ ಬಾರಿ ನಾಲ್ಕನೇ ಮಹಡಿಯಿಂದ ಮಗುವನ್ನು ಎಸೆದಾಗ ಮಗು ಜೀವಂತವಾಗಿದ್ದುದನ್ನು ಗಮನಿಸಿದ ತಾಯಿ, ಮತ್ತೆ ಮೇಲೆ ಹೊತ್ತೂಯ್ದು ಎರಡನೇ ಬಾರಿ ಎಸೆದಿದ್ದಾಳೆ!

Advertisement

ಒಂಬತ್ತು ವರ್ಷದ ಬಾಲಕಿ ಶ್ರಾವ್ಯ ಸ್ಥಳದಲ್ಲಿಯೇ ಅಸುನೀಗಿದ್ದು, ಬಾಲಕಿಯ ತಾಯಿ ಪಶ್ಚಿಮ ಬಂಗಾಳ ಮೂಲದ ಸ್ವಾತಿ ಹಾಗೂ ಆಕೆಯ ಪತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಗಳನ್ನು ಕೊಲೆಗೈದಿರುವ ತಾಯಿ ಸ್ವಾತಿ ಖನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.

ಭಾನುವಾರ ಮಧ್ಯಾಹ್ನ 3-30ರ ಸುಮಾರಿಗೆ ಸ್ವಾತಿ ವಾಸವಿದ್ದ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಕೆಳಗಡೆ ಏನೋ ಬಿದ್ದ ಸದ್ದಾಗಿದೆ. ಇದರಿಂದ ಗಾಬರಿಯಾದ ಅಕ್ಕ ಪಕ್ಕದ ಮನೆಯ ನಿವಾಸಿಗಳು ಹೊರಗಡೆ ಬಂದು ನೋಡುವಷ್ಟರಲ್ಲಿ. ವಿಲ ವಿಲ ಒದ್ದಾಡುತ್ತಿದ್ದ ಮಗಳನ್ನು ಸ್ವಾತಿಯೇ ಮೆಲಕ್ಕೆತ್ತಿಕೊಂಡು ಹೋಗಿದ್ದಾರೆ.

ಮೂರನೇ ಮಹಡಿಗೆ ಹೋದ ಕೂಡಲೇ, ಪುನ: ಮಗಳು ಶ್ರಾವ್ಯಾಳನ್ನು ಕೆಳಕ್ಕೆ ಎಸೆದಿದ್ದಾರೆ.ಕೆಲವೇ ನಿಮಿಷಗಳ ಅಂತರದಲ್ಲಿ ನಡೆದ ಈ ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ದಿಗ್ಬ್ರಾಂತರಾಗಿ ಶ್ರಾವ್ಯಾ ಬಿದ್ದ ಸ್ಥಳಕ್ಕೆ ಓಡಿಹೋಗಿ ಮೇಲಕ್ಕೆತ್ತುವಷ್ಟರಲ್ಲಿ, ತೀವ್ರ ರಕ್ತಸ್ರಾವದಿಂದ ಶ್ರಾವ್ಯ ಕೊನೆಯುಸಿರೆಳೆದಿದ್ದಾಳೆ.

ಘಟನಾ ಸ್ಥಳಕ್ಕೆ ಬಂದ ಸ್ವಾತಿಯನ್ನು ಕಂಡು ಆಕ್ರೋಶಭರಿತರಾದ ಕೆಲವರು, ಸ್ವಾತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಹಗ್ಗದಿಂದ ಹತ್ತಿರದಲ್ಲಿದ್ದ ಲೈಟ್‌ ಕಂಬಕ್ಕೆ ಕಟ್ಟಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದ್ದಾರೆ. ಹಲ್ಲೆಯಿಂದ ನಿತ್ರಾಣಳಾದ ಸ್ವಾತಿ ಕೂಡ ಬಿದ್ದುಬಿಟ್ಟಿದ್ದಾಳೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿ ಸ್ವಾತಿಯನ್ನು ವಶಕ್ಕೆ ಪಡೆದುಕೊಂಡು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ.

Advertisement

ಮೈಯೆಲ್ಲಾ ಬಾಸುಂಡೆ
ಶ್ರಾವ್ಯಾಳ ಮೃತ ದೇಹದ ತುಂಬಾ ಬಾಸುಂಡೆ ಬಂದಿದ್ದು. ಅಲ್ಲಲ್ಲಿ ಬೊಬ್ಬೆ ಕೂಡ ಎದ್ದಿದ್ದವು. ಬರೀ ಮೈಯಲ್ಲಿದ್ದ ಶ್ರಾವ್ಯಾ, ಸುಮಾರು 40 ಅಡಿ ಎತ್ತರದಿಂದ ಎರಡು ಬಾರಿ ಕೆಳಗೆ ಬಿದ್ದಿದ್ದು, ಬಿದ್ದ ರಭಸಕ್ಕೆ ಬಲವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪತಿ ತೊರೆದು ಹೋಗಿದ್ದ
ಪಶ್ಚಿಮ ಬಂಗಾಳದ ಮೂಲದ ಸ್ವಾತಿ ಹತ್ತು ವರ್ಷಗಳ ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಕಾಂಚನ್‌ನಂಕರ್‌ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದಳು. ದಂಪತಿಗೆ ಶ್ರೇಯಾ ಒಬ್ಬಳೇ ಮಗಳು. ಆದರೆ ಶ್ರಾವ್ಯಾಳಿಗೆ ಸರಿಯಾಗಿ ಮಾತು ಬರದೇ ಬುದ್ಧಿ ಶಕ್ತಿಯೂ ಕುಂಠಿತವಾಗಿತ್ತು. ಕಳೆದ ಆರು ವರ್ಷಗಳಿಂದ ಜೆಪಿ ನಗರದ ಜರಗರನಹಳ್ಳಿ ಶ್ರೀರಾಮ ದೇವಸ್ಥಾನದ ಬಳಿ ನಾಲ್ಕಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಮೂರನೇ ಮಹಡಿಯ ಮನೆಯೊಂದರಲ್ಲಿ  ದಂಪತಿ ವಾಸವಿದ್ದರು.

ಸರಿಯಾಗಿ ಮಾತು ಬರದ ಬುದ್ದಿಯೂ ಬೆಳೆಯದ ಶ್ರಾವ್ಯಾಳನ್ನು ಶಾಲೆಗೆ ಸೇರಿಸಿರಲಿಲ್ಲ. ಈ ಮಧ್ಯೆ ಕೌಟುಂಬಿಕ ಮೈಮನಸ್ಸಿನ ಹಿನ್ನೆಲೆಯಲ್ಲಿ ಕೆಲ ವರ್ಷಗಳ ಹಿಂದೆ ಪತ್ನಿ ಸಾಂಗತ್ಯ ತೊರೆದ ಕಾಂಚನಂಕರ್‌, ಪತ್ನಿ ಹಾಗೂ ಮಗಳನ್ನು ಬಿಟ್ಟು ಇಂದಿರಾನಗರದಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದರು.

ಶಿಕ್ಷಕಿಯಾಗಿದ್ದ ಸ್ವಾತಿ
ಈ ಮೊದಲು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಸ್ವಾತಿ, ಪತಿ ದೂರವಾದ  ಮೇಲೆ ಖನ್ನತೆಗೆ ಒಳಗಾದಂತೆ ಕಂಡು ಬರುತ್ತಿದ್ದರು. ಅಕ್ಕ-ಪಕ್ಕದ ನಿವಾಸಿಗಳೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಮಾನಸಿಕ ನ್ಯೂನ್ಯತೆಯಿಂದ ಬಳಲುತ್ತಿದ್ದ ಮಗಳನ್ನು ಶಾಲೆಗೆ ಕಳುಹಿಸಲಾಗದೇ ಚಿಂತೆಯಲ್ಲಿ ಮುಳುಗಿದಂತೆ ಕಂಡರೂ, ಮನೆಯ ಬಾಗಿಲು ಹಾಕಿಕೊಂಡು  ಮಗಳಿಗೆ ಹೊಡೆಯುತ್ತಿದ್ದಳು ಎಂದ  ಸ್ಥಳೀಯರು ಮಾಹಿತಿ ನೀಡಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next