Advertisement
ಇಲ್ಲಿ ಹದಿನೆಂಟನೇ ಶತಮಾನದ ದಶಕಗಳನ್ನ ಮತ್ತೆ ಮರುಕಳಿಸಿರುವ ಶ್ರಮವಿದೆ. ಮರು ಪೀಳಿಗೆಗೆ ದೊಡ್ಡ ದಾಖಲೆಯಾಗುವಂತಹ ಚಿತ್ರಣವಿದೆ. ಕೇವಲ ಕಾದಂಬರಿ ನಿಷ್ಠೆ ಅಲ್ಲ, ಇಲ್ಲಿ ಚಿಂತನೆ ಇದೆ. ಚಿಂತನೆ ಮೂಲಕ ಅಸಂಗತವನ್ನು ತೆರೆ ಮೇಲೆ ದಾಖಲಿಸಿ, ಮತ್ತೆ ಹಾಗಾಗದಿರಲಿ ಎಂಬ ಆಶಯ ಸದೃಢವಾಗಿದೆ. ಇವೆಲ್ಲಾ ಕಾರಣಕ್ಕೆ “ಸಾವಿತ್ರಿ ಬಾಯಿ ಫುಲೆ’ ಒಂದು ಮನತಟ್ಟುವ, ಮಿಡಿಯುವ ಚಿತ್ರವಾಗಿ ಕಾಣುತ್ತೆ. ಒಂದು ಚಿತ್ರ ಆಳವಾಗಿ ಬೇರೂರಬೇಕಾದರೆ, ಅದಕ್ಕೆ ಗಟ್ಟಿ ಕಥೆಯ ಅಡಿಪಾಯ ಮುಖ್ಯ.
Related Articles
Advertisement
ಕಥೆಗೆ ಪೂರಕವಾದ ಪಾತ್ರಗಳು, ಅವುಗಳ ಮಾತು, ಶೈಲಿ, ತಾಣ, ಹಾಡು, ಹಿನ್ನೆಲೆ ಸಂಗೀತ ಮತ್ತು ಅದರೊಂದಿಗೇ ಸಾಗುವ ದೃಶ್ಯಗಳನ್ನು ಅಷ್ಟೇ ಜಾಣತನದಿಂದ ತೆರೆ ಮೇಲೆ ಅನಾವರಣಗೊಳಿಸುವ ಮೂಲಕ ಇಡೀ ಆಶಯದ ಹೂರಣ ಬಡಿಸಿರುವ ಪ್ರಯತ್ನ ಮೆಚ್ಚಲೇಬೇಕು. ಪತಿ ಸತ್ತರೆ, ಸತಿಯೂ ಚಿತೆಯೊಂದಿಗೆ ಭಸ್ಮವಾಗಬೇಕು ಎಂಬ ಅನಿಷ್ಟ ಪದ್ಧತಿ ವಿರುದ್ಧ “ಸಾವಿತ್ರಿಬಾಯಿ ಫುಲೆ’ ಚಿಕ್ಕಂದಿನಿಂದಲೇ ಹೋರಾಟಕ್ಕಿಳಿಯುತ್ತಾಳೆ. ಆ ಊರ ಮೇಲ್ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗುತ್ತಾಳೆ.
ಮದುವೆ ಬಳಿಕ ಪತಿ ಜ್ಯೋತಿಬಾ ಫುಲೆ ಹೇಳಿಕೊಡುವ ಅಕ್ಷರ ಕಲಿತು ದಮನಿತರ ಪರ ನಿಲ್ಲುತ್ತಾಳೆ. ಹೆಣ್ಮಕ್ಕಳು ಓದು ಕಲಿಯುವಂತಿಲ್ಲ ಎನ್ನುವ ಪುರೋಹಿತಶಾಹಿಗಳ ವಿರುದ್ಧ ತಿರುಗಿ ಬೀಳುತ್ತಾಳೆ. ಪತ್ನಿಯ ಹೋರಾಟಕ್ಕೆ ಪತಿ ಜ್ಯೋತಿಬಾ ಫುಲೆ ಸಾಥ್ ಕೊಡುತ್ತಾರೆ. ಅಲ್ಲಿಂದ ಬ್ರಾಹ್ಮಣರ ವಿರುದ್ಧ ಹೋರಾಟ ಶುರುಮಾಡುತ್ತಾರೆ. ಹೆಣ್ಮಕ್ಕಳಿಗೂ ಅಕ್ಷರ ಕಲಿಸೋ ಮಟ್ಟಕ್ಕೆ ನಿಲ್ಲುತ್ತಾರೆ. ಮೇಲ್ವರ್ಗ ಅವರನ್ನು ಬಹಿಷ್ಕರಿಸುತ್ತೆ, ಕೆಲವರು ಅವರ ಪರ ನಿಂತು, ಅವರ ಆಶಯಗಳಿಗೆ ಹೆಗಲು ಕೊಡುತ್ತಾರೆ.
ಇಡೀ ಊರೇ ಅವರ ಬೆನ್ನಿಗೆ ನಿಲ್ಲುತ್ತದೆ. ಆಚಾರ, ವಿಚಾರ ವಿರುದ್ಧ ಹೋರಾಡುವ ಸಾವಿತ್ರಿಬಾಯಿ ಫುಲೆ ಅವರ ಕ್ರಾಂತಿಕಾರಿ ಬದಲಾವಣೆಗಳಿಂದ ಏನೆಲ್ಲಾ ಸುಧಾರಣೆಯಾಗುತ್ತೆ ಎನ್ನುವುದೇ ಚಿತ್ರದ ಸಾರಾಂಶ. ತಾರಾ ಅವರು ಸಾವಿತ್ರಿಯಾಗಿ ಮರು ಜೀವಿಸಿದ್ದಾರೇನೋ ಅನ್ನುವಷ್ಟರ ಮಟ್ಟಿಗೆ ಪಾತ್ರ ಕಟ್ಟಿಕೊಟ್ಟಿದ್ದಾರೆ. ಅವರ ಮಾತು, ಭಾವನೆ, ಭಾವುಕತೆ ಎಲ್ಲವೂ ಪಾತ್ರದ ಚೌಕಟ್ಟಿಗೆ ಸ್ಪಂದಿಸಿವೆ. ಸುಚೇಂದ್ರ ಪ್ರಸಾದ್ ಅವರ ಅಭಿನಯ ಕೂಡ ನೆನಪಲ್ಲುಳಿಯುವಂತಿದೆ.
ಉಳಿದಂತೆ ಬರುವ ಪ್ರತಿ ಪಾತ್ರವೂ ಪೂರಕವಾಗಿವೆ. ಈ ಚಿತ್ರಕ್ಕೆ ಕೆಂಪರಾಜು ಅವರ ಸಂಕಲನ ಖುಷಿಕೊಡುತ್ತೆ. ಎಲ್ಲವನ್ನೂ ಸರಿಯಾಗಿ ಸಂಕಲಿಸಿ, ವ್ಯವಕರಿಸಿರುವುದು ಕಾಣುತ್ತದೆ. ಸಂಗೀತ ಕಟ್ಟಿ ಕುಲಕರ್ಣಿ ಸಂಗೀತ ಚಿತ್ರದ ಶೃಂಗಾರ. ಡಾ.ನಾಗರಾಜ್ ಕಲಾನಿರ್ದೇಶನ ಕೂಡ ಆಗಿನ ಶತಮಾನಕ್ಕೆ ದೂಡುವಂತಿದೆ. ಶಿರೀಷ ಜೋಶಿ ಸಂಭಾಷಣೆ ಚಿತ್ರಕ್ಕೆ ಇನ್ನೊಂದು ಶಕ್ತಿ. ಇಡೀ ಚಿತ್ರ ಆ ಕಾಲಕ್ಕೆ ಕರೆದುಕೊಂಡು ಹೋಗುವುದಕ್ಕೆ ಕಾರಣ ನಾಗರಾಜ್ ಆದವಾನಿ ಛಾಯಾಗ್ರಹಣ.
ಚಿತ್ರ: ಸಾವಿತ್ರಿಬಾಯಿ ಫುಲೆನಿರ್ಮಾಣ: ಬಸವರಾಜ್ ವಿ. ಭೂತಾಳಿ
ನಿರ್ದೇಶನ: ವಿಶಾಲ್ ರಾಜ್
ತಾರಾಗಣ: ತಾರಾ, ಸುಚೇಂದ್ರ ಪ್ರಸಾದ್, ಶ್ರೀಪತಿ ಮಂಜನಬೈಲು, ತನುಜ, ಮಹಾಂತೇಶ ಗಜೇಂದ್ರಗಢ, ಆದೇಶ ಏಣಗಿ, ಮೃತ್ಯುಂಜಯ ಹಿರೇಮಠ ಮುಂತಾದವರು * ವಿಜಯ್ ಭರಮಸಾಗರ